ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹ

ಮಹಾನಗರ ಕಾಂಗ್ರೆಸ್‌ನಿಂದ ಪ್ರತಿಭಟನೆ; ರಾಜ್ಯಪಾಲರಿಗೆ ಮನವಿ ಸಲ್ಲಿಕೆ
Last Updated 21 ಫೆಬ್ರುವರಿ 2022, 11:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜ ಹಾರಿಸಲಾಗುವುದು ಎಂಬ ಹೇಳಿಕೆ ಕೊಟ್ಟಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ, ಮಹಾನಗರ ಕಾಂಗ್ರೆಸ್ ಘಟಕದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿದರು.

ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಈಶ್ವರಪ್ಪ ಅವರು, ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜ ಹಾರಿಸುವುದಾಗಿ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ತಮ್ಮ ಸ್ಥಾನದ ಘನತೆ ಮರೆತು ಇಂತಹ ಹೇಳಿಕೆ ನೀಡಿರುವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರವು ಹಿಂದೂ ಹಾಗೂ ಮುಸ್ಲಿಮರ ನಡುವೆ ಕೋಮು ದ್ವೇಷವನ್ನು ಬಿತ್ತುವ ರಾಜಕಾರಣ ಮಾಡುತ್ತಿದೆ. ಪ್ರತಿ ವಿಷಯದಲ್ಲೂ ಕೋಮು ಭಾವನೆಯನ್ನು ಕೆರಳಿಸಲಾಗುತ್ತಿದೆ. ಬಾಬ್ರಿ ಮಸೀದಿ, ರಾಮಮಂದಿರ ಸೇರಿದಂತೆ ಹಲವು ವಿಷಯಗಳಲ್ಲೂ ಧರ್ಮಗಳನ್ನು ಒಡೆದಾಳಿದ ಬಿಜೆಪಿಯು, ಈಗ ಹಿಜಾಬ್ ವಿಷಯವನ್ನು ದೊಡ್ಡದು ಮಾಡಿ ಮಕ್ಕಳ ಮನಸ್ಸಿನಲ್ಲೂ ಕೋಮು ಭಾವನೆಯನ್ನು ಬಿತ್ತುತ್ತಿದೆ. ಇಂತಹ ಕೀಳುಮಟ್ಟದ ರಾಜಕಾರಣವನ್ನು ಬಿಡಬೇಕು’ ಎಂದರು.

ಮುಖಂಡ ಸದಾನಂದ ಡಂಗನವರ ಮಾತನಾಡಿ, ‘ಈ ದೇಶದ ಸಂವಿಧಾನಕ್ಕೆ ಬೆಲೆ ಕೊಡದವರು, ದೇಶದ ಪ್ರತೀತಿಕವಾಗಿರುವ ರಾಷ್ಟ್ರಧ್ವಜಕ್ಕೆ ಬೆಲೆ ಕೊಡುವುದಿಲ್ಲ. ಭಾರತವು ಸರ್ವಧರ್ಮಗಳನ್ನೊಳಗೊಂಡ ಬಹು ಸಂಸ್ಕೃತಿಯ ದೇಶವಾಗಿದೆ. ನಮ್ಮಲ್ಲಿರುವ ಧಾರ್ಮಿಕ ಸಾಮರಸ್ಯವನ್ನು ಒಡೆಯುವಂತಹ ಹೇಳಿಕೆಗಳನ್ನು ಸರ್ಕಾರದ ಭಾಗವಾಗಿರುವವರೇ ನೀಡುತ್ತಿದ್ದಾರೆ. ಆ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದರು.

ಬಳಿಕ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಮಹಮ್ಮದ ಶರೀಫ ಗರಗದ, ಪ್ರಸನ್ನ ಮಿರಜಕರ್, ಪ್ರಕಾಶ ಕುರಟ್ಟಿ, ಬಾಬಾಜಾನ ಮುಧೋಳ, ಇಕ್ಬಾಲ್ ನವಲೂರ, ಎಂ.ಎಸ್. ಪಾಟೀಲ, ಶಜಾಮನ್ ಮುಜಾಹಿದ್, ಅನ್ವರ ಮುಧೋಳ, ವಾದಿರಾಜ ಕುಲಕರ್ಣಿ, ಜಗದೀಶ ನೀಲಗುಂದ ರಾಜೇಂದ್ರ ಪಾಟೀಲ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT