ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಪಿ ವಿಗ್ರಹಗಳ ಮಾರಾಟ ಸಂಪೂರ್ಣ ನಿಷೇಧ

Last Updated 5 ಜುಲೈ 2018, 12:20 IST
ಅಕ್ಷರ ಗಾತ್ರ

ಧಾರವಾಡ: ‘ಮುಂಬರುವ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಒತ್ತು ನೀಡಲಾಗಿದ್ದು, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ)ನಿಂದ ನಿರ್ಮಿಸಿದ ವಿಗ್ರಹಗಳ ಮಾರಾಟವನ್ನು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಿಒಪಿ, ರಸಾಯನಿಕ ಬಣ್ಣಲೇಪಿತ ವಿಗ್ರಹಗಳು ಹಾಗೂ ಜಲಮೂಲಗಳಲ್ಲಿ ವಿಗ್ರಹಗಳ ವಿಸರ್ಜನೆಯ ನಿಷೇಧದ ಕುರಿತು ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ’ಹೊರ ರಾಜ್ಯಗಳಿಂದ ತರಿಸುವ ಪಿಒಪಿ ವಿಗ್ರಹಗಳನ್ನು ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿಯೇ ನಿರ್ಬಂಧಿಸಲಾಗುವುದು. ಅವಳಿನಗರದ ವಿವಿಧ ಪ್ರದೇಶಗಳ ಜನರು ಯಾವ ಜಲಮೂಲಗಳಲ್ಲಿ ಗಣೇಶ ವಿಸರ್ಜನೆ ಮಾಡಬಹುದು ಎಂಬ ಸ್ಥಳಗಳ ಪಟ್ಟಿ ಮಾಡಿ, ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಆ ಸ್ಥಳಗಳಲ್ಲಿ ಮಾತ್ರ ವಿಗ್ರಹಗಳನ್ನು ವಿಸರ್ಜಿಸಬೇಕು. ಶಬ್ದ ಮಾಲಿನ್ಯ ನಿಯಂತ್ರಿಸಲು ಬೃಹತ್ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ’ ಎಂದು ಹೇಳಿದರು.

'ಶಬ್ದ, ವಾಯು ಹಾಗೂ ಜಲ ಮಾಲಿನ್ಯದಿಂದ ಆಗುತ್ತಿರುವ ಅಪಾಯಗಳ ಕುರಿತು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಭೆ ನಡೆಸಿ, ತಿಳಿವಳಿಕೆ ನೀಡಲಾಗುತ್ತಿದೆ. ಪರಿಣಾಮವಾಗಿ ಕಳೆದ ವರ್ಷ ಪಿಒಪಿ ವಿಗ್ರಹಗಳ ಬಳಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಪಿಒಪಿ ವಿಗ್ರಹಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದರು.

‘ಪಾಲಿಕೆಯಿಂದ ಈಗಾಗಲೇ ವ್ಯಾಪಾರದ ಪರವಾನಗಿ ಪಡೆದಿರುವ ಗಣೇಶ ವಿಗ್ರಹಗಳ ತಯಾರಕರಿಗೆ ಕೂಡಲೇ ನೋಟಿಸ್‌ ನೀಡಿ, ಪಿಒಪಿ ವಿಗ್ರಹಗಳ ನಿರ್ಮಾಣ ಕೈಬಿಡಲು ಸೂಚಿಸಬೇಕು. ಉಲ್ಲಂಘನೆ ಮಾಡುವವರ ವಿರುದ್ಧ ಮುನಿಸಿಪಲ್ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಜರುಗಿಸಬೇಕು' ಎಂದು ಸೂಚಿಸಿದರು.

ಕಾನೂನು ವಿಭಾಗದ ಡಿಸಿಪಿ ರೇಣುಕಾ ಸುಕುಮಾರ್ ಮಾತನಾಡಿ, ’ಪ್ರತಿಯೊಬ್ಬರೂ ಮಾಲಿನ್ಯ ನಿಯಂತ್ರಣ ಕಾರ್ಯಕ್ಕೆ ಕೈ ಜೋಡಿಸಬೇಕು. ಕಳೆದ ಬಾರಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಕೋರಿಕೆಯ ಮೇರೆಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿತ್ತು. ಈ ಬಾರಿ ಯಾವುದೇ ಕಾರಣಕ್ಕೂ ಪಿಒಪಿ ವಿಗ್ರಹಗಳಿಗೆ ಅನುಮತಿ ನೀಡುವುದಿಲ್ಲ' ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಶಂಕರ ಕುಂಬಿ, ಮಂಜುನಾಥ ಹಿರೇಮಠ, ಪ್ರಕಾಶ ಗೌಡರ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಅಧಿಕಾರಿ ವಿಜಯಕುಮಾರ್ ಕಡಕಭಾವಿ, ಎಸಿಪಿ ರುದ್ರಪ್ಪ, ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಶ್ರೀಶೈಲಪ್ಪ ಶೆಟ್ಟರ್, ಸಾಯಿನಾಥ ಹಿತ್ತಾಳಿ, ಎಸ್.ಎಸ್.ಕಮಡೊಳ್ಳಿಶೆಟ್ರು, ವಿಶ್ವನಾಥ ಹಿತ್ತಾಳಿ, ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ, ಪಿ.ಎಂ.ಹೂಲಿ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT