ಸೈಕ್ಲೋತ್ಸವ: ಹೆಸರು ನೋಂದಾಯಿಸಲು ಕೇಂದ್ರ ಆರಂಭ

7

ಸೈಕ್ಲೋತ್ಸವ: ಹೆಸರು ನೋಂದಾಯಿಸಲು ಕೇಂದ್ರ ಆರಂಭ

Published:
Updated:
Deccan Herald

ಹುಬ್ಬಳ್ಳಿ: ಮುಂದಿನ ವರ್ಷ ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ ಗಿನ್ನಿಸ್‌ ದಾಖಲೆಗಾಗಿ ಆಯೋಜಿಸಿರುವ ಸೈಕ್ಲೋತ್ಸವದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವವರಿಗೆ ಹೆಸರು ನೋಂದಾಯಿಸಲು ಸ್ಥಳೀಯವಾಗಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‌ನ ಕಾರ್ಯದರ್ಶಿ ಬಿ. ಆನಂದ್‌  ‘ಗರಿಷ್ಠ ನಾಲ್ಕು ಸಾವಿರ ಸ್ಪರ್ಧಿಗಳು ಹೆಸರು ನೋಂದಾಯಿಸಬಹುದು. ರಾಜ್ಯ ಮತ್ತು ಹೊರರಾಜ್ಯಗಳಿಂದಲೂ ಸ್ಪರ್ಧಿಗಳು ಬರುತ್ತಾರೆ. ಆದ್ದರಿಂದ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಗಣರಾಜ್ಯೋತ್ಸವ ದಿನದಂದು ನಡೆಯುವ ಸೈಕ್ಲೋತ್ಸವದಲ್ಲಿ ದೇಶಪ್ರೇಮ ಮತ್ತು ಸೈಕಲ್‌ ಮಹತ್ವ ಸಾರುವ ಉದ್ದೇಶ ನಮ್ಮದು. ಜೊತೆಗೆ, ಗಿನ್ನಿಸ್‌ ದಾಖಲೆ ಕೂಡ ಮಾಡುವ ಗುರಿ ಹೊಂದಿದ್ದೇವೆ. ಸೈಕಲ್‌ ಹೊಡೆಯುವವರ ಬಗ್ಗೆ ಗೌರವ ಮೂಡಿಸಲು ‘ರೆಸ್ಪೆಕ್ಟ್‌ ಸೈಕ್ಲಿಸ್ಟ್‌’ ಎನ್ನುವ ಕಿರುಚಿತ್ರ ನಿರ್ಮಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಹೆಸರು ನೋಂದಾಯಿಸಿದ ಬಳಿಕ ಸ್ಪರ್ಧಿಗಳು ಎಂಟು ಕಿ.ಮೀ. ಸೈಕಲ್‌ ಓಡಿಸಲು ಸಮರ್ಥರಾಗಿದ್ದಾರೆಯೇ ಎನ್ನುವುದಕ್ಕೆ ದೈಹಿಕ ಕ್ಷಮತೆ ಪರೀಕ್ಷೆ ನಡೆಸಲಾಗುತ್ತದೆ. ಸೈಕ್ಲೋತ್ಸವ ನಡೆಯುವ ದಿನದಂದು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಡಿ. 31ರ ಒಳಗೆ ಹೆಸರು ನೋಂದಾಯಿಸಬೇಕು. ನೋಂದಣಿ ಶುಲ್ಕ ₹ 500 ಇರುತ್ತದೆ’ ಎಂದು ಹೇಳಿದರು.

ಹೆಸರು ನೋಂದಾಯಿಸಬೇಕಾದ ಕೇಂದ್ರಗಳು: ಟೆಕ್‌ ಸ್ಟೋರ್‌ (ಐಟಿ ಪಾರ್ಕ್‌), ದೀಪಕ್‌ ಸೈಕಲ್ಸ್‌ (ಕೊಪ್ಪಿಕರ ರಸ್ತೆ), ಅಮೇಜಿಂಗ್ ಬೈಕ್ಸ್‌ (ಗೋಕುಲ ರಸ್ತೆ),  ಬಾರ್ನ್‌ ಟು ಪೆಡಲ್‌ (ವಿದ್ಯಾನಗರ), ಸೆವೆನ್‌ ಬೀನ್ಸ್‌ (ವಿದ್ಯಾನಗರ), ಮಮ್ಮಾಸ್‌ ಲಂಚ್‌ ಬಾಕ್ಸ್‌ (ಜೆ.ಕೆ. ಶಾಲೆ ಹತ್ತಿರ), ಮಸಾಲಾ ರೂಮ್ (ಹಂಸ್‌ ಹೋಟೆಲ್‌). ಜುಮನ್ (ಶಿರೂರು ಪಾರ್ಕ್), ಸಂಕಲ್ಪ ಅಸೋಸಿಯೇಟ್ಸ್ (ಕ್ಲಬ್‌ ರಸ್ತೆ), ಎಸ್‌.ಎಸ್‌. ಆರ್ಕಿಟೆಕ್ಟ್‌ (ಟಿ.ಬಿ. ರಸ್ತೆ).

ಬೈಸಿಕಲ್‌ ಕ್ಲಬ್‌ ಅಧ್ಯಕ್ಷ ಶ್ರೀಕಾಂತ ದೇಶಪಾಂಡೆ, ಸ್ವರ್ಣ ಸಮೂಹ ಗ್ರೂಪ್‌ಗಳ ಅಧ್ಯಕ್ಷ ವಿ.ಎಸ್‌.ವಿ. ಪ್ರಸಾದ್‌, ಸುಷ್ಮಾ ಹಿರೇಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !