ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರಿಗೆ ‘ಸಂಚಾರಿ ವಿಶ್ರಾಂತಿಗೃಹ’

ಬೆಂಗಳೂರಿನ ‘ಸುವಿಧಾ ಕ್ಯಾಬಿನ್‌’ ಮಾದರಿಯಲ್ಲಿ ಹುಬ್ಬಳ್ಳಿ–ಧಾರವಾಡದಲ್ಲಿ ಸೌಲಭ್ಯ
Last Updated 23 ಮಾರ್ಚ್ 2021, 2:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕೆಲಸದ ಮಧ್ಯೆ ವಿಶ್ರಾಂತಿ ಪಡೆಯಲು ಬೆಂಗಳೂರಿನಲ್ಲಿ ಬಿಬಿಎಂಪಿ ನಿರ್ಮಿಸಿರುವ ‘ಸುವಿಧಾ ಕ್ಯಾಬಿನ್‌’ ಮಾದರಿಯಲ್ಲಿ ಮಹಾನಗರ ಪಾಲಿಕೆ ‘ಸಂಚಾರಿ ವಿಶ್ರಾಂತಿಗೃಹ’ ನಿರ್ಮಿಸಲು ಯೋಜನೆ ರೂಪಿಸಿದೆ.

ವಿಶ್ರಾಂತಿಗೆ ಕಾಯಂ ಕಟ್ಟಡದ ವ್ಯವಸ್ಥೆ ಮಾಡಬೇಕು ಎನ್ನುವುದು ಪೌರ ಕಾರ್ಮಿಕರ ಬಹುವರ್ಷಗಳ ಬೇಡಿಕೆಯಾಗಿದೆ. ಪಾಲಿಕೆ ಪ್ರಾಯೋಗಿಕವಾಗಿ ಒಂದು ‘ಸಂಚಾರಿ ವಿಶ್ರಾಂತಿಗೃಹ’ ನಿರ್ಮಿಸಲಿದೆ. ಇದಕ್ಕೆ ವ್ಯಕ್ತವಾಗಲಿರುವ ಅಭಿಪ್ರಾಯ ಪರಿಗಣಿಸಿ ಉಳಿದೆಡೆ ಸ್ವಂತ ಕಟ್ಟಡ ನಿರ್ಮಿಸಬೇಕೊ; ಸಂಚಾರಿ ಕಟ್ಟಡ ನಿರ್ಮಾಣ ಮಾಡಬೇಕೊ ಎನ್ನುವುದನ್ನು ನಿರ್ಧರಿಸಲಿದೆ.

ಸಂಚಾರಿ ವಿಶ್ರಾಂತಿಗೃಹದಲ್ಲಿ ಪೌರ ಕಾರ್ಮಿಕರಿಗೆ ಕೆಲಸದ ನಡುವೆ ಉಪಾಹಾರ, ಊಟ ಮಾಡಲು; ದಣಿವು ಆರಿಸಿಕೊಳ್ಳಲು, ಬಟ್ಟೆ ಬದಲಾಯಿಸಲು ಕೊಠಡಿ, ಶೌಚಾಲಯವಿರಲಿದೆ. ಒಂದೇ ವಿಶ್ರಾಂತಿಗೃಹದಲ್ಲಿ ಪುರುಷ ಮತ್ತು ಮಹಿಳಾ ಪೌರ ಕಾರ್ಮಿಕರಿಗೆ ಪ್ರತ್ಯೇಕವಾದ ವ್ಯವಸ್ಥೆಯೂ ಇರಲಿದೆ. ಇದಕ್ಕಾಗಿ 15ನೇ ಹಣಕಾಸು ಯೋಜನೆಯಡಿ ಒಟ್ಟು ₹2.40 ಕೋಟಿ ಮೀಸಲಿಡಲಾಗಿದ್ದು, ಒಂದು ಸಂಚಾರಿ ವಿಶ್ರಾಂತಿಗೃಹ ನಿರ್ಮಾಣಕ್ಕೆ ಅಂದಾಜು ₹10 ಲಕ್ಷ ವೆಚ್ಚವಾಗಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ವಿಶ್ರಾಂತಿಗಾಗಿ ಕಾಯಂ ಕಟ್ಟಡಗಳನ್ನು ನಿರ್ಮಿಸಿದರೆ ಅವಳಿ ನಗರಗಳಲ್ಲಿ 12 ಕಾಯಂ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದೇ ಅನುದಾನದಲ್ಲಿ 26 ಸಂಚಾರಿ ವಸತಿಗೃಹಗಳನ್ನು ನಿರ್ಮಿಸಬಹುದು ಎನ್ನುವುದು ಪಾಲಿಕೆ ಲೆಕ್ಕಾಚಾರ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆಯ ಪರಿಸರ ಎಂಜಿನಿಯರ್‌ ಬಿ.ಎಂ. ಮಲ್ಲಿಕಾರ್ಜುನ ‘ಪೌರ ಕಾರ್ಮಿಕರು ಬೆಳಿಗ್ಗೆ 6 ಗಂಟೆಗೆ ಬಂದು ಮಧ್ಯಾಹ್ನ 2ರ ತನಕ ಕೆಲಸ ಮಾಡುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿಯೇ ಉಪಾಹಾರ ಹಾಗೂ ಮಧ್ಯಾಹ್ನದ ಊಟ ಮಾಡುವುದು ಕಷ್ಟ. ಶೌಚಾಲಯಕ್ಕೂ ಹೋಗಲು ವ್ಯವಸ್ಥೆಯಿಲ್ಲದೆ ಪರದಾಡಬೇಕಾಗುತ್ತದೆ. ಆದ್ದರಿಂದ ಸಂಚಾರಿ ವಿಶ್ರಾಂತಿಗೃಹ ನಿರ್ಮಿಸಿದರೆ ಪೌರಕಾರ್ಮಿಕರಿಗೆ ಅನುಕೂಲವಾಗುತ್ತದೆ’ ಎಂದರು.

ಪೌರ ಕಾರ್ಮಿಕ ಮಹಿಳೆ ಮಂಜುಳಾ ಹೆಬ್ಸಿ ‘ಕೆಲಸ ಮಾಡುವ ನಡುವೆ ವಿಶ್ರಾಂತಿ ಹಾಗೂ ಊಟಕ್ಕಾಗಿ ಅವರಿವರ ಮನೆಯ ಮುಂದೆ ಅಥವಾ ಮರದ ನೆರಳಿನಲ್ಲಿ ಕುಳಿತುಕೊಳ್ಳಬೇಕಾಗಿದೆ. ಬಹಳಷ್ಟು ಪೌರ ಕಾರ್ಮಿಕರು ತಮ್ಮ ಮಗುವಿಗೆ ಹಾಲುಣಿಸಲು ಸೂಕ್ತ ಜಾಗಕ್ಕಾಗಿ ತಡಕಾಡಬೇಕಾಗುತ್ತಿದೆ. ಆದಷ್ಟು ಬೇಗನೆ ವಿಶ್ರಾಂತಿಗೃಹದ ವ್ಯವಸ್ಥೆ ಮಾಡಬೇಕು’ ಎಂದರು.

ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 2ರ ತನಕ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರು

ಪ್ರಾಯೋಗಿಕವಾಗಿ ಸಂಚಾರಿ ವಿಶ್ರಾಂತಿಗೃಹ ನಿರ್ಮಾಣ

ಯೋಜನೆಗಾಗಿ ₹2.40 ಕೋಟಿ ಅನುದಾನ ಮೀಸಲು

***

ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು ಎನ್ನುವುದು ಪೌರ ಕಾರ್ಮಿಕರ ಬಹುವರ್ಷಗಳ ಬೇಡಿಕೆಯಾಗಿದ್ದು ಆದಷ್ಟು ಬೇಗನೆ ಈ ಕಾರ್ಯ ಆರಂಭಿಸಲಾಗುವುದು.

- ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT