ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭೇಟಿ: ಹದಗೆಟ್ಟ ರಸ್ತೆಗಳಿಗೆ ದುರಸ್ತಿ ಭಾಗ್ಯ

ರಾಷ್ಟ್ರಪತಿಗೆ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಮುಂದುವರಿದ ಸಿದ್ಧತೆ
Last Updated 23 ಸೆಪ್ಟೆಂಬರ್ 2022, 4:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೆ. 26ರಂದು ‘ಪೌರ ಸನ್ಮಾನ’ ಹಮ್ಮಿಕೊಂಡಿರುವ ಬೆನ್ನಲ್ಲೇ, ನಗರದ ಹದಗೆಟ್ಟ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಕ್ಕಿದೆ. ಸ್ವಚ್ಛತಾ ಕೆಲಸಗಳು ಭರದಿಂದ ಸಾಗಿವೆ.

ರಾಷ್ಟ್ರಪತಿ ಅವರು ಆಗಮಿಸುವ ವಿಮಾನ ನಿಲ್ದಾಣದಿಂದ ದೇಶಪಾಂಡೆ ನಗರದ ಜಿಮ್ಖಾನ ಮೈದಾನದವರೆಗಿನ ಮಾರ್ಗಗಳಲ್ಲಿರುವ ತಗ್ಗು–ಗುಂಡಿಗಳನ್ನು ಪಾಲಿಕೆಯು ಸಮರೋಪಾದಿಯಲ್ಲಿ ಮುಚ್ಚುತ್ತಿದೆ. ಹಳೇ ವಿದ್ಯುತ್ ಕಂಬಗಳನ್ನು ತೆರವು ಮಾಡುತ್ತಿರುವ ಹೆಸ್ಕಾಂ, ಹೊಸ ಕಂಬಗಳನ್ನು ಅಳವಡಿಸುತ್ತಿದೆ.

ನೆಲ ಕಚ್ಚಿದ್ದ ಮೈದಾನದ ಬಳಿ ಹರಿಯುವ ನಾಲೆಯ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೈದಾನದ ಸುತ್ತಲೂ ಇರುವ ರಸ್ತೆಗಳ ಬದಿಯ ಕಳೆಗಳನ್ನು ಕಿತ್ತು ಹಾಕಿ, ದೂಳನ್ನು ಗುಡಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಗೋಕುಲ ರಸ್ತೆಯ ಹೋಟೆಲ್ ಫರ್ನ್ ಮತ್ತು ಸವಾಯಿ ಗಂಧರ್ವ ಸಭಾಭವನದ ಬಳಿಯ ನಾಲಾದಲ್ಲಿ ಹೂಳೆತ್ತಿ, ತಡೆಗೋಡೆ ಮೇಲೆ ತಂತಿ ಬೇಲಿ ಹಾಕಲು ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದರು.

ವೇದಿಕೆಯಲ್ಲಿ 6 ಮಂದಿ: ಪೌರ ಸನ್ಮಾನ ಸಮಾರಂಭದ ವೇದಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಧಾರವಾಡದ ಐಐಐಟಿ ಆಡಳಿತ ಮಂಡಳಿಯ ಚೇರ್ಮನ್ ಸುಧಾಮೂರ್ತಿ ಹಾಗೂ ಮತ್ತೊಬ್ಬ ಪ್ರಮುಖ ಅತಿಥಿ ಸೇರಿದಂತೆ ಒಟ್ಟು 6 ಮಂದಿಗೆ ಆಸನ ಕಾಯ್ದಿರಿಸಲಾಗಿದೆ. ರಾಷ್ಟ್ರಪತಿಯ ಬಲಭಾಗದಲ್ಲಿ ರಾಜ್ಯಪಾಲರು ಹಾಗೂ ಎಡಭಾಗದಲ್ಲಿ ಮುಖ್ಯಮಂತ್ರಿ ಆಸೀನರಾಗಲಿದ್ದಾರೆ.

ವೇದಿಕೆ ಮುಂಭಾಗದ ಆಸನಗಳ ಮೊದಲ ಸಾಲಿನಲ್ಲಿ ರಾಷ್ಟ್ರಪತಿ ಅವರ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ವೈದ್ಯ, ಕರ್ತವ್ಯನಿರತ ವಿಶೇಷಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಇರಲಿದ್ದಾರೆ.

ಸಂಘ–ಸಂಸ್ಥೆಗಳಿಗೆ ಆಮಂತ್ರಣ: ಸಮಾರಂಭದಲ್ಲಿ ಭಾಗವಹಿಸುವಂತೆ ಮೇಯರ್ ಈರೇಶ ಅಂಚಟಗೇರಿ ಅವರು ಅವಳಿನಗರದ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ತಮ್ಮ ಲೆಟರ್‌ಹೆಡ್‌ನಲ್ಲಿ ಆಮಂತ್ರಣ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT