ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯನಗರಿಯಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಶಾಂತಿದೂತ ಯೇಸು ಜನ್ಮದಿನದ ಸಡಗರ; ವಿಶ್ವಶಾಂತಿಗಾಗಿ ವಿಶೇಷ ಪಾರ್ಥನೆ
Last Updated 25 ಡಿಸೆಂಬರ್ 2020, 12:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಾಂತಿದೂತ ಯೇಸು ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶುಕ್ರವಾರ ಕ್ರೈಸ್ತರು ಸಂಭ್ರಮದಿಂದ ಆಚರಿಸಿದರು.

ಕಾರವಾರ ರಸ್ತೆಯಲ್ಲಿರುವ ಬಾಶೆಲ್ ಮಿಷನ್‌ನ ಮೈಯರ್ ಸ್ಮಾರಕ ಚರ್ಚ್, ಕೇಶ್ವಾಪುರ ರಸ್ತೆಯಲ್ಲಿರುವ ಸಂತ ಜೋಶಫರ ಕ್ಯಾಥೋಲಿಕ್ ಚರ್ಚ್, ಘಂಟಿಕೇರಿಯ ಯೇಸುನಾಮ ಮಹಾ ದೇವಾಲಯ ಸೇರಿದಂತೆ,ನಗರದಲ್ಲಿರುವ ಚರ್ಚ್‌ಗಳಲ್ಲಿ ಗುರುವಾರ ರಾತ್ರಿಯಿಂದಲೇ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡಿತ್ತು. ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಚರ್ಚ್‌ಗಳನ್ನು ಅಲಂಕರಿಸಲಾಗಿತ್ತು.

ಬೆಳಿಗ್ಗೆ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಜರುಗಿತು. ಶಾಂತಿದೂತ ಯೇಸುವನ್ನು ಕೊಂಡಾಡುವ ಸ್ತುತಿಗೀತೆಗಳ ಗಾಯನ ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ವರ್ಷಾರಂಭದಿಂದ ಜಗತ್ತನ್ನು ಕಾಡುತ್ತಿರುವ ಕೋವಿಡ್–19 ಸಾಂಕ್ರಾಮಿಕ ರೋಗ ನಿವಾರಣೆ ಹಾಗೂ ವಿಶ್ವಶಾಂತಿಗಾಗಿ ಈ ಬಾರಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.

‘ಕೊರೊನಾ ಸೋಂಕಿನಿಂದಾಗಿ ವಿಶ್ವವೇ ತತ್ತರಿಸಿದೆ. ಜನರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ರೋಗದಿಂದ ಮುಕ್ತಿ ಕೊಟ್ಟು, ವಿಶ್ವಕ್ಕೆ ಶಾಂತಿ ಹಾಗೂ ನೆಮ್ಮದಿ ದಯಪಾಲಿಸು ಯೇಸು ತಂದೆ’ ಎಂದು ಮೈಯರ್ ಮೆಮೊರಿಯಲ್ ಚರ್ಚ್‌ನ ಮುಖ್ಯ ಸಭಾಪಾಲಕ ರೆವರೆಂಡ್ ಡ್ಯಾನಿಯಲ್ ಹೊನ್ನಾಯ್ಕರ್ ಪ್ರಾರ್ಥಿಸಿದರು.

‘ಯೇಸು ಜನನ ವಿಶ್ವಶಾಂತಿಯ ಸೂಚಕವಾಗಿದೆ. ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ಶಾಂತಿಯಿಂದ ಎಲ್ಲರೂ ಬದುಕುತ್ತಾ ಯೇಸುವಿನ ಕೃಪೆಗೆ ಪಾತ್ರರಾಗಬೇಕು. ಬಡವರಿಗೆ ಹಾಗೂ ಕೈಲಾಗದವರಿಗೆ ಕರುಣೆ ತೋರಿ, ನೆರವಿನ ಹಸ್ತ ಚಾಚಬೇಕು’ ಎಂದು ಸಂದೇಶ ನೀಡಿದರು.

ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚರ್ಚ್‌ಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೊರೊನಾ ಆತಂಕ: ಸುರಕ್ಷತೆಗೆ ಒತ್ತು

ಕೊರೊನಾ ಆತಂಕದಿಂದಾಗಿ ಬಹುತೇಕ ಚರ್ಚ್‌ಗಳಲ್ಲಿ ಭಕ್ತರು ಅಂತರ ಕಾಯ್ದುಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಚರ್ಚ್‌ನ ಒಳಗೆ ಜಾಗದ ಕೊರತೆ ಇದ್ದಿದ್ದರಿಂದ ಪ್ರಾಂಗಣದಲ್ಲಿ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವೃತ್ತಗಳನ್ನು ಹಾಕಲಾಗಿತ್ತು. ಚರ್ಚ್‌ ಒಳಗಿನ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಧರ್ಮಗುರುಗಳ ಸಂದೇಶ ವೀಕ್ಷಿಸಲು ಹೊರಗಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು.

ಚರ್ಚ್‌ಗೆ ಬರುವವರಿಗೆ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ ಕಳಿಸಲಾಗುತ್ತಿತ್ತು. ಮಾಸ್ಕ್ ಧರಿಸದೆ ಬಂದವರಿಗೆ ಮಾಸ್ಕ್ ಕೂಡ ನೀಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT