ಶುಕ್ರವಾರ, ಜನವರಿ 24, 2020
28 °C
ಕಮಿಷನರೇಟ್‌ ವ್ಯಾಪ್ತಿಯ ವಾರ್ಷಿಕ ಪೊಲೀಸ್‌ ಕ್ರೀಡಾಕೂಟಕ್ಕೆ ತೆರೆ

ಸಿಎಆರ್‌ ತಂಡಕ್ಕೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೂಟದ ಮೂರೂ ದಿನ ಉತ್ತಮ ಪ್ರದರ್ಶನ ನೀಡಿದ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ತಂಡ ಹುಬ್ಬಳ್ಳಿ– ಧಾರವಾಡ ಪೊಲೀಸ್‌ ಕಮಿಷನರೇಟ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.

ಈ ತಂಡದ ಐ.ಎಸ್‌. ದೇಸಾಯಿ ಪುರುಷರ ವಿಭಾಗದಲ್ಲಿ ಮತ್ತು ಮಹಿಳಾ ವಿಭಾಗದಲ್ಲಿ ಎಸ್‌.ಆರ್‌. ಹಸರೆಡ್ಡಿ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪುರುಷರ 100 ಮೀಟರ್ ಓಟದಲ್ಲಿ ಐ.ಎಸ್‌. ದೇಸಾಯಿ ಪ್ರಥಮ, ಪ್ರಭುಲಿಂಗ ಗುಮಟೆ ದ್ವಿತೀಯ ಮತ್ತು ನೆಹರು ಲಮಾಣಿ ತೃತೀಯ ಸ್ಥಾನ ಗಳಿಸಿದರು. 4X100 ಮೀಟರ್‌ ರಿಲೆಯಲ್ಲಿ ಸಿಎಆರ್‌ ತಂಡ ಅಗ್ರಸ್ಥಾನ ಗಳಿಸಿದರೆ, ಉತ್ತರ ವಲಯ ದ್ವಿತೀಯ ಮತ್ತು ಸಂಚಾರ ವಿಭಾಗ ತೃತೀಯ ಸ್ಥಾನ ಪಡೆಯಿತು.

ಲಾಂಗ್‌ಜಂಪ್‌ನಲ್ಲಿ ದೇಸಾಯಿ, ಎನ್‌.ಎನ್‌. ಲಮಾಣಿ ಮತ್ತು ಪ್ರವೀಣ ಎಸ್‌.ಕೆ. ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.

ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಸುಮಾ ದೇವಾಡಿಗ, ಎಸ್‌.ಆರ್. ಹಸರೆಡ್ಡಿ, ಜೆ. ಭಾಗ್ಯ, ಗುಂಡು ಎಸೆತದಲ್ಲಿ ಆರ್‌.ಎಚ್‌. ಉಮಾ, ಶಿಖರಬಾನು ಮತ್ತು ಪೂರ್ಣಿಮಾ ಕುಂಬಾರ ಕ್ರಮವಾಗಿ ಮೊದಲ ಮೂರು ಸ್ಥಾನ ಸಂಪಾದಿಸಿದರು.

ವಾಲಿಬಾಲ್‌ನಲ್ಲಿ ದಕ್ಷಿಣ ವಲಯ, ಕಬಡ್ಡಿಯಲ್ಲಿ ಸಿಎಆರ್‌ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸಿಎಆರ್‌ ತಂಡಗಳು ಚಾಂಪಿಯನ್‌ ಆದವು.

ಸಹನೆ ಯಶಸ್ಸಿಗೆ ದಾರಿ: ‘ಬದುಕಿನಲ್ಲಿ ಎದುರಾಗುವ ಸಂದಿಗ್ಧ ಪರಿಸ್ಥಿತಿಯನ್ನು ಸಹನೆಯಿಂದ ಎದುರಿಸಿ, ಯಶಸ್ಸಿನ ಗುರಿ ಮುಟ್ಟಬೇಕು’ ಎಂದು ಲೇಖಕ ನಿರಂಜನ ನೀರಲಗಿ ಸಲಹೆ ನೀಡಿದರು.

ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿದ ಅವರು ‘ಜೀವನದ ಯಾವ ಸಂದರ್ಭದಲ್ಲಿ ಬೇಕಾದರೂ ಸಂಕಷ್ಟ ಬರಬಹುದು. ಕಷ್ಟಗಳಿಗೆ ಎದೆಗುಂದರೆ ಶಾಂತಚಿತ್ತದಿಂದ ಪರಿಸ್ಥಿತಿ ಅವಲೋಕಿಸಿ ಬದುಕು ಸಾಗಿಸಬೇಕು. ಬದ್ಧತೆ, ಪ್ರಬುದ್ಧತೆ ಮೈಗೂಡಿಸಿಕೊಂಡರೆ ಜೀವನ ಸುಂದರವಾಗಿರುತ್ತದೆ’ ಎಂದರು.

ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಮಾತನಾಡಿ, ‘ಪೊಲೀಸ್‌ ಸಿಬ್ಬಂದಿಗೆ ಬಿಡುವು ಎನ್ನುವುದು ವಿರಳ. ಅವರು ಯಾವಾಗಲೂ ವೃತ್ತಿಗೆ ಬದ್ಧರಾಗಿರುತ್ತಾರೆ. ಒತ್ತಡದ ನಡುವೆಯೂ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಂದಿತಾ ನಾಗನಗೌಡರ, ಶ್ರೀಕಾಂತ ದೇಶಪಾಂಡೆ, ಸುಜಾತಾ ಜಿ., ಮಂಜರಿ ಎಂ., ಸಾಚಿ ದೇಸಾಯಿ, ಸಂದೀಪ ಹರಪನಹಳ್ಳಿ ಮತ್ತು ಸಮೃದ್ಧಿ ಹಿರೇಗೌಡರ ಅವರನ್ನು ಸನ್ಮಾನಿಸಲಾಯಿತು.

ಡಿಸಿಪಿ ಡಿ.ಎಲ್‌. ನಾಗೇಶ ಹಾಗೂ ವಿವಿಧ ಪೊಲೀಸ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)