ಸೋಮವಾರ, ಅಕ್ಟೋಬರ್ 19, 2020
24 °C

ಡಿಸಿಪಿ ಕೃಷ್ಣಕಾಂತ್‌ಗೆ ನೋಟಿಸ್‌ ನೀಡಿದ ಕಮಿಷನರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅವಳಿನಗರಗಳ ಪೊಲೀಸ್‌ ಕಮಿಷನರ್‌ ವಿರುದ್ಧ ಕಂಟ್ರೋಲ್‌ ರೂಂ ಮೂಲಕ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದ  ಡಿಸಿಪಿ (ಅಪರಾಧ ಮತ್ತು ಕಾನೂನು ಸುವ್ಯವಸ್ಥೆ) ಪಿ. ಕೃಷ್ಣಕಾಂತ ಅವರಿಗೆ, ಕಮಿಷನರ್‌ ಆರ್‌. ದಿಲೀಪ್‌ ಬುಧವಾರ ನೋಟಿಸ್‌ ನೀಡಿದ್ದಾರೆ.

ದಿಲೀಪ್ ಅವರು ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಕೃಷ್ಣಕಾಂತ್ ಪತ್ರದಲ್ಲಿ ದೂರಿದ್ದರು. ಇದರ ಪ್ರತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೂ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ದಿಲೀಪ್‌, ಒಂದಷ್ಟು ಪ್ರಶ್ನೆಗಳನ್ನು ಕೇಳಿ ಡಿಸಿಪಿ ಅವರಿಗೆ ನೋಟಿಸ್‌ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಅ. 2ರಂದು ಮೂರು ಬಾರಿ ಫೋನ್‌ ಮೂಲಕ ಸಂಪರ್ಕಿಸಿದ್ದೀರಿ. ಆಗ ಒಮ್ಮೆಯೂ ಭೇಟಿಯಾಗುವ ವಿಷಯ ತಿಳಿಸಿಲ್ಲ, ಹಾಗಿದ್ದಾಗ ಒಮ್ಮೆಲೆ ಯಾಕೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದೀರಿ? ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ನಾವು ಸಾಕಷ್ಟು ಬಾರಿ ಭೇಟಿಯಾಗಿ, ಚರ್ಚೆ ಕೂಡ ನಡೆಸಿದ್ದೇವೆ. ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತೀರ್ಮಾನಿಸಿದ್ದೇವೆ. ನಮ್ಮಿಬ್ಬರ ನಡುವೆ ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ಭೇಟಿಗೆ ನಿರಾಕರಿಸಿದ್ದೀರಿ ಎಂದು ಪತ್ರದಲ್ಲಿ ಯಾಕೆ ಹೇಳಿದ್ದೀರಿ? ಎನ್ನುವ ಪ್ರಶ್ನೆಗಳನ್ನು ಕಮಿಷನರ್‌ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಕೃಷ್ಣಕಾಂತ್‌ ‘ನೋಟಿಸ್‌ ಬಂದ ಬಗ್ಗೆ ಮಾಹಿತಿಯಿಲ್ಲ. ಕಚೇರಿಗೆ ಹೋಗಿ ನೋಡಬೇಕು, ಇದು ಇಲಾಖೆಯ ಆಂತರಿಕ ವಿಚಾರ’ ಎಂದರು.

ಇಬ್ಬರ ಬಂಧನ: ಗಂಗೂಬಾಯಿ ಹಾನಗಲ್‌ ಸಂಗೀತ ಶಾಲೆ ಹತ್ತಿರ ಬುಧವಾರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿ, ₹1,66,800 ಮೌಲ್ಯದ ಗಾಂಜಾ, ನಗದು ₹900 ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.‌

ಕೇಶ್ವಾಪುರದ ಮಧುರಾ ಪ್ಲಾಟ್‌ನ ಶ್ರೀನಿವಾಸ ಬಾಬುರಾವ್ ಮತ್ತು ಶಬರಿನಗರದ ವಿನಾಯಕ ಮಗಜಿಕೊಂಡಿ ಬಂಧಿತರು. ಇನ್‌ಸ್ಪೆಕ್ಟರ್‌ ರವಿಚಂದ್ರ ಡಿ.ಬಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಮೂರು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದೆ.

₹1.41 ಲಕ್ಷ ವಂಚನೆ: ಆನ್‌ಲೈನ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ನಗರದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ವಂಚಕ, ಅವರಿಂದ ₹1.41 ಲಕ್ಷವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ನಿಷಾ ಮತ್ತು ಶಾಂತನು ಎಂಬುವವರು ಹುಬ್ಬಳ್ಳಿಯಲ್ಲಿ ಡಾಟಾ ಎಂಟ್ರಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯನ್ನು ನಂಬಿಸಿ ಈ–ಮೇಲ್‌ ಐಡಿಗೆ ಬ್ಯಾಂಕ್‌ ಖಾತೆ ವಿವರ ಕಳುಹಿಸಿದ್ದ. ನಂತರ ಖಾತೆ ನಂಬರ್‌ಗೆ ಸಂಪರ್ಕವಿರುವ ಪೋನ್ ಪೇ ಖಾತೆ ಲಿಂಕ್‌ ಕಳುಹಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂಚನೆ: ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯ್ದೆಯನ್ವಯ ಬಂದೂಕು ಪರವಾನಗಿ ಪಡೆದಿರುವವರು ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶವಿದೆ. ಮೂರನೇ ಬಂದೂಕಿಗೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಎರಡಕ್ಕಿಂತ ಹೆಚ್ಚು ಆಯುಧ ಹೊಂದಿದವರು, ಅವುಗಳನ್ನು ಠಾಣೆಗೆ ಸಲ್ಲಿಸಬೇಕು ಎಂದು ಆರ್‌. ದಿಲೀಪ್‌ ಸೂಚಿಸಿದ್ದಾರೆ.

ನಿಯಮ ಉಲ್ಲಂಘನೆ: ಅವಳಿ ನಗರದಲ್ಲಿ ಅ. 6ರಂದು ಸಂಚಾರ ನಿಯಮ ಉಲ್ಲಂಘನೆ ಮಾಡಿದ 562 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, ₹2,82,650 ದಂಡ ವಿಧಿಸಲಾಗಿದೆ.

ವರ್ಗಾವಣೆ ಕೋರಿರುವ ದಿಲೀಪ್‌?

ಕಮಿಷನರ್‌, ಡಿಸಿಪಿ ನಡುವಿನ ಮುಸುಕಿನ ಗುದ್ದಾಟದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರು ಕೂಡಾ ಅಸಮಾಧಾನ ಹೊರಹಾಕಿದ್ದರು. ಕೂಡಲೇ ಇದಕ್ಕೊಂದು ಇತಿಶ್ರೀ ಹಾಕಲಾಗುವುದು ಎಂದು ತಿಳಿಸಿದ್ದರು.

ಅದಕ್ಕೆ ಪೂರಕವಾಗಿ, ಕಮಿಷನರ್‌ ಅವರು ಸ್ವಯಂಪ್ರೇರಿತವಾಗಿ ವರ್ಗಾವಣೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳ ನಿಯೋಜನೆಗೆ ಕಾಯುತ್ತಿರುವ ಐಪಿಎಸ್‌ ಅಧಿಕಾರಿ ಲಾಬುರಾಮ್‌ ಅವರು ಕಮಿಷನರ್‌ ಆಗಿ ಬರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.