ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿ ಗಣೇಶ ಪೂಜೆ ಮಾಡಿದ್ದಕ್ಕೆ ಕಾಂಗ್ರೆಸ್‌ ವಿರೋಧ: ಸಚಿವ ಜೋಶಿ

Published : 13 ಸೆಪ್ಟೆಂಬರ್ 2024, 10:31 IST
Last Updated : 13 ಸೆಪ್ಟೆಂಬರ್ 2024, 10:31 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ‘ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್‌ ನಡೆಸಿದ್ದ ಇಫ್ತಿಯಾರ್‌ ಕೂಟಕ್ಕೆ ಸಿಜೆಐ ಪಾಲ್ಗೊಳ್ಳಬಹುದು, ಪ್ರಧಾನಿ ನರೇಂದ್ರ ಮೋದಿ ಅವರು ಸಿಜೆಐ ಮನೆಗೆ ಗಣೇಶ ಉತ್ಸವಕ್ಕೆ ಹೋಗಬಾರದು ಎನ್ನುವುದು ಯಾವ ನ್ಯಾಯ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಜೆಐ ಡಿ.ವೈ. ಚಂದ್ರಚೂಡ್‌ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು, ಅವರ ಮನೆಗೆ ಗಣೇಶ ಪೂಜೆಗೆ ಹೋಗಿದ್ದರು. ಅದೊಂದು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮವಾಗಿದ್ದು, ಹೋಗಬಾರದು ಎಂದು ಎಲ್ಲಿಯೂ ಇಲ್ಲ. ಕಾಂಗ್ರೆಸ್‌ ತನ್ನ ವೋಟ್‌ ಬ್ಯಾಂಕ್‌ಗಾಗಿ ಏನು ಬೇಕಾದರೂ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರಧಾನಿ ಅವರು ಗಣಪತಿ ಪೂಜೆ ಮಾಡಿದ್ದಕ್ಕೆ ಕಾಂಗ್ರೆಸ್‌ ವಿರೋಧಿಸುತ್ತಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಹಿಂದೂ ವಿರೋಧಿ: ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ‘ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಹಾಗೂ ವಿಸರ್ಜನಾ ಮೆರವಣಿಗೆಗೆ ಪೊಲೀಸ್‌ ಇಲಾಖೆಯ ಅನುಮತಿ ಪಡೆಯಲಾಗಿದೆ. ಮೆರವಣಿಗೆ ಹೋಗುವ ರಸ್ತೆ ಬದಿಯಲ್ಲಿ ಮಸೀದಿ ಇದೆ ಎಂದು, ವಾದ್ಯ ಬಾರಿಸಬಾರದು ಎಂದರೆ ಏನರ್ಥ? ರಾಜ್ಯ ಸರ್ಕಾರ ಪಾಕಿಸ್ತಾನ ಮಾಡಲು ಹೊರಟಿದೆಯೇ? ಇದರಲ್ಲಿಯೇ ತಿಳಿಯುತ್ತದೆ ಅದು ಹಿಂದೂ ವಿರೋಧಿ ಪಕ್ಷ’ ಎಂದು ಹರಿಹಾಯ್ದರು.

‘ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಯುವಕೊಬ್ಬನನ್ನು ಪೊಲೀಸರು ಮೊದಲ ಆರೋಪಿಯನ್ನಾಗಿ ಮಾಡಿದ್ದು ಖಂಡನೀಯ. ಪಕ್ಷದ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದಾರೆ. ರಾಜಕೀಯ ಒತ್ತಡಕ್ಕೆ ಒಳಗಾಗಿ ಅಲ್ಲಿಯ ಪೊಲೀಸ್‌ ವರಿಷ್ಠಾಧಿಕಾರಿ ಹುಚ್ಚರ ಹಾಗೆ ವರ್ತಿಸಬಾರದು. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು, ಹೋರಾಟ ನಡೆಸುತ್ತೇವೆ’ ಎಂದರು.

‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ವಿದೇಶಕ್ಕೆ ಹೋಗಿ, ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಅವಮಾನ ಮಾಡುತ್ತಾರೆ, ಇಲ್ಲಿಯ ಚುನಾವಣಾ ಆಯೋಗದ ಬಗ್ಗೆ ಅಪಸ್ವರ ಎತ್ತುತ್ತಾರೆ. ಆದರೆ, ತಮ್ಮದೇ ಕುಟುಂಬದವರು ಮಾತ್ರ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಹುಲ್‌ ಪ್ರಧಾನಿ ಆಗುವುದಿಲ್ಲ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಮಾಡುತ್ತೇವೆ ಎಂದು ವರಿಷ್ಠರು ಘೋಷಿಸಲಿ ನೋಡೋಣ’ ಎಂದು ಸವಾಲು ಹಾಕಿದರು.

ಆರೋಪದಿಂದ ಮುಕ್ತರಾಗಿಲ್ಲ: ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಜಾಮೀನು ಸಿಕ್ಕಿದೆ ಎಂದ ಮಾತ್ರಕ್ಕೆ, ಆರೋಪದಿಂದ ಮುಕ್ತರಾಗಿದ್ದಾರೆ ಎಂದರ್ಥವಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲವೂ ನ್ಯಾಯಾಯುತವಾಗಿಯೇ ನಡೆಯುತ್ತವೆ. ಬಿಜೆಪಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT