ಬುಧವಾರ, ಮಾರ್ಚ್ 29, 2023
23 °C
ಹೋಟೆಲ್‌ಗಳಲ್ಲಿ ಕಾರ್ಯಕ್ರಮ ಆಯೋಜನೆ, ಕೇಕ್‌, ಮದ್ಯಕ್ಕೆ ಬೇಡಿಕೆ

ಹೊಸ ವರ್ಷಾಚರಣೆಗೆ ವಾಣಿಜ್ಯನಗರಿ ಸಜ್ಜು

ಶಿವರಾಯ ಪೂಜಾರಿ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹಲವು ಏಳುಬೀಳುಗಳ 2022ನೇ ವರ್ಷಕ್ಕೆ ವಿದಾಯ ಹೇಳಿ, ನೂತನ ಸಂವತ್ಸರ 2023 ಅನ್ನು ಅದ್ಧೂರಿಯಾಗಿ ಸ್ವಾಗತಿಸಲು ವಾಣಿಜ್ಯ ನಗರಿ ಹುಬ್ಬಳ್ಳಿ ಸಜ್ಜಾಗಿದೆ. ಎರಡು ವರ್ಷಗಳಿಂದ ಮಂಕಾಗಿದ್ದ ವರ್ಷಾಂತ್ಯದ ಸಂಭ್ರಮಾಚರಣೆ ಈ ವರ್ಷ ಕಳೆಗಟ್ಟಲಿದೆ.

ಪಂಚತಾರಾ ಹೋಟೆಲ್‌ಗಳು, ಕ್ಲಬ್‌ಗಳು, ಸಂಘ– ಸಂಸ್ಥೆಗಳು ಹಾಗೂ ಕುಟುಂಬಗಳು ಹೊಸ ವರ್ಷ ಸ್ವಾಗತಿಸಿಕೊಳ್ಳಲು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿದ್ಧವಾಗಿವೆ. ಇದೇ ನೆಪದಲ್ಲಿ ಡಿ.ಜೆ ಸಂಗೀತ, ನೃತ್ಯ, ಮೋಜು–ಮಸ್ತಿಗೆ ಯುವಜನರು ಕಾತರವಾಗಿದ್ದಾರೆ.

ನವೀನ್‌ ಹೋಟೆಲ್, ಡೆನಿಸನ್ಸ್‌, ಪ್ರೆಸಿಡೆಂಟ್‌, ಕ್ಯುಬಿಕ್, ಕ್ಲಾರ್ಕ್ಸ್‌ ಇನ್, ಹನ್ಸ್, ಓಶಿಯನ್ ಪರ್ಲ್ ಸೇರಿದಂತೆ ಕೆಲ ಹೋಟೆಲ್‌ಗಳು ಸಂಭ್ರಮಾಚರಣೆಗೆ ವಿಶೇಷ ಪ್ಯಾಕೇಜ್ ಘೋಷಿಸಿವೆ.

‘ವರ್ಷಾಂತ್ಯದ ಸಂಭ್ರಮಾಚರಣೆ ಗಾಗಿ ಡಿ. 31ರಂದು ಡಿ.ಜೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಗವಹಿಸುವ ಜೋಡಿಗೆ ₹3,500 ದರ ನಿಗದಿಪಡಿಸಲಾಗಿದೆ. 100ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿಕೊಂಡಿದ್ದು, 300 ಜೋಡಿ ಸೇರುವ ಸಾಧ್ಯತೆ ಇದೆ’ ಎಂದು ಕ್ಯುಬಿಕ್ ಹೋಟೆಲ್ ವ್ಯವಸ್ಥಾಪಕ ಅಜಿತ್ ಜಿತೂರಿ ಹೇಳಿದರು.

‘ಡೆನಿಸನ್ಸ್ ಹೋಟೆಲ್‌ನಲ್ಲಿ ಗ್ರೂಪ್ ಡಾನ್ಸ್‌ ಹಾಗೂ ಡಿ.ಜೆ ಪಾರ್ಟಿ ಆಯೋಜಿಸಲಾಗಿದೆ. ಜೋಡಿಗೆ ಟಿಕೆಟ್ ದರ ₹6 ಸಾವಿರ ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ₹2 ಸಾವಿರ ನಿಗದಿಪಡಿಸಲಾಗಿದೆ. ಭರ್ಜರಿ ಭೋಜನವೂ ಇರಲಿದೆ’ ಎಂದು ಹೋಟೆಲ್ ವ್ಯವಸ್ಥಾಪಕ ಊರ್ಜಲ್ ತಿಳಿಸಿದರು.

ಕೇಕ್‌ಗೆ ಬೇಡಿಕೆ: ಕೇಕ್ ಕತ್ತರಿಸಿ ಹೊಸ ವರ್ಷ ಸ್ವಾಗತಿಸುವ ಪರಿಪಾಠ ಇರುವುದರಿಂದ, ಕೇಕ್‌ಗಳಿಗೆ ಮುಂಗಡ ಬುಕ್ಕಿಂಗ್ ಜೋರಾಗಿದೆ.‘ಈ ಬಾರಿ ಕೇಕ್‌ಗೆ ಬೇಡಿಕೆ ದುಪ್ಪಟ್ಟಾಗಿದೆ. ಮುಂಗಡ ಬುಕ್ಕಿಂಗ್ ಶುರುವಾಗಿದೆ. ಚಾಕಲೇಟ್, ಫೈನಾಪಲ್‌ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಒಂದು ಸಾವಿರ ಕೆ.ಜಿ.ಗೂ ಅಧಿಕ ಕೇಕ್‌ ಮಾರಾಟವಾಗುವ ಸಾಧ್ಯತೆ ಇದೆ’ ಎಂದು ಡೋಪೇಜ್ ಬೇಕರಿ ಮಾಲೀಕ ರುತ್ವಿಕ್ ಸುಬ್ರಹ್ಮಣ್ಯ ಆಶಾಭಾವ ವ್ಯಕ್ತಪಡಿಸಿದರು.

ಮದ್ಯ ಮಾರಾಟ ಹೆಚ್ಚಳ ನಿರೀಕ್ಷೆ: 

ಹೊಸ ವರ್ಷಾಚರಣೆ ಹಾಗೂ ಮದ್ಯಕ್ಕೂ ವಿಶೇಷ ನಂಟು. ಹೀಗಾಗಿ ವರ್ಷಾಂತ್ಯದ ಸಂಭ್ರಮಕ್ಕೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುವ ಸಾಧ್ಯತೆ ಇದೆ. ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳು ಹೆಚ್ಚಿನ ಗ್ರಾಹಕರ ನಿರೀಕ್ಷೆಯಲ್ಲಿವೆ.

‘ಕಳೆದ ವರ್ಷ ಕೋವಿಡ್‌ನಿಂದಾಗಿ ಮದ್ಯ ಮಾರಾಟ ಕುಂಠಿತವಾಗಿತ್ತು. ಕಳೆದ ವರ್ಷ ಜಿಲ್ಲೆಯಲ್ಲಿ ₹2 ಕೋಟಿಗೂ ಅಧಿಕ ಮೌಲ್ಯದ ಮದ್ಯ ಮಾರಾಟವಾಗಿತ್ತು. ಈ ಬಾರಿ ದುಪ್ಪಟ್ಟಾಗುವ ಸಾಧ್ಯತೆ ಇದೆ’ ಎಂದು ಹುಬ್ಬಳ್ಳಿ ಮದ್ಯ ಮಾರಾಟಗಾರರ ಸಂಘದ ಗೌರವಾಧ್ಯಕ್ಷ ಟಿ.ಎಂ. ಮೆಹರವಾಡೆ ಹೇಳಿದರು.

‘ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬಾರ್‌ಗಳು ಡಿ. 31ರಂದು ರಾತ್ರಿ 11.30ರವರೆಗೆ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಜ. 1ರಂದು ರಾತ್ರಿ 1 ಗಂಟೆವರೆಗೂ ಕಾರ್ಯನಿರ್ವಹಿಸಲಿವೆ’ ಎಂದು ಹುಬ್ಬಳ್ಳಿ ಬಾರ್‌ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು