ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ದುಡಿಯುವ ವರ್ಗ ಕಡೆಗಣಿಸಿದ ಕೇಂದ್ರ ಸರ್ಕಾರ:ಎಐಕೆಕೆಎಂಎಸ್

ಬಜೆಟ್ ಖಂಡಿಸಿ ಧರಣಿ ನಡೆಸಿದ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ
Last Updated 4 ಫೆಬ್ರುವರಿ 2023, 6:52 IST
ಅಕ್ಷರ ಗಾತ್ರ

ಧಾರವಾಡ: ಕೇಂದ್ರ ಸರ್ಕಾರ ಮಂಡಿಸಿರುವ ರೈತ ವಿರೋಧಿ, ಕೃಷಿ ಕಾರ್ಮಿಕ ವಿರೋಧಿ ಬಜೆಟ್ ಮಂಡಿಸಿದ್ದು, ದುಡಿಯುವ ವರ್ಗವನ್ನು ಕೇಂದ್ರದ ಬಿಜೆಪಿ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ‘ಈ ಬಜೆಟ್ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ರೈತರು ಹಾಗೂ ಕೃಷಿ ಕಾರ್ಮಿಕರ ಬಗ್ಗೆಇರುವ ಧೋರಣೆಗೆ ಕನ್ನಡಿ ಹಿಡಿದಂತಿದೆ. ಈ ಸಮಯದಲ್ಲಿ ಇದೇ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಬಜೆಟ್ ಅನುದಾನವನ್ನು ವಿಪರೀತವಾಗಿ ಏರಿಸಿದೆ. ಈ ಬಜೆಟ್ ಸಾಮಾನ್ಯ ರೈತರು ಹಾಗೂ ಕೃಷಿ ಕಾರ್ಮಿಕರ ಮೇಲೆ ಹೆಚ್ಚಿನ ಹೊರೆಯನ್ನು ಹೇರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ’ ಎಂದರು.

‘ದೇಶದ ರೈತರು ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು ಮತ್ತು ಸರ್ಕಾರ ಉತ್ಪಾದನಾ ವೆಚ್ಚದ ಶೇ 150ರಷ್ಟು ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಈ ‘ನವಭಾರತ‘ದ ಬಜೆಟ್ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತಪಡಿಸಲು ಇದ್ದ ಪಿಎಂ–ಆಶಾ ನಿಧಿಯನ್ನು ಸಂಪೂರ್ಣವಾಗಿ ತೊಳೆದುಬಿಟ್ಟಿದೆ. ರೈತ ಸಂಘಟನೆಗಳು ಗ್ರಾಮೀಣ ಬಡ ಜನತೆಗೆ ವರ್ಷಪೂರ್ತಿ ಉದ್ಯೋಗ ನೀಡಬೇಕೆಂದು ಒತ್ತಾಯಿಸುತ್ತಿವೆ. ಆದರೆ ಇದೆಲ್ಲಾ ಹಕ್ಕೊತ್ತಾಯವನ್ನು ಈಡೇರಿಸುವುದಿರಲಿ, ಕೇಂದ್ರ ಬಿಜೆಪಿ ಸರ್ಕಾರವು ರೈತರನ್ನು ತುಳಿಯುವ ಮತ್ತು ದಮನ ಮಾಡುವ ಹಾದಿಯನ್ನು ಹಿಡಿದಿದೆ’ ಎಂದು ಆರೋಪಿಸಿದರು.

‘ಬಹುರಾಷ್ಟ್ರೀಯ ಕಂಪನಿಗಳ ಪರವಾದ ನೀತಿಗಳನ್ನು ಸೋಲಿಸಲು ಕಾರ್ಮಿಕ ವರ್ಗ ಹಾಗೂ ಎಲ್ಲಾ ದುಡಿಯುವ ಜನತೆ ಜತೆಗೂಡಿ ಮುಂದಿನ ದಿನಗಳಲ್ಲಿ ಅತ್ಯಂತ ಪ್ರಬಲವಾದ ರೈತ ಚಳವಳಿಯನ್ನು ಬೆಳೆಸಬೇಕು’ ಎಂದರು.

ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮಾತನಾಡಿ, ‘ಕೃಷಿ ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ಶೇ 5ರಷ್ಟು, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ಶೇ 12, ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಶೇ 13, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ 30ರಷ್ಟು ಕಡಿತ ಮಾಡಲಾಗಿದೆ. ಇಂಥ ರೈತ ಹಾಗೂ ಕಾರ್ಮಿಕ ವಿರೋಧಿ ಬಜೆಟ್‌ ಅನ್ನು ಎಐಕೆಕೆಎಂಎಸ್ ಖಂಡಿಸುತ್ತದೆ’ ಎಂದರು.

ನರೇಗಾರ ಯೋಜನೆಯಡಿ ಹೆಚ್ಚುವರಿಯಾಗಿ 50 ದಿನಗಳ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಹನುಮೇಶ ಹುಡೇದ, ಸದಸ್ಯರಾದ ಶ್ರೀದೇವಿ ದೊಡ್ಡಮನಿ, ಮಂಜುಳಾ ಜಗದಾಳಿ, ಮಂಜು, ರಿಹಾನ, ಸರಸ್ವತಿ, ಯಶೋಧಾ, ಪಾರವ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT