ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವೇಶ್ವರ, ಕೆ.ಎಚ್‌.ಪಾಟೀಲ ಪ್ರತಿಮೆ ಮರು ಪ್ರತಿಷ್ಠಾಪಿಸಿ

ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಮುಖಂಡರ ಆಗ್ರಹ
Last Updated 7 ಫೆಬ್ರುವರಿ 2023, 5:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಫ್ಲೈಓವರ್ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ ಇತ್ತೀಚೆಗೆ ಸ್ಥಳಾಂತರಿಸಿರುವ ಬಸವ ವನದ ಬಸವೇಶ್ವರ ಪ್ರತಿಮೆ ಹಾಗೂ ಈಜುಕೊಳ ಎದುರಿನ ಕೆ.ಎಚ್. ಪಾಟೀಲ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ಕುರಿತು ನಗರದಲ್ಲಿ ಸೋಮವಾರ ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ಸಭೆ ನಡೆಸಿದ ಪಕ್ಷದ ಮುಖಂಡರು, ರಾತ್ರೋರಾತ್ರಿ ಪ್ರತಿಮೆಗಳನ್ನು ಸ್ಥಳಾಂತರಿಸಿದ ಜಿಲ್ಲಾಡಳಿತ ಮತ್ತು ಪಾಲಿಕೆಯ ನಡೆಯನ್ನು ಖಂಡಿಸಿದರು. ನಂತರ, ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ಅವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಮಾತನಾಡಿದ ಕೆ.ಎಚ್. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ‘ಪಾಟೀಲ ಅವರ 31ನೇ ಪುಣ್ಮಸ್ಮರಣೆ ಅಂಗವಾಗಿ ಫೆ. 9ರಂದು ಪ್ರತಿಮೆ ಬಳಿ ಸರ್ವಧರ್ಮಿಯರ ಪ್ರಾರ್ಥನೆಗೆ ಅವಕಾಶ ನೀಡುವಂತೆ ಪಾಲಿಕೆಗೆ ಜ. 24ರಂದು ಮನವಿ ಸಲ್ಲಿಸಲಾಗಿತ್ತು. ಆದರೂ, ಪ್ರತಿಮೆ ಸ್ಥಳಾಂತರಕ್ಕೆ ಮುನ್ನ ನಮಗೆ ಮಾಹಿತಿ ನೀಡದಿರುವುದು ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಇದರಿಂದ, ಪಾಟೀಲ ಅವರ ಅಭಿಮಾನಿಗಳಿಗೆ ನೋವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಐ.ಜಿ. ಸನದಿ ಮಾತನಾಡಿ, ‘ಸಹಕಾರ ಕ್ಷೇತ್ರದ ಭೀಷ್ಮ ಎಂದೇ ಹೆಸರಾಗಿರುವ ಕೆ.ಎಚ್. ಪಾಟೀಲ ಅವರ ಮೂರ್ತಿ ಸ್ಥಳಾಂತರಕ್ಕೆ ಮುಂಚೆ ಪ್ರತಿಷ್ಠಾನಕ್ಕೆ ಮಾಹಿತಿ ನೀಡಬೇಕಿತ್ತು. ಅದು ಬಿಟ್ಟು ರಾತ್ರೋರಾತ್ರಿ ಕಳ್ಳರ ಹಾಗೆ ಸ್ಥಳಾಂತರಿಸಿದ್ದು ಸರಿಯಲ್ಲ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಅನಿಲಕುಮಾರ ಪಾಟೀಲ, ಎನ್.ಎಚ್. ಕೋನರೆಡ್ಡಿ, ಎಂ.ಎಸ್. ಅಕ್ಕಿ, ಅಲ್ತಾಫ ಹಳ್ಳೂರ, ಎಫ್.ಎಚ್. ಜಕ್ಕಪ್ಪನವರ, ಸಂದೀಲ್ ಕುಮಾರ್, ಮೋಹನ ಹಿರೇಮನಿ, ಮೋಹನ ಅಸುಂಡಿ ಇದ್ದರು.

ಮಾಹಿತಿ ನೀಡಲು ಅಬ್ಬಯ್ಯ ಸೂಚನೆ

ಸಭೆಯಲ್ಲಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ‘ಪ್ರತಿಮೆಗಳ ಸ್ಥಳಾಂತರ ಮತ್ತು ಫ್ಲೈಓವರ್ ನಿರ್ಮಾಣದ ಕುರಿತು ಜಿಲ್ಲಾಡಳಿತ ಮತ್ತು ಪಾಲಿಕೆ ಫೆ. 7ರೊಳಗೆ ಸಭೆ ನಡೆಸಿ ಮಾಹಿತಿ ನೀಡಬೇಕು. ಮಾಡಿದ ತಪ್ಪಿನ ಕುರಿತು ಕ್ಷಮೆ ಕೇಳುವ ಜೊತೆಗೆ, ಸ್ಥಳಾಂತರಿಸಿರುವ ಪ್ರತಿಮೆಗಳನ್ನು ಯಾವಾಗ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT