ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಶೇಖರ ಗುರೂಜಿ‌‌ ಕೊಲೆ ಪ್ರಕರಣ: ಆರೋಪಿಗಳು‌ ಮತ್ತೆ 6 ದಿನ‌ ಪೊಲೀಸ್ ವಶಕ್ಕೆ

Last Updated 13 ಜುಲೈ 2022, 7:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ‌ ಕೊಲೆ ಪ್ರಕರಣದ ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಅವರನ್ನು ನಗರದ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ಮತ್ತೆ 6 ದಿನಗಳ ಕಾಲ‌ ಪೊಲೀಸರ ವಶಕ್ಕೆ ನೀಡಿದೆ.

ಈಗಾಗಲೇ ಪೊಲೀಸ್ ವಶದಲ್ಲಿದ್ದ ಆರೋಪಿಗಳ ಅವಧಿ ಇಂದು ಅಂತ್ಯಗೊಂಡ ಬೆನ್ನಲ್ಲೇ, ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಹದಿನೈದು ದಿನಗಳು ಪೊಲೀಸ್ ವಶಕ್ಕೆ ನೀಡಬೇಕು ಎಂದು ಪ್ರಕರಣದ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ಮತ್ತು ವಿದ್ಯಾನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ವಿಶ್ವನಾಥ ಚೌಗಲೆ ನೇತೃತ್ವದ ತಂಡ ನ್ಯಾಯಾಧೀಶರನ್ನು ಕೋರಿದರು.

ಪೊಲೀಸರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶರು, ‘ಕಸ್ಟಡಿಯಲ್ಲಿದ್ದ ನಿಮಗೆ ಪೊಲೀಸರು ತೊಂದರೆ ಕೊಟ್ಟಿದ್ದಾರೆಯೇ?’ ಎಂದು‌ ಆರೋಪಿಗಳನ್ನು ಕೇಳಿದರು‌. ಅದಕ್ಕೆ ಆರೋಪಿಗಳು ‘ಇಲ್ಲ’ ಎಂದು‌ ಪ್ರತಿಕ್ರಿಯಿಸಿದರು. ನಂತರ ಹದಿನೈದು ದಿನಗಳ ಬದಲಿಗೆ ಜುಲೈ 18ರವರೆಗೆ ಆರು ದಿನ ಪೊಲೀಸ್ ವಶಕ್ಕೆ ನೀಡಿ ಆದೇಶ ನೀಡಿದರು. ನಂತರ ಪೊಲೀಸರು, ಆರೋಪಿಗಳನ್ನು ಕರೆದುಕೊಂಡು ಹೋದರು.

ಬೇರೆ ಕಾರಣವಿರುವ ಅನುಮಾನ: ಇಷ್ಟು ದಿನ ಪೊಲೀಸರ ವಶದಲ್ಲಿದ್ದ ಆರೋಪಿಗಳು ಕೊಲೆಗೆ ಬೇನಾಮಿ ಆಸ್ತಿಯೇ ಕಾರಣ ಎಂಬ ವಿಷಯವನ್ನು ಬಿಟ್ಟರೆ, ಮತ್ತೇನನ್ನೂ ಬಾಯ್ಬಿಟ್ಟಿಲ್ಲ. ಆದರೆ, ಗುರೂಜಿಗೆ ಒಂದು ಕಾಲದಲ್ಲಿ ತೀರಾ ಆಪ್ತರಾಗಿದ್ದವರು, ಅಷ್ಟೊಂದು ಬರ್ಬರವಾಗಿ ಕೊಲೆ ಮಾಡಿರುವುದರ ಹಿಂದೆ ಇತರ ಕಾರಣಗಳಿರುವ ಅನುಮಾನಗಳಿವೆ. ಹೀಗಾಗಿ ಬೇರೆ ಆಯಾಮಗಳಿಂದಲೂ ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ವಿಷಯಗಳು ಹೊರಕ್ಕೆ ಬರುವ ಸಾಧ್ಯತೆ ಇರುವ ಕಾರಣ ಇಬ್ಬರನ್ನೂ ಮತ್ತೆ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

ಕೊಲೆಯಾದ ದಿನ ಗುರೂಜಿ ಜೊತೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಅವರ ಪತ್ನಿ ಅಂಕಿತಾ ಹಾಗೂ ಹೋಟೆಲ್ ಸಿಬ್ಬಂದಿ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಕೃತ್ಯ ನಡೆದ ದಿನ ಆರೋಪಿಗಳನ್ನು ನೋಡಿರುವುದಾಗಿಯೂ ಗುರೂಜಿ ಪತ್ನಿ ಹೇಳಿ‌ದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT