ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಪ್ರಾಥಮಿಕ ಶಿಕ್ಷಣವೇ ಸವಾಲು

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಕುರಿತು ಸಾಧಕ–ಬಾಧಕಗಳ ಚರ್ಚೆ, ತಜ್ಞರ ಅಭಿಮತ
Last Updated 23 ಜೂನ್ 2019, 14:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಮ್ಮ ಪ್ರಾಥಮಿಕ ಶಿಕ್ಷಣದ ಅಡಿಪಾಯವೇ ಗಟ್ಟಿಯಾಗಿಲ್ಲ; ಇನ್ನು ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ವಿದ್ಯಾರ್ಥಿಗಳಿಂದ ಗುಣಮಟ್ಟ ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ?

ಓದು ಮುಗಿಸಿದ ಸಾಕಷ್ಟು ಮಕ್ಕಳಿಗೆ ಕನ್ನಡ ಬರಲ್ಲ, ಇಂಗ್ಲಿಷ್‌ ತಿಳಿಯುವುದಿಲ್ಲ, ಹಿಂದಿ ಅರ್ಥವಾಗಲ್ಲ ಎನ್ನುವ ಸ್ಥಿತಿಯಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಕಲಿಸುವುದರ ಜೊತೆಗೆ ಶಿಕ್ಷಕರ ಗುಣಮಟ್ಟ ಕೂಡ ಐದು ವರ್ಷಗಳಿಗೊಮ್ಮೆ ಪರೀಕ್ಷೆಗೆ ಒಳಪಡಿಸಬೇಕು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಬಗ್ಗೆ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ನಡೆದ ಚಿಂತನ–ಮಂಥನ ದುಂಡುಮೇಜಿನ ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಅಭಿಪ್ರಾಯಗಳು ಇವು.

ಕೇಂದ್ರ ಸರ್ಕಾರ 2017ರಲ್ಲಿ ಡಾ. ಕೆ. ಕಸ್ತೂರಿರಂಗನ್‌ ಅವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ರಚಿಸಿತ್ತು. ಈ ಸಮಿತಿ ಕರಡು ಪ್ರಕಟಿಸಿದೆ. ಇದರಲ್ಲಿರುವ ಅಂಶಗಳ ಬಗ್ಗೆ ಚರ್ಚಿಸಲು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮತ್ತು ಮಾಧ್ಯಮಿಕ ಶಿಕ್ಷಕ ಸಂಘ ಜಂಟಿಯಾಗಿ ಸಭೆ ಹಮ್ಮಿಕೊಂಡಿತ್ತು. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಸ್ನಾತಕ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ಈ ಕರಡು ಪ್ರಕಟಿಸಲಾಗಿದೆ.

ಇದರ ಸಾಧಕ, ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಶಿಕ್ಷಕರು, ಶಿಕ್ಷಣ ಕ್ಷೇತ್ರದ ಸಾಧಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಕರ ಹಾಗೂ ಪ್ರಾಧ್ಯಾಪಕರ ಹಿತ ಕಾಯುವ ನಿಟ್ಟಿನಲ್ಲಿಯೂ ಕರಡಿನಲ್ಲಿ ಅಂಶಗಳನ್ನು ಸೇರಿಸಬೇಕು ಎಂದು ಸ್ನಾತಕೋತ್ತರ ಪದವೀಧರರು ಮನವಿ ಮಾಡಿದರು.

ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಘು ಅಕಮಂಚಿ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು, ಭಾರತದ ನಿಜವಾದ ಶಿಕ್ಷಣ ವ್ಯವಸ್ಥೆ ಪ್ರತಿಬಿಂಬಿಸುವಂತಿದೆ. ಇದರಿಂದ ಮುಂದಿನ ಹತ್ತು ವರ್ಷಗಳಲ್ಲಿ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತದೆ. ಕರಡಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಅಂಶಗಳಿವೆ’ ಎಂದು ಅಭಿಪ್ರಾಯಪಟ್ಟರು.

ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂದೀಪ ಬೂದಿಯಾಳ ‘ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡುವ ಅಂಶ ಸ್ವಾಗತಾರ್ಹ’ ಎಂದರು.

ಪ್ರೊ. ಮೋಹನ್‌ ಸಿದ್ದಾಂತಿ ಮಾತನಾಡಿ ‘ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ನೀಡುವುದು ತುರ್ತು ಅಗತ್ಯ. ಪ್ರಾಥಮಿಕ ಹಂತದ ಬುನಾದಿ ಗಟ್ಟಿಯಾದರೆ ಮಾತ್ರ ಮುಂದೆ ಗುಣಮಟ್ಟ ನಿರೀಕ್ಷೆ ಮಾಡಲು ಸಾಧ್ಯ. ಈ ಹಂತದಿಂದಲೇ ಗಣಿತ ಮತ್ತು ಭಾಷಾ ಕೌಶಲ ಕಲಿಸಬೇಕು’ ಎಂದರು.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈಶ್ವರ ಭಟ್‌ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವೈಜ್ಞಾನಿಕವಾಗಿದೆ. ಭಾರತದ ವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳುವಂತಿದೆ. ಕಾನೂನು ಶಿಕ್ಷಣದ ಮಹತ್ವ ಸಾರಲು ಹೊಸ ನೀತಿ ಅನುಕೂಲವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಡಾ. ಪತಗುಂಡಿ ‘ಶಿಕ್ಷಕರ, ಪ್ರಾಚಾರ್ಯರ ಮತ್ತು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಾತಿ ಸಂದರ್ಭದಲ್ಲಿ ಕಠಿಣ ನಿಯಮ ಜಾರಿಗೆ ತರಬೇಕು. ಹೆಚ್ಚು ಪಾರದರ್ಶಕವಾಗಿ ನಡೆಯಬೇಕು’ ಎಂದರು.

ಡಾ. ಪ್ರಸಾದ ರೌಡಗಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನದ ಮಹತ್ವದ ಕುರಿತು ತಿಳಿಸಿಕೊಟ್ಟರು. ತರಗತಿಯಲ್ಲಿ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇದರಿಂದ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಒಂದು ಅಧ್ಯಯನದ ಪ್ರಕಾರ ದೇಶದಲ್ಲಿ ಶೇ 18ರಷ್ಟು ಎಂಜಿನಿಯರಿಂಗ್ ಪದವೀಧರರು ಮಾತ್ರ ನೌಕರಿ ಪಡೆದುಕೊಳ್ಳಲು ಅರ್ಹರಿದ್ದಾರೆ. ವರ್ಷಕ್ಕೆ 1.5 ಕೋಟಿ ಉದ್ಯೋಗಾಕಾಂಕ್ಷಿಗಳು ಸೃಷ್ಟಿಯಾಗುತ್ತಿದ್ದಾರೆ ಎಂದರು.

ಪ್ರೊ. ಬಿ.ಎಚ್‌. ನಾಗೂರ ‘ಹೊಸ ಶಿಕ್ಷಣ ನೀತಿ ಆಕ್ಸ್‌ಫರ್ಡ್‌ ಹಾಗೂ ಕೇಂಬ್ರಿಡ್ಜ್‌ ಮಾದರಿಯನ್ನೇ ಬಹುತೇಕ ಅನುಕರಿಸುವಂತಿದೆ. ಬದಲಾವಣೆಗೆ ಹೊಂದಿಕೊಳ್ಳಲು ಕೆಲ ಸಮಯ ಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಗುರುನಾಥ ಬಡಿಗೇರ ‘ಉನ್ನತ ಶಿಕ್ಷಣದ ಅಧ್ಯಯನ ಸಂದರ್ಭದಲ್ಲಿ ಸ್ಥಳೀಯ ಸಂಸ್ಕೃತಿ, ಅಲ್ಲಿಯ ಬಗ್ಗೆ ತಿಳಿಯುವುದು ಕಡ್ಡಾಯವಾಗಲಿ’ ಎಂದರು.

ಮೋಹನ್‌ ಲಿಂಬಿಕಾಯಿ, ಪ್ರೊ. ಪ್ರಸನ್ನ ಪಂಡಾರಿ, ಶಾಂತಣ್ಣ ಕಡಿವಾಳ, ಡಾ.ಎಸ್‌.ವಿ. ಮನಗುಡಿ, ಡಾ. ದುಮ್ಮವಾಡ, ಶ್ರೀಧರ ಪಾಟೀಲ ಕುಲಕರ್ಣಿ, ಪ್ರೊ. ಜಿ.ಎಸ್‌. ಪ್ರಭಯ್ಯನವರಮಠ, ಪ್ರೊ. ಬಿ.ಎಚ್‌. ಮೋರೆ, ಪ್ರೊ. ಆರ್‌.ಎಸ್‌. ಮಟ್ಟಿಮನಿ, ಡಾ. ಅನ್ನಪೂರ್ಣ ಹತ್ತಿಮತ್ತೂರ, ಜಿ. ಹನುಮಂತಪ್ಪ, ಡಾ. ಸೋಮಶೇಖರ ಪಟ್ಟಣಶೆಟ್ಟಿ, ಡಾ. ಸಿ.ವಿ. ಮರಿದೇವರಮಠ, ಡಾ. ಮಹೇಶ ಹೊರಕೇರಿ, ಅಭಿಷೇಕ ಕುಬಸದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT