ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಭ್ರಷ್ಟಾಚಾರ, ಭಯೋತ್ಪಾದನೆ ಪಿತಾಮಹ: ನಳಿನ್‌ ಕುಮಾರ್‌ ಕಟೀಲ್‌

2023ರ ವಿಧಾನಸಭಾ ಚುನಾವಣಾ ಪ್ರಚಾರದ ಕಹಳೆ ಊದಿದ ಬಿಜೆಪಿ
Last Updated 27 ಏಪ್ರಿಲ್ 2022, 4:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೇ ಹೆಚ್ಚು ಗಲಭೆ ಹಾಗೂ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಕಾಂಗ್ರೆಸ್, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯ ಪಿತಾಮಹವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟೀಕಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಪ್ರಧಾನಿಗಳು ಭ್ರಷ್ಟಾಚಾರದ ಕಳಂಕ ಹೊತ್ತುಕೊಂಡಿದ್ದಾರೆ. ಆದರೆ, ನರೇಂದ್ರ ಮೋದಿ ಒಂದೇ ಒಂದು ಭ್ರಷ್ಟಾಚಾರದ ಕಳಂಕ ಹೊತ್ತಿಲ್ಲ’ ಎಂದರು.

ಹುಬ್ಬಳ್ಳಿಗೆ ಬರಲು ಬಿಡಬೇಡಿ: ‘ಬಿಜೆಪಿಯ ಶಕ್ತಿ, ಕೇಂದ್ರವಾದ ಹುಬ್ಬಳ್ಳಿಗೆ ಕಾಲಿಡಲು ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಬಿಡಬೇಡಿ. ಧಾರವಾಡವನ್ನು ಕಾಂಗ್ರೆಸ್‌ ಮುಕ್ತ ಜಿಲ್ಲೆ ಮಾಡಬೇಕು. ‌‌‌‌‌‌‌‌‌ಕಾಂಗ್ರೆಸ್‌ ಪ್ರಚೋದನೆಯಿಂದ ಪೊಲೀಸ್ ಠಾಣೆ ಮೇಲೆ ಕಲ್ಲು ಬಿದ್ದಿದೆ. ಇದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ’ ಎಂದು ಹರಿಹಾಯ್ದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ ‘ಡಿ.ಕೆ. ಶಿವಕುಮಾರ್‌ ಕಾರ್ಯಕರ್ತರ ದುಂಬಾಲು ಬಿದ್ದು ಟಿ.ವಿ., ಫ್ರಿಡ್ಜ್‌ ನೀಡುವ ಆಮಿಷ ಒಡ್ಡಿದರೂ, ಯಾರೂ ಕಾಂಗ್ರೆಸ್‌ನಸದಸ್ಯತ್ವ ಪಡೆಯುತ್ತಿಲ್ಲ. ಶಿವಕುಮಾರ್‌ಗೆ ದಮ್‌ ಇದ್ದರೆ ಸದಸ್ಯತ್ವ ಪಡೆದವರ ಹೆಸರು ಬಹಿರಂಗ ಮಾಡಲಿ’ ಎಂದು ಸವಾಲು ಹಾಕಿದರು.

‘ಕರ್ನಾಟಕದಲ್ಲಿ ಬಿಜೆಪಿಯವರು ಕೋಟಿಗೂ ಹೆಚ್ಚುಕಾರ್ಯಕರ್ತರು ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ.ನಮ್ಮ ನಡೆಯನ್ನೇ ಅನುಸರಿಸುತ್ತಿರುವ ಕಾಂಗ್ರೆಸ್‌ ಸುಳ್ಳು ಸದಸ್ಯತ್ವ ಮಾಡಿಸುತ್ತಿದೆ. ನಮ್ಮ ಸದಸ್ಯರ ಪ್ರತಿಯೊಬ್ಬರ ಮಾಹಿತಿಯನ್ನೂ ನಾವು ಬಹಿರಂಗಗೊಳಿಸುತ್ತೇವೆ. ಈ ಸವಾಲಿಗೆ ಶಿವಕುಮಾರ್‌ ಸಿದ್ದರಿದ್ದಾರೆಯೇ’ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯ ತುಳಸಿ ಮುನಿರಾಜ್‌,ಶಾಸಕ ಅರವಿಂದ ಬೆಲ್ಲದ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು.

ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಮುಖಂಡರಾದ ಲಿಂಗರಾಜ ಪಾಟೀಲ, ಸೀಮಾ ಮಸೂತಿ, ನಾರಾಯಣ ಜರತಾರಕರ್‌, ಎಂ. ರಾಜೇಂದ್ರ, ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಚಂದ್ರಶೇಖರ ಗೋಕಾಕ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ಸುನೀಲ್ ಮೋರೆ, ಪ್ರಭು ನವಲಗುಂದ ಮಠ, ಸಂತೋಷ ಚೌಹಾಣ್‌, ಬಸವರಾಜ ಗರಗ, ಶಿವು ಮೆಣಸಿನಕಾಯಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT