ಗುರುವಾರ , ಸೆಪ್ಟೆಂಬರ್ 19, 2019
22 °C

ಉಮೇಶ ಜಾಧವ ಪುತ್ರ ವ್ಯಾಮೋಹಿ: ಎಂ.ಬಿ. ಪಾಟೀಲ

Published:
Updated:

ಬೆಂಗಳೂರು: ‘ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕುಟುಂಬ ರಾಜಕಾರಣದ ಆರೋಪ ಮಾಡಿದ ಉಮೇಶ ಜಾಧವ, ಚಿಂಚೋಳಿಯಲ್ಲಿ ತಮ್ಮ ಪುತ್ರನನ್ನೇ ಕಣಕ್ಕಿಳಿಸಿದ್ದಾರೆ. ಅಲ್ಲಿ‌ ಸ್ಪರ್ಧಿಸಲು ಬಿಜೆಪಿ ಕಾರ್ಯಕರ್ತರು ಇರಲಿಲ್ಲವೆ? ಮಗನಿಗೇ ಟಿಕೆಟ್ ನೀಡಬೇಕಿತ್ತೇ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದರು.

ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ನಾಯಕರ ಸಭೆಯ ಬಳಿಕ ಮಾತನಾಡಿ, ‘ಜಾಧವ ಅವರ ನಿಜ ಬಣ್ಣ ಜನರಿಗೆ ಗೊತ್ತಾಗಿದೆ’ ಎಂದರು.

‘ಕುಂದಗೋಳದಲ್ಲಿ ದಿನೇಶ್ ಮತ್ತು ಸತೀಶ್ ನೇತೃತ್ವವಿದೆ. ಚಿಂಚೋಳಿಯಲ್ಲಿ ಖರ್ಗೆಯವರ ನೇತೃತ್ವವಿದೆ. ನಾನು, ಉಪ ಮುಖ್ಯಮಂತ್ರಿ, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ ಎಲ್ಲರೂ ಪ್ರಚಾರ ಮಾಡಿದ್ದೇವೆ. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲಿ ಕೆಲಸ ಮಾಡಿದಂತೆ ಈ ಎರಡೂ ಕ್ಷೇತ್ರಗಳಲ್ಲೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎರಡೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತ್ರಿವರ್ಣ ಧ್ವಜ ಹಡಗಿನ ಅವಶೇಷಗಳು ದೊರೆತ ಬಗ್ಗೆ ಪ್ರತಿಕ್ರಿಯಿಸಿ, ‘ಆ ಹಡಗಿನಲ್ಲಿದ್ದ ಮೀನುಗಾರರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನೌಕಾಪಡೆಯ ಹಡಗು ಹೊಡೆದ ಪರಿಣಾಮ ಈ ಹಡಗು ಮುಳುಗಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ನೌಕಾಪಡೆ ಮುಖ್ಯಸ್ಥರಿಗೆ ಶೀಘ್ರದಲ್ಲೇ ಪತ್ರ ಬರೆದು ಸ್ಪಷ್ಟನೆ ಪಡೆಯುತ್ತೇನೆ. ಘಟನೆ ಬಗ್ಗೆ ಅವರು ಕಾರಣ ನೀಡಬೇಕಾಗುತ್ತದೆ’ ಎಂದರು.

ಭಾವೋದ್ವೇಗದಿಂದ ಕಣ್ಣೀರು: ಕುಂದಗೋಳದಲ್ಲಿ ಪ್ರಚಾರ ಸಭೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಕಣ್ಣೀರು ಹಾಕಿದ ಬಗ್ಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ‘ಶಿವಳ್ಳಿ ಮತ್ತು ಶಿವಕುಮಾರ್ ಬಹಳ ಆತ್ಮೀಯರಾಗಿದ್ದರು. ಆ ಆತ್ಮೀಯತೆಯಿಂದ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ’ ಎಂದು ಹೇಳಿದರು.

ಉಸ್ತವಾರಿಗಳ ಸಭೆ: ‘ಚಿಂಚೋಳಿ, ಕುಂದಗೋಳ ಕ್ಷೇತ್ರಗಳ ಪ್ರಚಾರ ಉಸ್ತುವಾರಿ ವಹಿಸಿರುವ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಜವಾಬ್ದಾರಿ ವಹಿಸಿ
ಕೊಂಡವರೆಲ್ಲರೂ ಶುಕ್ರವಾರ ಕ್ಷೇತ್ರಗಳಿಗೆ ತೆರಳಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

Post Comments (+)