ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದಷ್ಟು ಹಳೆಯ ಬಾವಿ ಪುನರುಜ್ಜೀವನ

ನೈರುತ್ಯ ರೈಲ್ವೆ ಪ್ರಯತ್ನ: 60 ಅಡಿ ನೀರಿರುವ ಬಾವಿಯಲ್ಲಿವೆ ಹೇರಳ ಜಲಚರಗಳು
Last Updated 15 ನವೆಂಬರ್ 2022, 4:08 IST
ಅಕ್ಷರ ಗಾತ್ರ

ಧಾರವಾಡ: ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ನಿರುಪಯುಕ್ತವಾಗಿದ್ದಬಾವಿಗೆ ನೈರುತ್ಯ ರೈಲ್ವೆ ಪರಿಸರ ವಿಭಾಗದ ಮೂಲಕ ಮರುಜೀವ ನೀಡಲಾಗಿದೆ.

ಇಲ್ಲಿನ ರೈಲ್ವೆ ನಿಲ್ದಾಣದ ಎಡ ಭಾಗದಲ್ಲಿರುವ ಶತಮಾನದಷ್ಟು ಹಿಂದಿನ ತೆರೆದ ಬಾವಿ ಕೆಲವು ವರ್ಷಗಳಿಂದ ಬಳಕೆಯಲ್ಲಿ ಇರಲಿಲ್ಲ. ಒಳಗೆ ಹೋಗಲು ಸಾಧ್ಯವಿಲ್ಲದಷ್ಟು ಗಿಡ ಕಂಟಿಗಳು ಬೆಳದಿದ್ದವು. ಹೀಗಾಗಿ ಬಾವಿಯೇ ಕಾಣದಂತಾಗಿತ್ತು.

ಪರಿಸರ ಸ್ನೇಹಿ ಹಾಗೂ ಇರುವ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿಶತಮಾನದಷ್ಟು ಹಿಂದಿನ ಬಾವಿಯ ಪುನರುಜ್ಜೀವನದ ಮೂಲಕ ಕೊಳವೆ ಬಾವಿ ಮೇಲಿನ ಅವಲಂಬನೆಯನ್ನು ತುಸು ತಗ್ಗಿಸುವ ಯೋಜನೆಗೆ ರೈಲ್ವೆ ಇಲಾಖೆ ಕೈಹಾಕಿತು.

ಈ ಬಾವಿ ಸುಮಾರು ಆರು ಮೀಟರ್ ಸುತ್ತಳತೆ ಹೊಂದಿದೆ. 60 ಅಡಿಗೂ ಹೆಚ್ಚು ಆಳವಿರುವ ಈ ಬಾವಿಗೆ ಕಲ್ಲು ಕಟ್ಟಲಾಗಿದೆ. ಹಲವು ವರ್ಷಗಳಿಂದ ಬಳಕೆಯಲ್ಲಿಲ್ಲದ ಕಾರಣ ಹಾಗೂ ನಿರಂತರ ಮಳೆಯಾಗುತ್ತಿರುವುದರಿಂದ ಇಲ್ಲಿ ಸದ್ಯ 60 ಅಡಿ ನೀರು ಇದೆ. ನೀರಿನಲ್ಲಿ ಜಲಚರಗಳು ಹೇರಳವಾಗಿವೆ.

ಬಾವಿಗೆ ನ್ಯಾರೊ ಗೇಜ್‌ ಹಾಗೂ ಮೀಟರ್ ಗೇಜ್‌ನ ಕಂಬಿಗಳನ್ನು ಬಳಸಿ ರಾಟೆ ಕಟ್ಟಲು ವ್ಯವಸ್ಥೆ ಮಾಡಲಾಗಿದೆ. ಇದರ ಆಧಾರದಲ್ಲಿ ರೈಲ್ವೆ ಆರಂಭವಾದ ಸಂದರ್ಭದಲ್ಲಿ ನೀರಿಗಾಗಿ ಇಲ್ಲಿ ಇಂಥ ಬೃಹತ್ ಬಾವಿಯನ್ನು ನಿರ್ಮಿಸಲಾಗಿತ್ತು. ಸತತಬರಗಾಲದಿಂದ ಬರಿದಾದ ಬಾವಿ,ಹೆಚ್ಚಿದ ಕೊಳವೆ ಬಾವಿ ಹಾಗೂ ಜಲಮಂಡಳಿ ಮೂಲಕ ನೀರು ಪೂರೈಕೆಯಾಗಲು ಆರಂಭಿಸಿದ ನಂತರ ಬಾವಿಯು ಕ್ರಮೇಣ ನಿರುಪಯುಕ್ತಗೊಂಡಿತ್ತು.

‘ರೈಲ್ವೆ ನಿಲ್ದಾಣ ನವೀಕರಣಗೊಂಡ ನಂತರ, ಪಕ್ಕದಲ್ಲೇ ಇರುವ ನೀಲಗಿರಿ ತೋಪನ್ನು ಉದ್ಯಾನವಾಗಿ ಪರಿವರ್ತಿಸಲು ಮನವಿ ಸಲ್ಲಿಸಲಾಗಿತ್ತು. ಸುಮಾರು 15 ಎಕರೆಯಷ್ಟಿರುವ ಈ ಪ್ರದೇಶದಲ್ಲಿ ಈ ಬಾವಿ ಇದ್ದು, ಅದಕ್ಕಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್‌ಗೆ ಬೀಗ ಹಾಕಲಾಗಿತ್ತು. ಇದನ್ನು ರೈಲ್ವೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಪರಿಸರ ಅಧಿಕಾರಿಯೂ ಆಗಿರುವ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಅಜಯ ಸಿಂಗ್ ಅವರು ಬಾವಿಯ ಮರುಬಳಕೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಂಡರು’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 19ನೇ ವಾರ್ಡ್‌ನ ಸದಸ್ಯೆ ಜ್ಯೋತಿ ಪಾಟೀಲ ತಿಳಿಸಿದರು.

‘ಇಂಥದ್ದೇ ಒಂದು ಹಳೆಯ ಬಾವಿ ಅತ್ತಿಕೊಳ್ಳದಲ್ಲಿದೆ. ಅದೂ ರೈಲ್ವೆಗೆ ಸೇರಿದೆ. ಇಲಾಖೆಯ ಬಹಳ ಹಿಂದಿನ ಸಿಬ್ಬಂದಿ ಹೇಳುವಂತೆ, ಉಗಿಬಂಡಿಗೆ ಅಗತ್ಯವಿದ್ದ ನೀರನ್ನು ಇಲ್ಲಿನ ಬಾವಿ ಮೂಲಕ ಪಡೆಯಲಾಗುತ್ತಿತ್ತು. ನಂತರ ಡೀಸೆಲ್ ಎಂಜಿನ್‌ಗಳು ಬಂದ ನಂತರ ಬಾವಿಯ ಬಳಕೆ ನಿಂತಿತಂತೆ. ಅ ಬಾವಿಯನ್ನೂ ಹುಡುಕಿ, ಅದಕ್ಕೂ ಹೊಸ ಸ್ವರೂಪ ನೀಡಬೇಕು ಎಂದು ಮನವಿ ಮಾಡಲಾಗಿದೆ’ ಎಂದರು.

‘ಭೂಮಿಯ ಆಳದಲ್ಲಿ ಕಲ್ಲಿನ ಪದರಗಳಲ್ಲಿ ಶೇಖರಿಸಿದ ನೀರಿನ ಬಳಕೆಗಿಂತ, ಮೇಲ್ಪದರದ ಸೆಲೆಯ ಮೂಲಕ ನಿರಂತರ ಹಿರಿಯುವ ನೀರಿನ ಬಳಕೆಯನ್ನು ಹೆಚ್ಚಿಸಲು ಬಾವಿಗಳ ಪುನರುಜ್ಜೀವನಕ್ಕೆ ನೈರುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಇಂಗಿತ ವ್ಯಕ್ತಪಡಿಸಿದರು. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ಇಲಾಖೆಯ ಸಿಬ್ಬಂದಿ ಬಾವಿಗೆ ಹೊಸ ಸ್ವರೂಪ ನೀಡಿದ್ದಾರೆ. ಈ ನೀರನ್ನು ನಿಲ್ದಾಣದ ಉದ್ಯಾನ ಹಾಗೂ ಇನ್ನಿತರ ನಿತ್ಯದ ಬಳಕೆಗೆ ಬಳಸುವ ಯೋಜನೆ ಇದೆ’ ಎಂದು ನೈರುತ್ಯ ರೈಲ್ವೆ ಪರಿಸರ ವಿಭಾಗದ ಮುಖ್ಯಸ್ಥ ಅಜಯ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT