ಅಮೀನಗಡ: ಪಾರಂಪರಿಕ ತಾಣಗಳು ದೇಶದ ಸಮಗ್ರತೆಯನ್ನು ಬಿಂಬಿಸುವ ಪ್ರದೇಶಗಳಾಗಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಅವುಗಳ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಸಮೀಪದ ಸೂಳೇಭಾವಿ ಗ್ರಾಮದಲ್ಲಿ ಮೈಸೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಅಂದಾಜು ₹112 ಲಕ್ಷ ವೆಚ್ಚದಲ್ಲಿ ವೀರಭದ್ರೇಶ್ವರ ದೇವಾಲಯದ ಸಂರಕ್ಷಣಾ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಇಲ್ಲಿನ ಶೂಲೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನಗಳು ಐತಿಹಾಸಿಕ ಪಾರಂಪರಿಕ ದೇವಾಲಯಗಳ ಪುನಶ್ಚೇತನಕ್ಕೆ ಮುಂದಾಗಿದ್ದು, ಗುಣಮಟ್ಟದ ಕಾಮಗಾರಿ ಕೈಗೊಂಡು ದೇವಸ್ಥಾನ ಉತ್ತಮ ರೀತಿಯಲ್ಲಿ ನಿರ್ಮಾಣವಾಗಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್. ಜಿ. ನಂಜಯ್ಯನಮಠ, ಕೆಎಚ್ಡಿಸಿ ಮಾಜಿ ಅಧ್ಯಕ್ಷ ಆರ್. ಪಿ. ಕಲಬುರ್ಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿಡ್ಡಪ್ಪ ಕುರಿ,ಮುಖಂಡರಾದ ಅಬ್ದುಲ್ ರಜಾಕ್ ತಟಗಾರ,ಮಹಾಂತಪ್ಪ ಭದ್ರಣ್ಣವರ,ದೇವರಾಜ ಕಮತಗಿ, ಜಗದೀಶ ರಗಟಿ ಸೇರಿದಂತೆ ಇತರರು ಇದ್ದರು.