ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್‌ಗಳಲ್ಲಿ ಕ್ರಿಸ್‌ಮಸ್‌ ಮಾಯಾಲೋಕ...

Last Updated 21 ಡಿಸೆಂಬರ್ 2018, 19:41 IST
ಅಕ್ಷರ ಗಾತ್ರ

ಶಾಂತಿದೂತ ಯೇಸುವಿನ ಸ್ಮರಣೆಗೆ ಮೂರು ದಿನಗಳು ಮಾತ್ರ ಉಳಿದಿವೆ. ಆದರೆ, ಹುಬ್ಬಳ್ಳಿಯಲ್ಲಿ 15 ದಿನಗಳಿಂದಲೇ ಕ್ರಿಸ್‌ಮಸ್ ಸಡಗರ ಗರಿಗೆದರಿದೆ. ಚರ್ಚ್‌ಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ. ಹುಬ್ಬಳ್ಳಿಯ ಶಾಪಿಂಗ್ ಮಾಲ್‌ಗಳಲ್ಲಿ ಕ್ರಿಸ್‌ಮಸ್ ಮಾಯಾಲೋಕವೇ ಅನಾವರಣಗೊಂಡಿದೆ.

ಪ್ರಮುಖ ಮಾಲ್‌ಗಳಲ್ಲಿ ಇಣುಕಿದರೆ ಕ್ರಿಸ್‌ಮಸ್‌ಗೆ ಏನೆಲ್ಲಾ ಸಿದ್ಧತೆ ಮಾಡಲಾಗಿದೆ ಎಂಬುದು ಕಾಣುತ್ತದೆ. ಬಿಗ್ ಬಜಾರ್, ಅರ್ಬನ್ ಒಯಾಸಿಸ್ ಮಾಲ್, ಯು-ಮಾಲ್, ವಿಶಾಲ ಮಾರ್ಟ್, ಆರ್ಟಿಜಾ ಹಾಗೂ ಲಕ್ಷ್ಮಿ‌ಮಾಲ್‌ಗಳಲ್ಲಿ ಸಿದ್ಧತೆಗಳು ಜೋರಾಗಿವೆ. ವಿಶೇಷ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆಯುವುದು ಹಾಗೂ ಅವರಿಗಾಗಿ ಖುಷಿಯ ವಾತಾವರಣ ನಿರ್ಮಿಸುವುದು ಈ ಮಾಲ್‌ಗಳ ಉದ್ದೇಶ.

ಈ ಮಾಲ್‌ಗಳಲ್ಲಿ ದೀಪಾಲಂಕಾರಗೊಂಡಿರುವ ಕ್ರಿಸ್‌ಮಸ್ ಟ್ರೀ, ಸಾಂತಾಕ್ಲಾಸ್, ಉಡುಗೊರೆಗಳು, ತರಹೇವಾರಿ ಕೇಕ್‌, ಕ್ರಿಸ್‌ಮಸ್ ದಿರಿಸು, ಗೌನ್, ಆಟಿಕೆಗಳು, ಟೋಪಿಗಳನ್ನು ಗ್ರಾಹಕರ ಮನಸ್ಸು ಸೆಳೆಯುವಂತೆ ಇಡಲಾಗಿದೆ. ಡಿ.24ರ ರಾತ್ರಿ ಹಾಗೂ 25ರಂದು ದಿನಪೂರ್ತಿ ಹಲವು ಸ್ಪರ್ಧೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.

'ನಮ್ಮಲ್ಲಿ ಪ್ರತಿ ವರ್ಷವೂ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ. ಈ ವರ್ಷ ಮಕ್ಕಳಿಗಾಗಿ ಫ್ಯಾಷನ್ ಷೋ, ಚಿತ್ರಕಲಾ ಸ್ಪರ್ಧೆ, ನೃತ್ಯ ಪ್ರದರ್ಶನ ನಡೆಯಲಿದೆ. ಮಾಲ್‌ಗೆ ಬರುವ ಮಕ್ಕಳಿಗೆ ಸಾಂತಾಕ್ಲಾಸ್ ಚಾಕೋಲೆಟ್ ನೀಡಿ ಸ್ವಾಗತಿಸಲಿದ್ದಾರೆ' ಎನ್ನುತ್ತಾರೆ ಅರ್ಬನ್ ಒಯಾಸಿಸ್ ಆಡಳಿತ ಮಂಡಳಿಯ ಶ್ರೀರಾಮ್.

ಮನಸೆಳೆಯುವ ಕ್ರಿಸ್‌ಮಸ್‌ ಮನೆ

ಮಾರುಕಟ್ಟೆ ಪ್ರದೇಶದಲ್ಲಿರುವ ಲಕ್ಷ್ಮಿ ಮಾಲ್‌ನಲ್ಲಿ ನಿರ್ಮಿಸಿರುವ ಗೋದಲಿ‌ ಹಾಗೂ ’ಕ್ರಿಸ್‌ಮಸ್ ಹೋಂ’ ಗಮನ ಸೆಳೆಯುತ್ತಿದೆ. ಈ ಮನೆಯಲ್ಲಿ ಮಕ್ಕಳಿಗೆ ಇಷ್ಟವಾಗುವ ಗೊಂಬೆಗಳಿವೆ. ಅದರೊಳಗೆ ಇನ್ನೆರಡು ಪುಟ್ಟಮನೆಗಳಿವೆ. ಕ್ರಿಸ್‌ಮಸ್ ಟ್ರೀ ಇದೆ. ಮಕ್ಕಳು ಧರಿಸುವ ಉಡುಪುಗಳಿವೆ. ಇಬ್ಬರು ಸಾಂತಾಕ್ಲಾಸ್‌ ಗೊಂಬೆಗಳು ಉಡುಗೊರೆ ಹಿಡಿದು ಕಾಯುತ್ತಿದ್ದಾರೆ. ಬಟನ್ ಒತ್ತಿದರೆ ಈ ’ಕ್ರಿಸ್‌ಮಸ್ ಹೋಂ’ ಝಗಮಗಿಸುತ್ತದೆ. 'ಜಿಂಗಲ್ ಬೆಲ್....ಜಿಂಗಲ್ ಬೆಲ್...' ಹಾಡು ಸಹ ಮೊಳಗುತ್ತದೆ.

'ಕ್ರಿಸ್‌ಮಸ್ ಆಲಂ
ಕಾರಿಕ ವಸ್ತುಗಳೆಲ್ಲ ನಮ್ಮಲ್ಲಿ ಲಭ್ಯ. ಅವುಗಳನ್ನು ಗ್ರಾಹಕರಿಗೆ ಪರಿಚಯಿಸಲು ಈ ಮನೆ ನಿರ್ಮಿಸಿದ್ದೇವೆ. ಜನರು ಬಯಸಿದರೆ ಅವರ ಮನೆಗೇ ಬಂದು ಇದೇ ಮಾದರಿಯ ಮನೆ ನಿರ್ಮಿಸುತ್ತೇವೆ’ ಎಂದು ಲಕ್ಷ್ಮಿ ಮಾಲ್‌ನ ಮುಂಬೈ ಸೆಂಟ್ರಲ್ ಮಳಿಗೆಯವರು ತಿಳಿಸಿದರು.

ಇದೇ ಮಾಲ್‌ನ ‘ಸಪ್ನ ಪುಸ್ತಕ’ ಮಳಿಗೆಯಲ್ಲೂ ಕ್ರಿಸ್‌ಮಸ್ ರಂಗು ಆವರಿಸಿದೆ. ದೀಪಾಲಂಕಾರ ಹಾಗೂ ನಕ್ಷತ್ರಗಳನ್ನು ತೂಗು ಹಾಕಲಾಗಿದೆ. ಇನ್ನು ’ಯು–ಮಾಲ್‌ನಲ್ಲಿ ಕಳೆದ ಭಾನುವಾರದ ಕ್ರಿಶ್ಚಿಯನ್ ಸಮುದಾಯದವರು ಬಂದು ಮಕ್ಕಳಿಗೆ ಚಾಕೊಲೆಟ್ ನೀಡಿ ಹಬ್ಬ ಆಚರಿಸಿದರು. ನಗರದ ಆರ್ಟಿಜಾ, ವಿಶಾಲ್ ಮಾರ್ಟ್ ಸೇರಿದಂತೆ ಪುಟ್ಟ ಪುಟ್ಟ ಶಾಪಿಂಗ್ ಮಾಲ್ ಗಳು ಹಬ್ಬದ ತಯಾರಿಯಲ್ಲಿವೆ.

ಗ್ರಾಹಕರ ಖರೀದಿ ಭರಾಟೆ

ಕ್ರಿಸ್‌ಮಸ್ ರಂಗು ಬಜಾರ್‌ಗಳಲ್ಲಿ ಆವರಿಸಿದೆ. ಆಲಂಕಾರಿಕ ಗಂಟೆ, ಬಾಲಯೇಸು, ಆತನ ತಾಯಿ ಮರಿಯಾ, ತಂದೆ ಜೋಸೆಫ್ ಅವರ ಬೊಂಬೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಯೇಸವಿನ ಬಾಲ್ಯ ಹಾಗೂ ಜೀವನ ಚರಿತ್ರೆ ಸಾರುವ ಆಕರ್ಷಕ ಬೊಂಬೆಗಳಿವೆ. ಕ್ರಿಸ್‌ಮಸ್ ಟ್ರೀ, ಬಗೆಬಗೆಯ ಕೇಕ್‌ಗಳನ್ನು ತಯಾರಿಸಿ ಇಡಲಾಗಿದೆ. ಅಂಗಡಿ ಮುಂದೆ ಕ್ರಿಸ್‌ಮಸ್ ಕೇಕ್ ತಯಾರಿಸಿ ಕೊಡಲಾಗುವುದು ಎಂಬ ಫಲಕ ಹಲವೆಡೆ ಹಾಕಲಾಗಿದೆ.

ಕ್ರಿಸ್‌ಮಸ್‌ ಗೊಂಬೆಗಳ ಆಟೊ!

ನಗರದ ಲಕ್ಷ್ಮಿ ಮಾಲ್‌ನ ಎರಡನೇ ಮಹಡಿಯಲ್ಲಿರುವ ಮುಂಬೈ ಸೆಂಟ್ರಲ್ ಮಾರಾಟ ಮಳಿಗೆಯಲ್ಲಿ ಆಟೊವೊಂದು ಮಕ್ಕಳ ಮನಸ್ಸು ಸೆಳೆಯುತ್ತಿದೆ. ಕ್ರಿಸ್‌ಮಸ್‌ಗಾಗಿಯೇ ಈ ಆಟೊಗೆ ವಿಶೇಷ ರೂಪ ನೀಡಲಾಗಿದೆ. ಒಳಗೆ ಮಕ್ಕಳಿಗೆ ಇಷ್ಟವಾಗುವ ಗೊಂಬೆಗಳನ್ನು ಇಡಲಾಗಿದೆ. ಡ್ರೈವಿಂಗ್ ಸೀಟಿನಲ್ಲಿ ಗೊಂಬೆಯೊಂದು ಕುಳಿತು ವಾಹನ ಚಾಲನೆ ಮಾಡುವಂತಿದೆ. ಹೊರಗೆ ಶುಭಾಶಯ ಕೋರುವ ಸ್ಟಿಕ್ಕರ್, ನಟರ ಪೋಸ್ಟರ್ ಅಂಟಿಸಲಾಗಿದೆ. ಹೊರಆವರಣದಲ್ಲಿ ಆಲಂಕಾರಿಕ ಗಂಟೆಗಳನ್ನು ಸಾಲಾಗಿ ತೂಗು ಹಾಕಲಾಗಿದೆ.

ಕ್ಯಾರಲ್ ಸಂಗೀತದ ಮೋಡಿ

ಹಾಡಿನ ಮೂಲಕ ಯೇಸುವಿನ ಜೀವನ ವೃತ್ತಾಂತ ಹೇಳುವ ಕ್ಯಾರಲ್ ಸಂಗೀತ ಎಲ್ಲ ಧರ್ಮೀಯರನ್ನು ಸೆಳೆಯುತ್ತದೆ. ಕಳೆದ ಭಾನುವಾರ ನಗರದ ಬಿಗ್‌ ಬಜಾರ್‌ನಲ್ಲಿ ಇಂಥ ಕ್ಯಾರಲ್ ಸಂಗೀತ ಕಾರ್ಯಕ್ರಮ ನಡೆಯಿತು. ಗ್ರಾಹಕರು ಹಾಗೂ ಅಲ್ಲಿನ ಸಿಬ್ಬಂದಿ ಕ್ಯಾರಲ್‌ ಸಂಗೀತಕ್ಕೆ ತಲೆದೂಗಿದರು. ಕ್ರಿಸ್‌ಮಸ್‌ ದಿನವೂ ವಿವಿಧೆ ಶಾಪಿಂಗ್‌ ಮಾಲ್‌ಗಳನ್ನು ಕ್ಯಾರಲ್ ತಂಡಗಳು ಕ್ರಿಸ್‌ಮಸ್‌ ಗೀತೆಗಳನ್ನು ಹಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT