ಧಾರವಾಡದಲ್ಲೊಂದು ಚಹಾ ಪ್ರಿಯರ ‘ಅಡ್ಡ’!

7

ಧಾರವಾಡದಲ್ಲೊಂದು ಚಹಾ ಪ್ರಿಯರ ‘ಅಡ್ಡ’!

Published:
Updated:
Deccan Herald

ಮನುಷ್ಯನ ಜೀವನಕ್ಕ ನೀರು ಎಷ್ಟು ಮುಖ್ಯವೋ ಚಹಾ ಕೂಡ ಅಷ್ಟೇ ಮುಖ್ಯ. ಮುಂಜಾನೆ ಎದ್ದು ಚಹಾ ಕುಡೀಲಿಲ್ಲ ಅಂದ್ರ ಮುಂದಿನ ಕೆಲಸಗಳುಸಾಗುವುದೇ ಇಲ್ಲ.

ಚಹಾ ಒಂಥರಾ ನಮ್ಮ ದೇಹಕ್ಕೆ ಕೀಲಿಕೈ ಇದ್ದಂಗ. ಇತ್ತಿತ್ಲಾಗ ಚಹಾದಾಗೂ ಬೇರೆ ಬೇರೆ ನಮೂನೆಗಳು ಬಂದಾವ. ಅಂಥದ್ದೊಂದು ವಿಶೇಷ ಚಹಾದ ಅಂಗಡಿ ನಮ್ಮ ಧಾರವಾಡದೊಳಗು ಆರಂಭವಾಗಿರೋದು ಚಹಾ ಪ್ರಿಯರಿಗೆ ಸ್ವರ್ಗ ಸಿಕ್ಕಂಗ ಆಗೇದ.

150 ಬಗೆಯ ಚಹಾಗಳು

ಹಿಂದಿ ಪ್ರಚಾರ ಸಭಾ ಎದುರಿಗೆ ‘ಸಿ. ಟಿ. ಅಡ್ಡ’ ಎನ್ನುವ ಹೊಸ ಚಹಾದ ಅಂಗಡಿ ಶುರುವಾಗಿದೆ. ಧಾರವಾಡದ ಸೋಮೇಶ ತಂಡಿಗೇರಿ ಮತ್ತು ಅವರ ಸ್ನೇಹಿತರು ಇದನ್ನು ಶುರು ಮಾಡ್ಯಾರ. ಇಲ್ಲಿನ ಚಹಾದ ಮೆನು ಬೋರ್ಡ್‌ ಓದಲಿಕ್ಕೆ ನಿಮಗ ಐದು ನಿಮಿಷ ತಗೋತದ.

ದೇಸಿ ಟೀ, ಮಸಾಲಾ ಟೀ, ಲೆಮನ್ ಟೀ, ಬ್ಲ್ಯಾಕ್ ಕರೆಂಟ್ ಟೀ, ರೋಸ್ ಟೀ, ತುಳಸಿ ಟೀ, ಗ್ರೀನ್ ಟೀ, ಜಿಂಜರ್ ಟೀ, ಆರೆಂಜ್ ಟೀ, ಬೆಲ್ಲಮ್ ಟೀ, ಮಿಂಟ್ ಟೀ, ಇಲಾಚಿ ಟೀ, ಪೆಪ್ಪರ್ ಟೀ... ಹೀಂಗ್ ಎಲ್ಲಾ ಸೇರಿ 150 ತರಹೇವಾರಿ ಚಹಾಗಳು ಇಲ್ಲಿ ಲಭ್ಯ ಅವ. ಏಳು ರೂಪಾಯಿಂದ ಹಿಡಿದು ಐವತ್ತು ರೂಪಾಯಿಯೊಳಗ ಬಗೆಬಗೆಯ ಚಹಾಗಳ ರುಚಿ ನೋಡಲಿಕ್ಕೆ ಸಿಗ್ತದ.

ಆರೋಗ್ಯಕ್ಕೆ ಹಿತಕರ...

ಇದು ಬರಿ ಚಹದ ಅಂಗಡಿ ಅಷ್ಟೇ ಅಲ್ರೀ... ಯಾವ ಯಾವ ಚಹಾ ಕುಡದ್ರ ನಮ್ಮ ಆರೋಗ್ಯಕ್ಕ ಏನೇನು ಉಪಯೋಗ ಆಗ್ತದ ಅನ್ನೋ ಫಲಕಗಳನ್ನು ಸಹ ನೋಡಬಹುದ್ರೀ. ರೋಗ ನಿರೋಧಕ, ಜೀರ್ಣಕ್ರಿಯೆಗೆ ಸಹಾಯಕವಾಗುವ, ಬೊಜ್ಜು ಕರಗಿಸುವ, ರಕ್ತದ ಒತ್ತಡ ನಿಯಂತ್ರಣದಲ್ಲಿಡುವ, ಆಸ್ತಮಾ, ಸಕ್ಕರೆ ಕಾಯಿಲೆ ತಗ್ಗಿಸುವ ಅನೇಕ ಚಹಾಗಳು ಇಲ್ಲಿ ಸಿಗ್ತಾವ. ಚಹಾ ಕುಡೀಲಿಕ್ಕೆ ಬಂದವರಿಗೆ ಇಷ್ಟೆಲ್ಲ ಮಾಹಿತಿಗಳು ದೊರೀತಾವ ನೋಡ್ರೀ...

ರುಚಿಕರ ತಿನಿಸುಗಳು...

ಕೇವಲ ಚಹಾ ಅಷ್ಟ ಅಲ್ಲದ, ಸಿ.ಟಿ. ಅಡ್ಡದೊಳಗ ವಿಶೇಷ ತಿನಿಸುಗಳ ಕೂಡ ಗ್ರಾಹಕರ ಮೆಚ್ಚುಗೆ ಪಡೆದಾವ. ವಡಾಪಾವ್ ಹಾಗೂ ಕ್ಯಾರೆಟ್ ಕೇಕ್ ಇಲ್ಲಿನ ಪ್ರಮುಖ ಖಾದ್ಯಗಳು. ಇದರ ಜೊತಿಗೆ ಬರ್ಗರ್, ಸ್ಯಾಂಡ್‌ವಿಚ್, ಫ್ರೆಂಚ್ ಫ್ರೈಸ್, ಸ್ಮೈಲಿಸ್, ಪೊಟ್ಯಾಟೊ ಪಾಪ್ಸ್ ಇನ್ನೂ ಐದಾರು ಬಗೆಯ ಖಾದ್ಯಗಳು ಸಿಗ್ತಾವ.

ಮುಂಜಾನೆ ವಾಕಿಂಗ್ ಹೋಗೋ ಮಂದಿ, ಬೆಳಿಗ್ಗೆ ಆಫೀಸ್‌ಗೆ ಹೊರಡುವವರು, ಸಂಜಿ ಕಾಲೇಜು ಹುಡುಗರು, ಹಿಂಗ್‌ ದಿವಸಕ್ಕ ಅಂದಾಜು ಐದಾರು ನೂರು ಮಂದಿ ಸಿ.ಟಿ ಅಡ್ಡಕ್ಕ ಭೇಟಿ ಕೊಡ್ತಾರ. ಇನ್ಯಾಕ ತಡ, ನೀವೂ ಯಾವಗರ ಬಿಡುವು ಮಾಡಿಕೊಂಡು ಚಹಾ ಅಡ್ಡಕ್ಕೆ ಭೇಟಿ ಕೊಡ್ರಲ್ಲ...

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !