ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರ ಕಾರ್ಮಿಕರಿಗೆ ಸೌಲಭ್ಯ ದೊರೆಯುತ್ತಿಲ್ಲ’

Last Updated 24 ಆಗಸ್ಟ್ 2022, 16:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹು–ಧಾ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗೆ ಶೇ 90ರಷ್ಟು ಸೌಲಭ್ಯ ದೊರೆಯುತ್ತಿಲ್ಲ. ಹದಿನೈದು ದಿನಗಳಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿಕೊಡುವ ಭರವಸೆಯನ್ನು ಪಾಲಿಕೆ ಆಯುಕ್ತರು ನೀಡಿದ್ದಾರೆ’ ಎಂದುರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣಕೋಟೆ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಕಳೆದ ಬಾರಿ ಭೇಟಿ ನೀಡಿದ್ದಾಗ ಇದೇ ಸಮಸ್ಯೆಯಿತ್ತು. ಆಗಲೇ ಸೂಚನೆ ನೀಡಿ ಹೋಗಿದ್ದೆ. ಆದರೂ ಪೌರ ಕಾರ್ಮಿಕರ ಸಮಸ್ಯೆಗೆ ಪರಿಹಾರ ದೊರಕಿಲ್ಲ. ರಕ್ಷಣಾ ಸಲಕರಣೆಗಳಾದ ಮಾಸ್ಕ್, ಕೈಗವಸು, ಗಮ್‌ ಬೂಟ್‌ಗಳನ್ನು ವಿತರಿಸಿಲ್ಲ. ಅವರ ಸಮಸ್ಯೆಗೆ ಪರಿಹಾರ ಕಲ್ಪಿಸಿ ವರದಿ ನೀಡುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.

‘ಪೌರ ಕಾರ್ಮಿಕರ ಸೌಲಭ್ಯಕ್ಕಾಗಿ ಪಾಲಿಕೆಯಲ್ಲಿ ₹2.40 ಕೋಟಿ ಅನುದಾನ ಮೀಸಲಿಡಲಾಗಿದೆ. ಅದರಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲು ತಿಳಿಸಲಾಗಿದೆ. ಮೊಟ್ಟೆ ಸಹಿತ ₹30ಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಒಂದು ವರ್ಷದಿಂದ ಸರಿಯಾಗಿ ಆಹಾರ ಪೂರೈಕೆ ಮಾಡದಿರುವುದು ಗಮನಕ್ಕೆ ಬಂದಿದೆ. ಹೆಚ್ಚುವರಿಯಾಗಿ ₹15 ಸೇರಿಸಿ ಗುಣಮಟ್ಟದ ಆಹಾರ ಪೂರೈಸಲು ಸೂಚಿಸಿದ್ದೇನೆ’ ಎಂದರು.

‘ಕಾರ್ಮಿಕರನ್ನು ಗುತ್ತಿಗೆದಾರರು ಕೀಳಾಗಿ ಕಾಣುತ್ತಿದ್ದಾರೆ. ಅವರಿಗೆ ನೀಡಬೇಕಾದ ವೇತನ ಕಡಿತಗೊಳಿಸಿ ನೀಡುತ್ತಿದ್ದಾರೆ. ಬ್ಯಾಂಕ್ ಪಾಸ್ ಬುಕ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಇಟ್ಟುಕೊಳ್ಳುತ್ತಿದ್ದಾರೆ. ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು. ದೌರ್ಜನ್ಯ ಎಸಗಿರುವ ಗುತ್ತಿಗೆದಾರರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಆಯುಕ್ತ ಡಾ.ಬಿ. ಗೋಪಾಕೃಷ್ಣ, ಪ್ರಿಯದರ್ಶಿನಿ ಎಚ್., ಕೆ.ಪಿ. ವೆಂಕಟೇಶ, ಜಗದೀಶ ಹಿರೇಮನಿ, ಮಂಜುನಾಥ ಡೊಂಬರ, ರೇಣುಕಪ್ಪ ಕೇಲೂರ, ವಿದ್ಯಾ ನರಸಪ್ಪನವರ, ಹನುಮಂತಪ್ಪ ಮಾಲಪಲ್ಲಿ, ಭೀಮರಾವ್ ಸವಣೂರ, ಲಲಿತಾ ಸಾತೇನಹಳ್ಳಿ, ಜಿ.ವಿ. ಪಾಟೀಲ, ಎಚ್.ಎ. ಕೊಚ್ಚರಗಿ ಇದ್ದರು.

ಕೋಟ್‌...

‘ರಾಜ್ಯದಾದ್ಯಂತ 50ಸಾವಿರ ಕಾರ್ಮಿಕರನ್ನು ನೇರ ನೇಮಕಾತಿಯಲ್ಲಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’
ಎಂ. ಶಿವಣ್ಣಕೋಟೆ, ಅಧ್ಯಕ್ಷ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT