ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಣ ಸಂದಾಯ

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಸೂರ್ಯ ಮೂಡಣದಲ್ಲಿ ಉದಯಿಸುತ್ತಿರುವಾಗ ಗ್ಯಾಂಗ್‍ಮನ್ ಪರಸಣ್ಣ, ‘ನಮ್ಮೂರೇ ನಮಗೆ ಸವಿಬೆಲ್ಲ...’ ಹಾಡನ್ನು ಗುನುಗುತ್ತ ಮಣ್ಣಿನ ರಸ್ತೆಯ ಅಂಚಿನಲ್ಲಿ ನಡೆಯುತ್ತಿದ್ದನು. ಕೃಷ್ಣಪ್ಪರ ತೋಟದ ಬದಿಯ ಹಳ್ಳದಲ್ಲಿ ಹುಲುಸಾಗಿ ಬೆಳೆದಿದ್ದ ಕತ್ತಾಳೆ ಗಿಡಗಳನ್ನು ನೋಡಿದನು.

ಆ ಗಿಡಗಳ ರಸಪಟ್ಟೆಗಳಿಂದ ಹತ್ತು ಮಾರು ಉದ್ದದ ಹಗ್ಗ ಆಗುತ್ತದೆ ಎಂದು ಮನಸ್ಸಿನಲ್ಲಿ ಲೆಕ್ಕಚಾರ ಹಾಕುತ್ತ ಗಿಡಗಳ ಕಡೆ ಹೆಜ್ಜೆ ಹಾಕಿ, ಚೀಲದಲ್ಲಿದ್ದ ಕುಡುಗೋಲಿನಿಂದ ಕತ್ತಾಳೆಯ ಒಂದು ರಸ ಪಟ್ಟೆಗೆ ಕಚ್ಚು ಹಾಕಿದನು. ಆ ಗಿಡದ ಬುಡದಲ್ಲಿ ಏನೋ ಸದ್ದಾಯಿತು.

ರಸಪಟ್ಟಿ ಸರಿಸಿ ನೋಡಿದನು. ಗಿಡದ ಬುಡದಲ್ಲಿ ಹದ್ದೊಂದು ಒದ್ದಾಡುತ್ತ ದೂರಕ್ಕೆ ಸರಿಯಲು ಪ್ರಯತ್ನಿಸುತ್ತಿತ್ತು. ಒಂದೆರಡು ಪಟ್ಟಿ ಕಡಿದ ಪರಸಣ್ಣ ಬುಡದಲ್ಲಿದ್ದ ಹದ್ದಿನ ಕಾಲನ್ನು ಹಿಡಿದು ಮೇಲೆತ್ತಿದನು. ಹದ್ದಿನ ರೆಕ್ಕೆಯೊಂದು ಸೀಳಿತ್ತು, ರಕ್ತ ತೆಳುವಾಗಿ ಹರಿದು ರೆಕ್ಕೆಯ ಮೇಲೆ ಅಲ್ಲಲ್ಲಿ ಮಡುಗಟ್ಟಿತ್ತು. ಪರಸಣ್ಣನಿಗೆ ಕನಿಕರ ಮೂಡಿತು. ಒಂದು ರಸಪಟ್ಟೆಯಿಂದ ತೆಳ್ಳನೆಯ ಉರಿ ಸೀಳಿದನು.

ನಾಲ್ಕೈದು ಚಿಕ್ಕ ಕಡ್ಡಿಗಳನ್ನು ಆಯ್ದು ತನ್ನ ಕಾಲಿನಿಂದ ಹದ್ದಿನ ಕಾಲನ್ನು ಮೆದುವಾಗಿ ತುಳಿದುಕೊಂಡು, ಹದ್ದಿನ ರೆಕ್ಕೆಯ ಮೇಲೆ ಕಡ್ಡಿಗಳನ್ನು ಹರಡಿ ಹರಿದ ರೆಕ್ಕೆಯನ್ನು ಜೋಡಿಸಿ, ನಾಜೂಕಿನಿಂದ ಬಿಗಿಯಾಗಿ ಕಟ್ಟಿದನು. ರಸ್ತೆಯ ತಗ್ಗೊಂದರಲ್ಲಿ ಮಳೆ ನೀರಿನ ಜೊತೆ ಹರಿದು ಬಂದಿದ್ದ ತೆಂಗಿನ ಚಿಪ್ಪನ್ನು ಆಯ್ದುಕೊಂಡು ಬಂದು ಹದ್ದಿನ ಮುಂದೆ ನೀರು ಇಟ್ಟು ಹೊರಟನು.

ಅಂದು ಸಂಜೆ ಪರಸಣ್ಣ ಮನೆಗೆ ಹಿಂದಿರುಗುವಾಗ ಕತ್ತಾಳೆ ಗಿಡದ ಬಳಿ ಬಂದು ಬುಡ ನೋಡಿದನು. ಆಗ, ಹದ್ದು ಕಣ್ಣು ಮಿಟುಕಿಸುತ್ತಾ ನಿತ್ರಾಣವಾಗಿ ಕೂತಿತ್ತು. ಓಡಾಡುವ ಶಕ್ತಿ ಕಳೆದುಕೊಂಡಿತ್ತು. ಬುಡದ ಹಿಂದೆ ಸರಿದುಕೊಳ್ಳಲು ಪ್ರಯತ್ನಿಸುತ್ತಿತ್ತು. ಪರಸಣ್ಣ ಅಲ್ಲೇ ಮುರಿದು ಬಿದ್ದಿದ್ದ ಒಂದು ಮರದ ಮೇಲೆ ಕಟ್ಟಿದ್ದ ಗೆದ್ದಲಿನ ಮಣ್ಣನ್ನು ಕೆದರಿದಾಗ ಒಂದಷ್ಟು ಗೆದ್ದಲು ಹುಳುಗಳು ಸಿಕ್ಕವು. ಅವನ್ನು ತಂದು ಚಿಪ್ಪಿನ ಒಳಗೆ ಹಾಕಿ ಮನೆಗೆ ಹಿಂದಿರುಗಿದನು.

ಪರಸಣ್ಣ ಒಂದು ತಿಂಗಳ ಕಾಲ ಆ ಹದ್ದಿಗೆ ನೀರು, ಅನ್ನದ ಅಗುಳುಗಳನ್ನು ಹಾಕಿದ್ದರ ಫಲವಾಗಿ ಅದರ ಗಾಯ ವಾಸಿಯಾಯಿತು. ಹದ್ದು ಹಾರಲು ಶುರು ಮಾಡಿತು. ಪ್ರತಿ ದಿನ ಮುಂಜಾನೆ - ಸಂಜೆ ಈ ರಸ್ತೆಯಲ್ಲಿ ಹೋಗುವಾಗ ಪರಸಣ್ಣನ ಪಕ್ಕದಲ್ಲಿ ಕೆಳಗೆ ಇಳಿದು ಒಂದಷ್ಟು ದೂರ ಆತನ ಮುಂದೆ ನಡೆದು ಹಾರಿ ಹೋಗುತ್ತಿತ್ತು. ಒಂದು ದಿನ ಪರಸಣ್ಣ ಹಾದು ಹೋಗುವಾಗ, ‘ಈ ಕತ್ತಾಳೆಯ ಗಿಡಗಳನ್ನು ಅಂದು ಕಡಿಯಲು ಆಗಲಿಲ್ಲ, ಹಾಗಾಗಿ ಈ ದಿನ ಕಡಿಯೋಣ’ ಎಂದು ಆಲೋಚಿಸಿದನು.

ಹಾಗೇ, ಗಿಡಗಳನ್ನು ವೇಗವಾಗಿ ಕಡಿಯುವಾಗ ಆದರೊಳಗೆ ಒಂದು ಪಟ್ಟಿಯ ಮೇಲೆ ಮಲಗಿದ್ದ ನಾಗರ ಹಾವಿನ ಬಾಲದ ತುದಿ ಕತ್ತರಿಸಿದನು. ಆದರೆ, ಅದನ್ನು ಗಮನಿಸದೆ ರಸಪಟ್ಟೆಗಳನ್ನು ಒಣಗಲು ಬಿಟ್ಟು ಹೊರಟು ಹೋದನು. ಹಾವು ನೋವಿನಿಂದ ಬಿಲ ಸೇರಿಕೊಂಡು ರಾತ್ರಿಯೆಲ್ಲಾ ಸುಧಾರಿಸಿಕೊಂಡು ಇವನನ್ನು ಕಚ್ಚಲು ಸಿಟ್ಟಿನಿಂದ ಕಾಯತೊಡಗಿತು.

ಮರುದಿನ ಮುಂಜಾನೆ ಪರಸಣ್ಣ, ಕೃಷ್ಣಪ್ಪರ ತೋಟದ ಸಮೀಪ ಹಾಡನ್ನು ಹೇಳುತ್ತ ಸಂತೋಷದಿಂದ ಬರುವಾಗ ಕತ್ತಾಳೆ ಗಿಡದ ಒಣಗಿದ ಪೊದೆಯೊಳಗೆ ಸೇರಿಕೊಂಡಿದ್ದ ನಾಗರಹಾವು ನೋವು, ಆಕ್ರೋಶದಿಂದ ನಿಧಾನವಾಗಿ ನುಸುಳಿಕೊಂಡು ಬಂದಿತು. ಇದ್ಯಾವುದರ ಪರಿವೇ ಇಲ್ಲದೆ ಪರಸಣ್ಣ ನಡೆಯುತ್ತಿದ್ದನು. ಹಾವು ಅವನನ್ನು ಹಿಂಬಾಲಿಸಿಕೊಂಡು ಹೊರಟಿತು.

ಎಂದಿನಂತೆ ಪರಸಣ್ಣನನ್ನು ನೋಡಲು ಬರುತ್ತಿದ್ದ ಹದ್ದು ಇದನ್ನು ಆಕಾಶದಿಂದಲೇ ಗಮನಿಸಿತು. ಅದು ಹಿಂದಿನಿಂದ ಬಂದು ತನ್ನ ಬಲವಾದ ಕಾಲುಗಳಿಂದ ಹಾವನ್ನು ಎತ್ತಿಕೊಂಡು ಪರಸಣ್ಣನ ಮುಂದಿನಿಂದ ಹಾರಿತು. ಅದನ್ನು ನೋಡಿದ ಪರಸಣ್ಣನ ಕಣ್ಣುಗಳು ಸಂತೋಷದಿಂದ ತೇವಗೊಂಡವು. ಹದ್ದು ಋಣವನ್ನು ಪ್ರೀತಿಯಿಂದ ಸಂದಾಯ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT