ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನ ಸ್ವಾಗತಕ್ಕೆ ‘ಚೋಟಾ ಬಾಂಬೆ’ ಸಜ್ಜು

ಜೋರು ಮಳೆಗೂ ಕುಗ್ಗದ ಜನರ ಉತ್ಸಾಹ, ತಯಾರಿ ಸಡಗರ
Last Updated 1 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಚೋಟಾ ಬಾಂಬೆ’ ಖ್ಯಾತಿಯ ಹುಬ್ಬಳ್ಳಿ, ವಾಣಿಜ್ಯ ವ್ಯವಹಾರಗಳಿಗೆ ಎಷ್ಟೊಂದು ಪ್ರಸಿದ್ಧಿಯೋ; ವಿಭಿನ್ನ ರೂಪ‍ಗಳ, ಆಕರ್ಷಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೂ ಅಷ್ಟೇ ಖ್ಯಾತಿ ಹೊಂದಿದೆ.‌

ಗಣೇಶ ಚತುರ್ಥಿ ಹಬ್ಬ ಬರುತ್ತಿದ್ದಂತೆ ನಗರದ ಜನರಲ್ಲಿ ಅದೇನೋ ಸಂಭ್ರಮ. ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ತಿಂಗಳ ಮೊದಲೇ ತಯಾರಿ ಆರಂಭಿಸಿರುತ್ತಾರೆ.

ಕೆಲವು ದಿನ ಬಿಡುವ ನೀಡಿದ್ದ ಮಳೆ ಭಾನುವಾರ ದಿಢೀರ್ ಪ್ರತ್ಯಕ್ಷವಾಯಿತು. ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣದ ಜೊತೆಗೆ ಜಿಟಿ ಜಿಟಿ ಮಳೆ. ಮಧ್ಯಾಹ್ನದ ವೇಳೆಗೆ ವರುಣ ಅಬ್ಬರ ಹೆಚ್ಚಾಯಿತು. ಆದರೆ, ಪೂಜಾ ಸಾಮಗ್ರಿ ಖರೀದಿಸುವ ಜನರ ಉತ್ಸಾಹ ಮಾತ್ರ ಕಿಂಚಿತ್ತೂ ಕುಗ್ಗಲಿಲ್ಲ.

ಮಳೆಯಲ್ಲಿ ನೆನೆದುಕೊಂಡೇ ಜನಸಾಮಗ್ರಿ ಖರೀದಿಸಿದರು. ಹಬ್ಬವನ್ನೇ ಬಂಡವಾಳ ಮಾಡಿಕೊಂಡಿದ್ದ ಹೂವಿನ ವ್ಯಾಪಾರಸ್ಥರು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದರು. ಹಬ್ಬವಲ್ಲದ ದಿನಗಳಲ್ಲಿ ಕೆ.ಜಿ.ಗೆ ₹ 80ರಿಂದ 100 ಇರುತ್ತಿದ್ದ ಗುಲಾಬಿ ಹೂಗಳ ಬೆಲೆ ಹಬ್ಬದ ಕಾರಣಕ್ಕೆ ₹ 240 ಆಗಿತ್ತು. ಇದರಿಂದ ಜನ ಬೇಸರಿಸಿಕೊಂಡರೂ, ಖರೀದಿ ಮಾತ್ರ ನಿಲ್ಲಲಿಲ್ಲ. ದುರ್ಗದ ಬೈಲ್‌, ಜನತಾ ಬಜಾರ್, ಕೇಶ್ವಾಪುರ ಮಾರುಕಟ್ಟೆ, ಗೋಕುಲ ರಸ್ತೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಕಾತರ:

ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಹುಬ್ಬಳ್ಳಿ ಕಾ ರಾಜಾ, ಮರಾಠ ಗಲ್ಲಿ ಕಾ ರಾಜಾ ಹೀಗೆ ಅನೇಕ ಪ್ರಮುಖ ಗಣೇಶನ ಮೂರ್ತಿಗಳನ್ನು ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.

ಸ್ಟೇಷನ್‌ ರಸ್ತೆಯಲ್ಲಿ ಗಣೇಶೋತ್ಸವ ಮಂಡಳಿ ಕಾಶಿ ವಿಶ್ವನಾಥನ ಹೆಸರಿಟ್ಟು ಅಂದದ ಮೂರ್ತಿ ಪ್ರತಿಷ್ಠಾಪಿಸಲು ಅಂತಿಮ ಸಿದ್ಧತೆ ನಡೆಸಿತ್ತು. ಮಳೆಯಿಂದ ರಸ್ತೆಯ ಇಕ್ಕೆಲಗಳು ಕೆಸರುಮಯವಾದರೂ, ಮೂರ್ತಿ ಪ್ರತಿಷ್ಠಾಪನೆಯ ಕೆಲಸದ ಉತ್ಸಾಹ ಜೋರಾಗಿತ್ತು.

ಗೌರಿ ಸಂಭ್ರಮ:

ಭಾನುವಾರ ನಗರದ ಕೆಲವೆಡೆ ಸ್ವರ್ಣ ಗೌರಿ ವೃತದ ಸಡಗರ ಕಂಡುಬಂತು. ಮಹಿಳೆಯರು ಮನೆಯಲ್ಲಿ ಗೌರಿಗೆ ಅಲಂಕಾರ ಮಾಡಿ, ಕಡುಬಿನ ಹಾರ, ಕರ್ಚಿಕಾಯಿ, ಚಕ್ಕಲಿಯನ್ನು ಹಾರ ಮಾಡಿ ಅಲಂಕರಿಸಿದ್ದರು.

‘ಚೌತಿಗೆ ಒಂದು ದಿನ ಮೊದಲು ಗೌರಿ ಹಬ್ಬ ಮಾಡುತ್ತಾರೆ. ಗಣೇಶ ಚತುರ್ಥಿಯಂದು ಗೌರಿಯನ್ನು ಹೊರಗಡೆ ಕಳುಹಿಸಿ; ಗಣಪ್ಪನನ್ನು ಮನೆ ಒಳಗೆ ಕರೆದುಕೊಂಡು ಬರುವ ಸಂಪ್ರದಾಯ ಈ ಭಾಗದಲ್ಲಿದೆ’ ಎಂದು ಗೃಹಿಣಿ ಕೆ. ವಿದ್ಯಾ ಹೇಳಿದರು.

ವೀಕ್ಷಣೆ:ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ನಗರದಲ್ಲಿಹಾಕಿರುವಸಾರ್ವಜನಿಕ ಗಣೇಶ ಪೆಂಡಾಲ್‌ಗಳನ್ನು ಪರಿಶೀಲಿಸಿದರು.

ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಂತರ ಗಣೇಶ ವಿಸರ್ಜನೆ ಮಾಡುವ ಇಂದಿರಾ ಗಾಜಿನ ಮನೆ ಹಿಂಭಾಗ, ಹೊಸೂರು ಹಾಗೂ ಹಳೇ ಹುಬ್ಬಳ್ಳಿ ಕಪಿಲಾ ಬಾವಿಗಳಿಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT