ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ: ಖಾಲಿ ನಿವೇಶನ ಸ್ವಚ್ಛ ಮಾಡೋರಿಲ್ಲ, ಸಂಕಷ್ಟ ಕೇಳೋರಿಲ್ಲ

Last Updated 14 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಅವಳಿ ನಗರದಲ್ಲಿಅಂದಾಜು 14 ಲಕ್ಷ ಜನಸಂಖ್ಯೆ ಇದ್ದು, 750ಕ್ಕೂ ಹೆಚ್ಚು ಬಡಾವಣೆಗಳಿವೆ. ಅವುಗಳಲ್ಲಿ 450 ಖಾಸಗಿ ಬಡಾವಣೆಗಳಿವೆ. ಇವುಗಳಲ್ಲಿ ಒಟ್ಟು 2,59,623 ನಿವೇಶನಗಳಿದ್ದು, 1,53,725 ವಸತಿ ನಿವೇಶನಗಳು ಮತ್ತು 25,814 ವಾಣಿಜ್ಯ ನಿವೇಶನಗಳು. ಇವುಗಳಲ್ಲಿ ಬರೋಬ್ಬರಿ 80,084 ನಿವೇಶನಗಳು ಖಾಲಿ ಬಿದ್ದಿವೆ.

ವಾಸ್ತವದಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಇನ್ನೂ ಹೆಚ್ಚಿವೆ. ಏಕೆಂದರೆ ಖಾಲಿ ನಿವೇಶನದಲ್ಲಿ ಒಂದು ಗುಡಿಸಲು ಕಟ್ಟಿಕೊಂಡಿದ್ದರೂ, ಅಲ್ಲಿ ಕಟ್ಟಡವಿದೆ ಎಂದು ಪಾಲಿಕೆ ಗುರುತಿಸುವುದರಿಂದ ಖಾಲಿ ನಿವೇಶನಗಳ ಸಂಖ್ಯೆ ಈಗಿರುವುದಕ್ಕಿಂತ 10–15 ಸಾವಿರ ಹೆಚ್ಚಾಗುತ್ತದೆ. ನಗರಾಭಿವೃದ್ಧಿ ಇಲಾಖೆಯಿಂದ ಅಭಿವೃದ್ಧಿ ಹೊಂದಿ ಪಾಲಿಕೆಗೆ ಹಸ್ತಾಂತರವಾದ ಬಹುತೇಕ ಬಡಾವಣೆಗಳಲ್ಲಿನ ನಿವೇಶನಗಳು ಸಹ ಖಾಲಿ ಬಿದ್ದಿವೆ. ನಿವೇಶನ ಖರೀದಿ ಮಾಡಿದವರು 15-20 ವರ್ಷಗಳಾದರೂ ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿಲ್ಲ.

ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾಗಿರುವುದರಿಂದ ಖಾಲಿ ನಿವೇಶನಗಳ ಸಂಖ್ಯೆ ಕಡಿಮೆ. ಆದರೂ, ನಗರದ ಪ್ರಮುಖ ರಸ್ತೆಗಳ ಹಾಗೂ ಬಡಾವಣೆಗಳಲ್ಲಿ ಅಲ್ಲಲ್ಲಿ ಖಾಲಿ ನಿವೇಶನಗಳು ಸಾಕಷ್ಟಿವೆ. ವಿದ್ಯಾಕಾಶಿ ಧಾರವಾಡದಲ್ಲಿ ಮಾತ್ರ ಪ್ರಮುಖ ರಸ್ತೆಗಳುದ್ದಕ್ಕೂ ಖಾಲಿ ನಿವೇಶನಗಳನ್ನು ಕಾಣಬಹುದು. ಇವುಗಳಲ್ಲಿ ಬಹುತೇಕ ನಿವೇಶನಗಳು ಖಾಸಗಿಯವರದಾಗಿದ್ದು, ಗಿಡಗಂಟಿ ಬೆಳೆದು, ತ್ಯಾಜ್ಯ ವಸ್ತುಗಳು ತುಂಬಿ ನಗರ ಸೌಂದರ್ಯಕ್ಕೆ ಮಾರಕವಾಗಿವೆ. ಅಚ್ಚರಿಯ ಸಂಗತಿಯೆಂದರೆ, ಸೌಲಭ್ಯ ಹೊಂದಿರುವ ಬಡಾವಣೆಗಳಲ್ಲಿನ ನಿವೇಶನಗಳು ಸಹ ಪಾಳು ಬಿದ್ದಿವೆ.

ಖಾಲಿ ನಿವೇಶನಗಳ ಮಾಲೀಕರು ನಿವೇಶನದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಇಲ್ಲವಾದರೆ ಪಾಲಿಕೆಯೇ ಸ್ವಚ್ಛತೆ ಕೈಗೊಂಡು ಅದರ ವೆಚ್ಚವನ್ನು ಮಾಲೀಕರಿಂದ ವಸೂಲು ಮಾಡಬೇಕು ಎಂದು ಕೆಎಂಸಿ ಕಾಯ್ದೆ ಹೇಳುತ್ತದೆ. ಆದರೆ, ಈ ಕಾನೂನು ಬಳಕೆಯಾಗಿದ್ದು ಈವರೆಗೂ ಕಂಡು ಬಂದಿಲ್ಲ. ಕಾಟಾಚಾರಕ್ಕೆಂಬಂತೆ ಅಧಿಕಾರಿಗಳು ಕಳೆದ ವರ್ಷ ಒಂದೆರಡು ಬಾರಿ, ಖಾಲಿ ನಿವೇಶನದ ಮಾಲೀಕರಿಗೆ ಸೂಚನೆ ನೀಡಿ, ದಂಡ ಪಾವತಿಸುವ ಕುರಿತು ಎಚ್ಚರಿಕೆ ನೀಡಿದ್ದರು. ಅಲ್ಲಿಗೇ ಅದು ಮುಕ್ತಾಯವಾಗಿದೆ.

ತಕ್ಕಮಟ್ಟಿಗೆ ಇದ್ದ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರದ ಕಾರಣ, ಖಾಲಿ ನಿವೇಶನಗಳೆಲ್ಲ ಕಸ ಕಡ್ಡಿಗಳಿಂದ ತುಂಬಿವೆ. ಅಕ್ಕಪಕ್ಕದ ನಿವಾಸಿಗಳು ಖಾಲಿ ನಿವೇಶನದಲ್ಲೇ ತ್ಯಾಜ್ಯ ಎಸೆಯುವ ಮೂಲಕ ಅವುಗಳನ್ನು ಇನ್ನಷ್ಟು ಹಾಳುಗೆಡುವುತ್ತಿದ್ದಾರೆ. ಇದು ನಗರ ಸೌಂದರ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.

ನಗರಾಭಿವೃದ್ಧಿ ಇಲಾಖೆಯಿಂದ ಅಭಿವೃದ್ಧಿ ಹೊಂದಿ ಪಾಲಿಕೆಗೆ ಹಸ್ತಾಂತರವಾದ ಬಹುತೇಕ ಬಡಾವಣೆಗಳಲ್ಲಿನ ನಿವೇಶನಗಳು ಸಹ ಖಾಲಿ ಬಿದ್ದಿವೆ. ಬಡಾವಣೆಯಲ್ಲಿನ ನಿವೇಶನ ಖರೀದಿ ಮಾಡಿದವರು ವರ್ಷಗಳಾದರೂ ಅಲ್ಲಿ ಮನೆಗಳನ್ನು ನಿರ್ಮಿಸಿ
ಕೊಂಡಿಲ್ಲ. ಕೆಲವರು ವ್ಯವಹಾರದ ದೃಷ್ಟಿಯಿಂದ ಕಡಿಮೆ ಬೆಲೆಗೆ ನಿವೇಶನ ಖರೀದಿಸಿ, ಉತ್ತಮ ಬೆಲೆಗೆ ಮಾರಾಟ ಮಾಡಲು ಹಾಗೆಯೇ ಬಿಟ್ಟಿದ್ದಾರೆ.

ಸಾವಿರಾರು ಮಂದಿ ವಸತಿ ಸಮಸ್ಯೆ ಎದುರಿಸುತ್ತಿರುವ ದಿನಗಳಲ್ಲಿ ನಗರದಾದ್ಯಂತ ಖಾಲಿ ನಿವೇಶನಗಳು ಖಾಲಿ ಇರುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ, ಉಳ್ಳವರು ಹೂಡಿಕೆಯ ಉದ್ದೇಶದಿಂದ ನಿವೇಶನ ಖರೀದಿಸಿರುವ ಅಂಶ ಬೆಳಕಿಗೆ ಬರುತ್ತದೆ. ಈಗಾಗಲೇ ವಾಸಿಸಲು ಮನೆ ಇರುವ ಹಾಗೂ ಹಲವು ಮನೆಗಳನ್ನು ಹೊಂದಿರುವ ಸ್ಥಿತಿವಂತರು ಲಾಭದ ಉದ್ದೇಶದಿಂದ ನಿವೇಶನ ಖರೀದಿಸಿ ಹಾಗೆ ಬಿಟ್ಟಿದ್ದಾರೆ/ಬಿಡುತ್ತಿದ್ದಾರೆ. ಉತ್ತಮ ಬೆಲೆ ಬಂದಾಗ ಮಾರುವ ಯೋಚನೆ ಅವರದ್ದು. ಇದರಿಂದಾಗಿಯೇ ಪ್ರಮುಖ ಬಡಾವಣೆಗಳಲ್ಲಿನ ಕೆಲವು ನಿವೇಶನಗಳಲ್ಲಿ ತ್ಯಾಜ್ಯ ಸುರಿಯುವುದು, ಗಿಡಗಂಟಿ ಬೆಳೆದಿರುವುದು, ಹಂದಿಗಳ ಸಂಖ್ಯೆ ಹೆಚ್ಚಾಗಿರುವುದು.

ಕೇಶ್ವಾಪುರ, ಕುಸಗಲ್ಲ ರಸ್ತೆ, ಗೋಪನಕಪ್ಪ, ಸುಳ್ಳ ರಸ್ತೆ, ಸಂತೋಷ ನಗರ, ನವನಗರ, ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ ಸುತ್ತಲಿನ ಪ್ರದೇಶಗಳಲ್ಲಿನ ಹೊಸ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸಿರುವ ಮಾಲೀಕರು 10–20 ವರ್ಷವಾದರೂ ಅತ್ತ ಸುಳಿದಿಲ್ಲ. ಪೌರ ಕಾರ್ಮಿಕರು ಬೆಳಿಗ್ಗೆ ಶುಚಿಗೊಳಿಸಲು ಬಂದಾಗ, ಕಸವನ್ನೆಲ್ಲ ಸಂಗ್ರಹಿಸಿ, ನಿವೇಶನದಲ್ಲಿಯೇ ಬೆಂಕಿ ಹಚ್ಚಿ ಹೋಗುತ್ತಾರೆ. ವಿಷಪೂರಿತ ಹೊಗೆಯಿಂದಾಗಿ ಶ್ವಾಸಕೋಶ ಸಂಬಂಧದ ರೋಗಗಳಿಗೆ ಒಳಗಾಗುವಂತಾಗಿದೆ ಎನ್ನುವುದು ಸಾಮಾನ್ಯ ಆರೋಪವಾಗಿದೆ.

‘ಸುತ್ತಮುತ್ತಲಿನ ಖಾಲಿ ನಿವೇಶನಗಳಲ್ಲಿ ಮುಳ್ಳಿನ ಗಿಡಗಂಟಿ ಬೆಳೆದಿರುವುದರಿಂದ ಹಾವು, ಚೇಳು, ಮುಂಗೂಸಿಗಳು ಹೆಚ್ಚಾಗಿವೆ. ರಾತ್ರಿ ವೇಳೆ ಮನೆಯಿಂದ ಹೊರಗೆ ಬರಲು ಭಯ ಪಡುವಂತಾಗಿದೆ. ವಾಹನದ ಮೇಲೆ ಹೋಗುವವರು ಕಸ ತಂದು, ಬಿಸಾಡುತ್ತಾರೆ. ಪಾಳು ಬಿದ್ದಿರುವ ಖಾಲಿ ನಿವೇಶನದಿಂದ ನಮ್ಮ ನೆಮ್ಮದಿಗೇ ಕೊಳ್ಳಿ ಇಟ್ಟಂತಾಗಿದೆ’ ಎಂದು ಕುಸಗಲ್‌ ರಸ್ತೆಯ ಶಿವಗಂಗಾ ಬಡಾವಣೆಯ ಸುಶೀಲಮ್ಮಾ ನರೇಗಲ್‌ ಹೇಳುತ್ತಾರೆ.

ಖಾಲಿ ನಿವೇಶನಗಳಲ್ಲಿ ಬೆಳೆಯುತ್ತಿರುವ ಗಿಡಗಂಟಿಗಳಿಂದ, ಬಿಸಾಡುವ ತ್ಯಾಜ್ಯದಿಂದ ಆಗುತ್ತಿರುವ ತೊಂದರೆ ಬಗ್ಗೆ ಪಾಲಿಕೆಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಸಾಮಾನ್ಯವಾಗಿದೆ. ಖರೀದಿಸಿದ ನಿವೇಶನ ಖಾಲಿ ಬಿಡಬಾರದು, ಅಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಬೇಕು ಎನ್ನುವ ಕುರಿತು ಕೆಎಂಸಿ ಕಾಯ್ದೆಯಲ್ಲಿ ಯಾವುದೇ ನಿಯಮಾವಳಿಗಳು ಇಲ್ಲದಿರುವುದು ಸ್ಥಳೀಯ ನಿವಾಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು 202.3 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. 1962ರಲ್ಲಿ 20 ಕಿ.ಮೀ. ಅಂತರದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳನ್ನು ಒಂದು ಮಾಡಿ ಪಾಲಿಕೆಯನ್ನು ಅಸ್ತಿತ್ವಕ್ಕೆತರಲಾಯಿತು. 1980ರ ನಂತರ ಮಹಾನಗರ ಪಾಲಿಕೆಯಾಗಿ ರೂಪುಗೊಂಡು ವರ್ಷದಿಂದ ವರ್ಷಕ್ಕೆ ವ್ಯಾಪ್ತಿ ಹಿಗ್ಗುತ್ತಾ ಸಾಗಿದೆ. ಜನಸಂಖ್ಯೆ ಹೆಚ್ಚುತ್ತಿದ್ದಂತೆ ವಾಸಸ್ಥಳದ ಬೇಡಿಕೆಯೂ ಹೆಚ್ಚುತ್ತಾ ಹೋಯಿತು. ಅಗತ್ಯಕ್ಕೆ ಅನುಗುಣವಾಗಿ ಸರ್ಕಾರ ತನ್ನಲ್ಲಿನ ನಿವೇಶನಗಳನ್ನು ನಗರಾಭಿವೃದ್ಧಿ ಇಲಾಖೆ ಅಡಿಯಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿದೆ. ಶೇ 80ರಷ್ಟು ಮೂಲ ಸೌಲಭ್ಯಗಳನ್ನು ಒದಗಿಸಿದ್ದರೂ ನಿವೇಶನ ಪಡೆದವರು ಅನೇಕವರ್ಷಗಳಿಂದ ಮನೆ ನಿರ್ಮಿಸಿಕೊಂಡಿಲ್ಲ.

2010–11ರಿಂದ 2018–19ರವರೆಗೆ ಒಟ್ಟು 71 ಖಾಸಗಿ ಬಡಾವಣೆಗಳು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ. ಮೂಲ ಸೌಲಭ್ಯಗಳನ್ನು ಒಳಗೊಳ್ಳದೇ ಮಂಜುನಾಥನಗರ, ಶಕ್ತಿನಗರ, ಜೆ.ಪಿ. ನಗರ, ರಾಜ್ಯ ಸರ್ಕಾರಿ ನೌಕರರ ಸಂಘ ಬಡಾವಣೆ ಸೇರಿದಂತೆ ಬಹುತೇಕ ಬಡಾವಣೆಗಳು ಪಾಲಿಕೆಗೆ ಹಸ್ತಾಂತರವಾಗಿವೆ. ರಾಜಕೀಯ ಒತ್ತಡ, ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷದಿಂದ ನಿವೇಶನದಾರರು ಸಮಸ್ಯೆ ಎದುರಿಸುವಂತಾಗಿದೆ. ಬಡಾವಣೆಯಲ್ಲಿ ಉದ್ಯಾನಕ್ಕಾಗಿ ಜಾಗ ಮೀಸಲಿಡಬೇಕು ಎನ್ನುವ ನಿಯಮವಿದೆ. ಆದರೆ, ಅದಕ್ಕೂ ಜಾಗಬಿಡದೆ ನಿವೇಶನ ಹಂಚಿಕೆ ಮಾಡಲಾಗಿದೆ.

ಖಾಲಿ ನಿವೇಶನ ಹೆಚ್ಚಿರುವ ಪ್ರದೇಶಗಳು: ನಾಗಶೆಟ್ಟಿಕೊಪ್ಪ, ತಾರಿಹಾಳ, ಬೆಂಗೇರಿ, ಸುತಗಟ್ಟಿ, ಉಣಕಲ್‌, ಗೋಪನಕೊಪ್ಪ, ಕೇಶ್ವಾಪುರ, ಗಾಮನಗಟ್ಟಿ, ಭೈರಿದೇವರಕೊಪ್ಪ, ಕೃಷ್ಣಾಪುರ, ಗೋಕುಲ, ರಾಯನಾಳ, ಅಮರಗೋಳ, ಬಮ್ಮಾಪುರ, ಶಿವಗಂಗಾ ಬಡಾವಣೆ, ಕುಬೇರ ಬಡಾವಣೆ, ಸಂತೋಷ ನಗರ.

1983ರಿಂದ ನಿಯಮ ಸಡಿಲ!
‘ಶೇ 80ರಷ್ಟು ಮನೆಗಳು ನಿರ್ಮಾಣವಾದ ನಂತರ ಮಾತ್ರ ಬಡಾವಣೆಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕಾನೂನು ಇತ್ತು. ಅಲ್ಲಿವರೆಗೆ ನಿವೇಶನದಾರರು ಸಹ ಸೌಲಭ್ಯಕ್ಕಾಗಿ ಒತ್ತಾಯ ಮಾಡುವಂತಿರಲಿಲ್ಲ. 1983ರಿಂದ ಈಚೆಗೆ ರಾಜಕೀಯ ಒತ್ತಡದಿಂದಾಗಿ ಪಾಲಿಕೆಯಲ್ಲಿ ಠರಾವು ಪಾಸು ಮಾಡಿ ನಿಯಮಾವಳಿ ಸಡಿಲಗೊಳಿಸಲಾಯಿತು. ನಂತರ ಸರ್ಕಾರದ ಸುತ್ತೋಲೆಗಳು ಸಹ ಅದಕ್ಕೆ ಪೂರಕವಾಗಿ ಬರಲಾರಂಭಿಸಿತು. ಮೂಲ ಸೌಲಭ್ಯ ಕಲ್ಪಿಸಿದರೂ ನಿವೇಶನ ಪಡೆದವರು ಮನೆ ನಿರ್ಮಿಸಿಕೊಳ್ಳಲು 10–20 ವರ್ಷ ವಿಳಂಬ ಮಾಡುತ್ತಿದ್ದಾರೆ’ ಎಂದು ಮಾಜಿ ಮೇಯರ್‌ ಡಾ. ಪಾಂಡುರಂಗ ಪಾಟೀಲ ಹೇಳುತ್ತಾರೆ.

ಕಸ ಎಸೆದರೆ ದಂಡ!
‘ನಿವೇಶನ ಶುಚಿಯಾಗಿಟ್ಟುಕೊಳ್ಳುವಂತೆ ಅನೇಕ ಮಾಲೀಕರಿಗೆ ನೋಟಿಸ್‌ ನೀಡಿದ್ದೇವೆ. ಕೆಲವು ಮಾಲೀಕರ ವಿಳಾಸ ಪತ್ತೆ ಹಚ್ಚಿ ಹೋದಾಗ, ಅವರು ಅಲ್ಲಿರದೆ ಎಲ್ಲೆಲ್ಲಿಯೋ ವಾಸಿಸುತ್ತಿದ್ದಾರೆ. ನಿವೇಶನ ‘ಅನಾಥ’ವಾಗಿರುವುದರಿಂದ ಗಿಡಗಂಟಿಗಳು ಬೆಳೆದು ನಿಂತಿವೆ. ಖಾಲಿ ನಿವೇಶನಗಳಲ್ಲಿ ಕಸ ಎಸೆಯುವವರಿಂದ ಸ್ಥಳದಲ್ಲಿಯೇ ದಂಡ ಕಟ್ಟಿಸಿಕೊಳ್ಳುವ ನಿಯಮಾವಳಿ ಜಾರಿಗೆ ತರಲಾಗುವುದು’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT