ಶುಕ್ರವಾರ, ಜುಲೈ 1, 2022
27 °C
ಬಣ್ಣ ಎರಚಿ ಸಂಭ್ರಮಿಸಿದ ಯುವಜನತೆ, ನೃತ್ಯದ ಹುಮ್ಮಸ್ಸು

ಹುಬ್ಬಳ್ಳಿ: ರಂಗಪಂಚಮಿಯ ರಂಗು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಕಳೆಗುಂದಿದ್ದ ಹೋಳಿಯಾಟ ಮಂಗಳವಾರ ರಂಗೇರಿತ್ತು.  ನಗರವೇ ಬಣ್ಣದಲ್ಲಿ ಮಿಂದೆದ್ದತ್ತಿತ್ತು. ಎಲ್ಲಿ ನೋಡಿದರೂ ಬಣ್ಣವೇ ಕಾಣುತ್ತಿತ್ತು. ಬಣ್ಣ ಎರಚಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಖುಷಿಪಟ್ಟರು.

ಬಹುತೇಕ ಓಣಿಗಳಲ್ಲಿ ಮಂಗಳವಾರ ಚಿಣ್ಣರು ಬಲೂನು, ಪ್ಲಾಸ್ಟಿಕ್‌ ಕವರ್‌ ಹಾಗೂ ಪಿಚಕಾರಿಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಸ್ನೇಹಿತರಿಗೆ, ಬೈಕ್‌ಗಳ ಮೇಲೆ ಹೋಗುವವರ ಮೇಲೆ ಎರಚಿದರು.

ನವೀನ್‌ ಹೋಟೆಲ್‌, ನವನಗರ, ಕಮರಿಪೇಟೆ, ಹಳೇಹುಬ್ಬಳ್ಳಿ ಸೇರಿದಂತೆ ಹಲವೆಡೆ ರೇನ್‌ ಡ್ಯಾನ್ಸ್‌ ಹಾಗೂ ಡಿ.ಜೆ. ಅಬ್ಬರಕ್ಕೆ ಯುವಜನತೆ ಕುಣಿದು ಕುಪ್ಪಳಿಸಿತು. ಡಿಜೆ ತಡೆಯಲು ಪೊಲೀಸರು ಮುಂದಾದರೂ ಯುವಕರ ಕೋರಿಕೆ ಮೇರೆಗೆ ಸುಮ್ಮನಾದರು.

ಕೆಲವು ಕಾಲೊನಿಗಳಲ್ಲಿ ಮಕ್ಕಳು ಮನೆ ಮೇಲೆ ನಿಂತು ವಾಹನ ಸವಾರರಿಗೆ, ಪಾದಚಾರಿಗಳಿಗೆ ಬಣ್ಣದ ನೀರು ಎರಚಿದರು. ಯುವಕರ ಗುಂಪು ಬೈಕ್‌ನಲ್ಲಿ ಸಂಚರಿಸಿ ಕೇಕೆ ಹಾಕಿದರೆ, ಇನ್ನೂ ಕೆಲವರು ಹಲಗೆ ಬಾರಿಸುತ್ತ ಸಂಭ್ರಮಿಸಿದರು. ಕೆಲವರು ಬೈಕ್ ಮೇಲೆ ಪುನೀತ್‌ ರಾಜ್‌ಕುಮಾರ್‌ ಅವರ ಭಿತ್ತಿಚಿತ್ರ ಹಿಡಿದು ‘ಪವರ್‌ ಸ್ಟಾರ್‌ಗೆ ಜಯವಾಗಲಿ’ ಎಂದು ಘೋಷಣೆ ಕೂಗುತ್ತ ಸಾಗಿದ ಚಿತ್ರಣ ಕಂಡು ಬಂತು.

ಕಣ್ಗಾವಲು: ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್‌ ಇಲಾಖೆ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಹಾಕಿತ್ತು.

ಈದ್ಗಾ ಮೈದಾನ, ಚನ್ನಮ್ಮ ವೃತ್ತ, ಇಂಡಿಪಂಪ್‌ ವೃತ್ತ ಹಾಗೂ ಮಸೀದಿ ಸುತ್ತ–ಮುತ್ತ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಕಮರಿಪೇಟೆ, ಹಳೇಹುಬ್ಬಳ್ಳಿ, ಗೌಸಿಯಾ ಟೌನ್‌ಗಳಲ್ಲಿ ಜನ ಸಂಚರಿಸದಂತೆ ಮೊದಲೇ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಚನ್ನಮ್ಮ ವೃತ್ತ, ಈದ್ಗಾ ಮೈದಾನದ ಸುತ್ತ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಆ ಭಾಗದಲ್ಲಿ ಅತಿರೇಕದಿಂದ ವರ್ತಿಸುತ್ತಿದ್ದವರ ಮೇಲೆ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ವಿಶೇಷ ಗಮನ ಇಟ್ಟಿದ್ದರು.

ಕಾಮದಹನ: ಅಂಚಟಗೇರಿ ಓಣಿ, ದಾಜೀಬಾನ್ ಪೇಟೆ, ಮ್ಯಾದರ ಓಣಿ, ಸಿಂಪಿಗಲ್ಲಿ, ದುರ್ಗದ ಬೈಲ್‌, ಸ್ಟೇಷನ್‌ ರಸ್ತೆ, ಕಮರಿಪೇಟೆ, ಚನ್ನಪೇಟೆ, ಘೋಡಕೆ ಓಣಿ, ಅಯೋಧ್ಯಾನಗರ ಹೀಗೆ ನಗರದ 200ಕ್ಕೂ ಹೆಚ್ಚು ಕಡೆಗಳಲ್ಲಿ ಕಾಮಣ್ಣ–ರತಿಯರನ್ನು ಪ್ರತಿಷ್ಠಾಪಿಸಲಾಗಿತ್ತು. ಸಂಜೆ ಮೂರ್ತಿಗಳನ್ನು ಓಣಿಯಲ್ಲಿ ಮೆರವಣಿಗೆ ನಡೆಸಿ, ಕಾಮಣ್ಣನನ್ನು ದಹನ ಮಾಡಿದರು.

ಕಮಿಷನರ್‌ ಲಾಭೂರಾಮ್‌, ಡಿಸಿಪಿ ಸಾಹಿಲ್‌ ಬಾಗ್ಲಾ ನಗರದಾದ್ಯಂತ ಸಂಚರಿಸಿ ಬಂದೋ ಬಸ್ತ್‌ ವೀಕ್ಷಿಸಿದರು

ವೃದ್ದಾಶ್ರಮದಲ್ಲಿ ವಿಶಿಷ್ಟ ಹೋಳಿ

ವಿರಾಟ್ ಫೌಂಡೇಷನ್‌ ನವನಗರದ ಮೈತ್ರಿ ವೃದ್ಧಾಶ್ರಮದಲ್ಲಿ ಆಶ್ರಮ ವಾಸಿಗಳ ಆರೋಗ್ಯ ತಪಾಸಣೆ ನಡೆಸಿ ಔಷಧ ವಿತರಿಸುವ ಮೂಲಕ ಹೋಳಿ ಆಚರಿಸಿತು. ಆಶ್ರಮಕ್ಕೆ ಊಟದ ಟೇಬಲ್‌ಗಳನ್ನು ದೇಣಿಗೆ ಕೊಟ್ಟಿತು.

ಡಾ. ವೀರೇಶ ಹುಬ್ಬಳ್ಳಿ, ಅಶೋಕ, ವಿಜಯ, ಗೋಪಾಲ, ರಾಘು, ಸುನೀಲ, ರಾಜೇಶ, ಪ್ರಸನ್ನ ದೇಶಪಾಂಡೆ ಅವರ ತಂಡ ಆರೋಗ್ಯ ತಪಾಸಣೆ ನಡೆಸಿತು. ನಂತರ ಫೌಂಡೇಷನ್‌ ಸದಸ್ಯರು ಆಶ್ರಮವಾಸಿಗಳಿಗೆ ಬಣ್ಣ ಹಚ್ಚಿ ಹೋಳಿ ಆಚರಿಸಿದರು.

ಮೈತ್ರಿಯ ಉಸ್ತುವಾರಿ ಹುಸೇನ್‌ ಅವರನ್ನು ಸತ್ಕರಿಸಲಾಯಿತು. ಫೌಂಡೇಷನ್‌ ಅಧ್ಯಕ್ಷ ಕಾಂತಿಲಾಲ ಪುರೋಹಿತ, ಉಪಾಧ್ಯಕ್ಷ ಲಿಂಗರಾಜ ಧಾರವಾಡಶೆಟ್ಟ‌ರ್, ವಿರುಪಣ್ಣವರ, ಮಲ್ಲಿಕಾರ್ಜುನ ಜವಳಿ, ಶ್ರೀನಿವಾಸ ಸರ್ವದೆ, ಶಮಂತ, ವಿಭಾ ವಿನೋದ ಹೆಬಸೂರು, ಅಂಜನಾ ಸುರೇಶ, ರೂಪಾ ಧಾರವಾಡ ಇದ್ದರು.

ಬಣ್ಣ ಹಚ್ಚದ ಬೆಂಗೇರಿ ಗ್ರಾಮಸ್ಥರು

ಬೆಂಗೇರಿಯ ದ್ಯಾಮವ್ವನ ಗುಡಿಯಲ್ಲಿ ದ್ಯಾಮವ್ವ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಈ ವರ್ಷ ಬೆಂಗೇರಿ, ಗೋಪನಕೊಪ್ಪದಲ್ಲಿ ಹೋಳಿ ಆಟಕ್ಕೆ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ನಿಷೇಧ ಹೇರಿಕೊಂಡಿದ್ದರು. ದ್ಯಾಮವ್ವ ಮೂರ್ತಿಗೆ ಬಣ್ಣ ಹಚ್ಚುವ ಸಂದರ್ಭದಲ್ಲಿ ಅಲ್ಲಿಯ ಗ್ರಾಮಸ್ಥರು ಬಣ್ಣ ಆಡುವುದಿಲ್ಲ. ಮಧ್ಯಾಹ್ನದ ವೇಳೆ ಸ್ಥಳೀಯ ಯುವಕರು ಗೋಪನಕೊಪ್ಪ ವೃತ್ತದ ಬಳಿ ಕಟ್ಟಿಗೆ ಸುಟ್ಟು ಸಾಂಕೇತಿಕವಾಗಿ ಹಬ್ಬ ಆಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು