ಮಂಗಳವಾರ, ಮಾರ್ಚ್ 21, 2023
28 °C
ಹುಬ್ಬಳ್ಳಿಗೆ ‘ಛೋಟಾ ಬಾಂಬೆ’ ಖ್ಯಾತಿ ತಂದುಕೊಟ್ಟಿದ್ದ ಭಾರತ್ ಮಿಲ್‌ನ ಕುರುಹು

ಹುಬ್ಬಳ್ಳಿ: ಚರಿತ್ರೆ ಸೇರಿದ ಶತಮಾನದ ಚಿಮಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರಕ್ಕೆ ‘ಛೋಟಾ ಬಾಂಬೆ’ ಖ್ಯಾತಿಯನ್ನು ತಂದುಕೊಟ್ಟಿದ್ದ ಗಿರಣಿಚಾಳದ ಭಾರತ್ ಮಿಲ್‌ನ ಕೊನೆಯ ಕುರುಹಾಗಿ ಉಳಿದಿದ್ದ ಸುಮಾರು 160 ಅಡಿ ಎತ್ತರದ ಬೃಹತ್ ಚಿಮಣಿಯನ್ನು (ಭೋಂಗಾ) ಬುಧವಾರ ನೆಲಸಮಗೊಳಿಸಲಾಯಿತು. ಇದರೊಂದಿಗೆ 158 ವರ್ಷಗಳ ಹಿಂದಿನ ಬ್ರಿಟಿಷ್ ವಸಾಹತುಶಾಹಿಯ ಕುರುಹು ಚರಿತ್ರೆ ಸೇರಿತು.

ಬ್ರಿಟಿಷರು 1865ರಲ್ಲಿ ಸುಮಾರು 60 ಎಕರೆಯ‌ ಜಾಗದಲ್ಲಿ ಸದರನ್ ಮರಾಠ ಸ್ಪಿನ್ನಿಂಗ್ ಆ್ಯಂಡ್ ವೇವಿಂಗ್ ಕಂಪನಿ ಹೆಸರಲ್ಲಿ ಮಿಲ್ ಸ್ಥಾಪಿಸಿದ್ದರು. ಅದೇ ಮುಂದೆ, ಭಾರತ್ ಮಿಲ್ ಹಾಗೂ ಮಹಾದೇವ ಟೆಕ್ಸ್‌ಟೈಲ್ ಮಿಲ್ (ಎಂಟಿಎಂ) ಆಗಿ ಬದಲಾಗಿತ್ತು. ನಷ್ಟದ ಕಾರಣಕ್ಕಾಗಿ 1998ರಲ್ಲಿ ಬಂದ್ ಆಗಿತ್ತು.

ಸದ್ಯ ಹರಿದು ಹಂಚಿ ಹೋಗಿದ್ದ ಜಾಗ ಖಾಸಗಿಯವರ ಪಾಲಾಗಿದೆ. ಚಿಮಣಿ ಸುತ್ತಲೂ ಕುರುಚಲು ಗಿಡಗಳು ಬೆಳೆದು ಪಾಳುಬಿದ್ದ ಸ್ಥಿತಿಯಲ್ಲಿತ್ತು. ಗಾಳಿ–ಮಳೆಯಿಂದಾಗಿ ಚಿಮಣಿ ಶಿಥಿಲಗೊಂಡು ಬಿರುಕು ಕೂಡ ಬಿಟ್ಟಿತ್ತು. ಇತ್ತೀಚೆಗೆ ಜಾಗವನ್ನು ಸ್ವಚ್ಛಗೊಳಿಸಿದ್ದ ಮಾಲೀಕರು, ನಸುಕಿನ 3 ಗಂಟೆ ಹೊತ್ತಿಗೆ ಸ್ಫೋಟಕಗಳನ್ನು ಬಳಸಿ ಚಿಮಣಿ ಕೆಡವಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

‘3,500 ಕಾರ್ಮಿಕರಿದ್ದರು’

‘ನಾಲ್ಕು ಪಾಳಿಗಳಲ್ಲಿ ದಿನದ 24 ತಾಸು ಕಾರ್ಯಾಚರಣೆ ನಡೆಸುತ್ತಿದ್ದ ಮಿಲ್‌ನಲ್ಲಿ ಸುಮಾರು 3,500 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇಲ್ಲಿ ತಯಾರಾಗುತ್ತಿದ್ದ ಬಟ್ಟೆಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು’ ಎಂದು ಮಿಲ್‌ನ ಮಾಜಿ ಕಾರ್ಮಿಕ ಹನುಮಂತಪ್ಪ ಮಾಲಪಲ್ಲಿ ‘ಪ್ರಜಾವಾಣಿ’ಯೊಂದಿಗೆ ಮೆಲುಕು ಹಾಕಿದರು.

‘1981ರಲ್ಲಿ ನಾನು ಕೆಲಸಕ್ಕೆ ಸೇರಿದಾಗ ಎಂಟಿಎಂನವರು ಮಿಲ್ ನಡೆಸುತ್ತಿದ್ದರು. ನಷ್ಟದ ಹಾದಿ ಹಿಡಿದಿದ್ದರಿಂದ 1998ರಲ್ಲಿ ಬಾಗಿಲು ಮುಚ್ಚಿತು. ಆಗ ಕೇವಲ 450 ಕಾರ್ಮಿಕರಿದ್ದೆವು. ಸೂಕ್ತ ಪರಿಹಾರ ಸಿಗದಿದ್ದರಿಂದ, ನಾನು ಸೇರಿದಂತೆ ಕೆಲವರು ಕೋರ್ಟ್ ಮೆಟ್ಟಿಲೇರಿದ್ದೆವು. ಪ್ರಕರಣ ಇಂದಿಗೂ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ’ ಎಂದು ತಿಳಿಸಿದರು.

'ಅನ್ನದಾತ ಮಿಲ್'

‘ಸ್ವಾತಂತ್ರ್ಯಪೂರ್ವದಲ್ಲಿ ಹುಬ್ಬಳ್ಳಿ ಕಾಟನ್ ಹಬ್ ಆಗಿತ್ತು. ಇದೇ ಕಾರಣಕ್ಕೆ ಛೋಟಾ ಬಾಂಬೆ ಹೆಸರು ಬಂತು. ಆಗ ನಗರದಲ್ಲಿ ಹಲವು ಕಾಟನ್ ಮಿಲ್‌ಗಳಿದ್ದವು. ಜಿಲ್ಲೆಯಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಇಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿ ಶಾಖೆಯ ಮಿಲ್‌ಗಳಲ್ಲಿ ತಯಾರಾಗುತ್ತಿದ್ದ ಉಡುಪುಗಳನ್ನು ಬ್ರಿಟಿಷರು ಕಾರವಾರ ಬಂದರಿನಿಂದ ತಮ್ಮ ದೇಶಕ್ಕೆ ಕೊಂಡೊಯ್ಯುತ್ತಿದ್ದರು. ನಗರಕ್ಕೆ ಉದ್ಯೋಗ ಅರಸಿ ಅಕ್ಕಪಕ್ಕದ ಜಿಲ್ಲೆಗಳಿಂದ ಜನ ಬಂದು ಬದುಕು ಕಟ್ಟಿಕೊಂಡಿದ್ದರು. ಮೂರು ತಲೆಮಾರುಗಳ ಲಕ್ಷಾಂತರ ಜನರಿಗೆ ಅನ್ನ ಕೊಟ್ಟಿರುವ ಮಿಲ್ ಅದು’ ಎಂದು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ತಿಳಿಸಿದರು.

ಅನುಮತಿ ಪಡೆಯದೆ ನೆಲಸಮ

ಪಾಲಿಕೆ ನೋಟಿಸ್ಅನುಮತಿ ಪಡೆಯದೆ ಚಿಮಣಿಯನ್ನು ನೆಲಸಮಗೊಳಿಸಿದ್ದಕ್ಕಾಗಿ ಜಾಗದ ಮಾಲೀಕರಾದ ಏಕನಾಥಸಾ ಅರ್ಜುನಸಾ ಇರಕಲ್ ಅವರಿಗೆ ಮಹಾನಗರ ಪಾಲಿಕೆಯ ವಲಯ 10ರ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ.

ಅತ್ಯಂತ ದೊಡ್ಡದಾದ ಚಿಮಣಿ ಕೆಡವಲು ಅನುಮತಿ ಪಡೆಯದಿರುವುದು ಸ್ಥಳ ಪರಿಶೀಲನೆ ನಡೆಸಿದಾಗ ಗೊತ್ತಾಗಿದೆ. 7 ದಿನಗಳೊಳಗೆ ಚಿಮಣಿ ಇದ್ದ ಸ್ಥಳದ ದಾಖಲೆಗಳನ್ನು ಪರಿಶೀಲನೆಗಾಗಿ ಕಚೇರಿಗೆ ಸಲ್ಲಿಸಬೇಕು. ಅಲ್ಲಿಯವರೆಗೆ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು