ಶನಿವಾರ, ಜೂನ್ 25, 2022
24 °C

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕಾಮತ್ ಹೋಟೆಲ್‌ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಚನ್ನಮ್ಮ ವೃತ್ತಕ್ಕೆ ಬಂದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಿರ್ಜಾನಕರ್ ಪೆಟ್ರೋಲ್ ಬಂಕ್‌ಗೆ ತೆರಳಿ ತೈಲ ಬೆಲೆ ಇಳಿಕೆಗೆ ಆಗ್ರಹಿಸಿದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರು ಮಾತನಾಡಿ, 'ಲಾಕ್‌ಡೌನ್ ನಡುವೆಯೇ ತೈಲ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ. ಇದರಿಂದ‌ ದಿನ ಬಳಕೆಯ ಆಹಾರ ಸಾಮಗ್ರಿಗಳ ಬೆಲೆಯೂ ಹೆಚ್ಚಾಗುತ್ತಿದೆ. ಜನಸಾಮಾನ್ಯರೆಲ್ಲ ಬೀದಿಗೆ ಬೀಳುವ ದುಃಸ್ಥಿತಿ ಬಂದೊದಗಿದೆ. ಲಾಕ್‌ಡೌನ್ ಮುಗಿದ ನಂತರ ಕೇಂದ್ರದ ವಿರುದ್ಧ ಆಕ್ರೋಶ ಇನ್ನಷ್ಟು ಹೆಚ್ಚಾಗಲಿದೆ' ಎಂದರು.

'ನಾವು ಚುನಾವಣೆ ರ‍್ಯಾಲಿ ಮಾಡುತ್ತಿಲ್ಲ. ಜನರ ಸಮಸ್ಯೆ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವ ಭರವಸೆಯೂ ಉಳಿದಿಲ್ಲ. ವಿದ್ಯುತ್ ದರ ಸಹ ಏರಿಕೆ ಮಾಡಲು ನಿರ್ಧರಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನ ಸಾಮಾನ್ಯರ ಸಂಕಷ್ಟ ಅರಿವಾಗದ ಸರ್ಕಾರಕ್ಕೆ ಧಿಕ್ಕಾರ' ಎಂದರು.

ಮುಖಂಡ ರಜತ್ ಉಳ್ಳಾಗಡ್ಡಿಮಠ, 'ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡುತ್ತೇವೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಮಧ್ಯಮ, ಬಡ ವರ್ಗದವರಿಗೆ ಸಮಸ್ಯೆ ತಂದೊಡ್ಡಿದೆ. ತೈಲ ಬೆಲೆ ಏರಿಕೆ ಮಾಡುವ ಮೂಲಕ ಕೋವಿಡ್ ಸಂಕಷ್ಟದಲ್ಲಿಯೂ ಬದುಕನ್ನು ಇನ್ನಷ್ಟು ದುಸ್ತರ ಮಾಡಿದೆ. ಕಚ್ಚಾತೈಲದ ಬೆಲೆ ಇಕೆಯಾದರೂ ಟ್ಯಾಕ್ಸ್ ಹೆಚ್ಚಿಸಿ, ಅದರ ಲಾಭ ಗ್ರಾಹಕರಿಗೆ ಸಿಗದ ಹಾಗೆ ವಂಚಿಸಿದೆ' ಎಂದು ಆರೋಪಿಸಿದರು.

ಬಂಕಾಪುರ ಚೌಕದ ಬಳಿಯೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಮುಖಂಡರಾದ ಜಾಕೀರ್ ಸನದಿ, ಬಾಬಾಜಾನ್ ಮುಧೋಳ, ರಾಜಶೇಖರ ಮೆಣಸಿನಕಾಯಿ, ಬಙಗಾರೇಶ ಹಿರೇಮಠ ಮಾತನಾಡಿದರು. ವೀರಣ್ಣ ಮತ್ತಿಗಟ್ಟಿ, ಕಿರಣ ಮೂಗಬಸವ, ಬಸವರಾಜ ಕಿತ್ತೂರು, ಅನ್ವರ ಮುಧೋಳ, ಸತೀಶ ಮೆಹರವಾಡೆ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು