ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯ ಅಧಿನಿಯಮದಲ್ಲಿ ಬದಲಾವಣೆ ಅಗತ್ಯ: ಮುಖ್ಯಮಂತ್ರಿ ಬೊಮ್ಮಾಯಿ

ರಾಜ್ಯದಲ್ಲಿ ಒಂದೇ ವರ್ಷದಲ್ಲಿ 117 ಪೊಲೀಸ್ ಠಾಣೆ ನಿರ್ಮಾಣ: ಸಿಎಂ
Last Updated 5 ಸೆಪ್ಟೆಂಬರ್ 2022, 4:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ತಂತ್ರಜ್ಞಾನಗಳ ಆವಿಷ್ಕಾರವಾದಂತೆ ಹೊಸ ಬಗೆಯ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಿಸಲು ಭಾರತೀಯ ಸಾಕ್ಷ್ಯ ಅಧಿನಿಯಮದಲ್ಲಿ ಬದಲಾವಣೆ ತರುವ ಅಗತ್ಯವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೋಕುಲ ರಸ್ತೆ, ವಿದ್ಯಾನಗರ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗಳ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಕಸಬಾಪೇಟೆ, ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಹೊಸ ಬಗೆಯ ಅಪರಾಧಗಳಿಗೆ ಕಡಿವಾಣ ಹಾಕಲು ಕಾಯ್ದೆ ಬದಲಾವಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ನಾವು ಸಹ ಅದಕ್ಕೆ ಸಹಮತ ಸೂಚಿಸಿದ್ದೇವೆ. ಅಪರಾಧಕ್ಕಿಂತ ಮೊದಲು ಕಾನೂನು ಮೇಲುಗೈ ಸಾಧಿಸಬೇಕು’ ಎಂದರು.

ಒಂದೇ ವರ್ಷದಲ್ಲಿ 117 ಪೊಲೀಸ್ ಠಾಣೆ: ‘ರಾಜ್ಯದಲ್ಲಿ ಮೊದಲ ಬಾರಿಗೆ ಒಂದೇ ವರ್ಷದಲ್ಲಿ 117 ಪೊಲೀಸ್ ಠಾಣೆ
ಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಇದು ಮೈಲಿಗಲ್ಲು. ಅಧಿಕಾರಿಗಳು ನೆಪ ಹೇಳದೆ ಸಕಾರಾತ್ಮಕ
ವಾಗಿ ಕಾರ್ಯ ನಿರ್ವಹಿಸಬೇಕು. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಯಾರಿಗೂ ಭಯಪಡಬೇಕಿಲ್ಲ’ ಎಂದು ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಪ್ರಸಕ್ತ ವರ್ಷ 5 ಸಾವಿರ ಪೊಲೀಸ್ ಕಾನ್‌ಸ್ಟೆಬಲ್‌ ಮತ್ತು 900 ಪಿಎಸ್ಐಗಳ ನೇಮಕಾತಿಗೆ ಶೀಘ್ರ ಚಾಲನೆ ನೀಡಲಾಗುವುದು. ಪ್ರತಿ ಠಾಣೆಯಲ್ಲಿ ಮೂವರು ಮಹಿಳಾ ಸಿಬ್ಬಂದಿ ಇರಬೇಕು ಎನ್ನುವ ಹಿನ್ನೆಲೆಯಲ್ಲಿ, ಪ್ರಸ್ತುತ ನೇಮಕಾತಿ ಸಂದರ್ಭದಲ್ಲಿ ಶೇ 20ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು’ ಎಂದರು.

‘ಪೊಲೀಸ್‌ ಇಲಾಖೆಗೆ ಸವಾಲಿನ ವರ್ಷ ಇದಾಗಿತ್ತು. ಹಿಜಾಬ್, ಹುಬ್ಬಳ್ಳಿ ಗಲಭೆ ಸೇರಿದಂತೆ ಅನೇಕ ಪ್ರಕರಣಗಳು ಕಾನೂನು ಸುವ್ಯವಸ್ಥೆ ಹದಗೆಡಿಸುವ ಸಾಧ್ಯತೆಯಿತ್ತು. ಹುಬ್ಬಳ್ಳಿ ಗಲಭೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಹೊತ್ತಿ ಉರಿಯುತ್ತಿತ್ತು. ಲಾಭೂರಾಮ್ ನೇತೃತ್ವದ ತಂಡ ಅದನ್ನು ಸಮರ್ಥವಾಗಿ ನಿಭಾಯಿಸಿದೆ. ನುಸುಳುಕೋರರನ್ನು ಪತ್ತೆ ಹಚ್ಚಲು ಪ್ರತಿ ಠಾಣೆಗೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ರೌಡಿ ಪಟ್ಟಿ ನವೀಕರಿಸಲು ಸಲಹೆ: ‘ಶೇ 90ರಷ್ಟು ಪ್ರಕರಣಗಳು ಪೂರಕ ಸಾಕ್ಷ್ಯಾಧಾರಗಳಿಲ್ಲದೆ ಕೋರ್ಟ್‌ನಲ್ಲಿ ಖುಲಾಸೆಯಾಗುತ್ತವೆ. ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾದರೆ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ, ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ. 30 ವರ್ಷಗಳ ಹಿಂದೆ ರೌಡಿಗಳ ಪಟ್ಟಿಯಲ್ಲಿ ಇದ್ದವರ ಹೆಸರು, ಈಗಲೂ ಇದೆ. ಹಬ್ಬಗಳು ಬಂದಾಗ ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗುತ್ತದೆ. ಬದಲಾವಣೆಯಾದವರ ಹೆಸರನ್ನು ರೌಡಿ ಪಟ್ಟಿಯಿಂದ ತೆಗೆಯಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಮೇಯರ್ ಈರೇಶ ಅಂಚಟಗೇರಿ, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕಮಿಷನರ್ ಲಾಭೂರಾಮ್, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT