ಹಣಬಲದಿಂದ ಕಾಂಗ್ರೆಸ್‌ಗೆ ಗೆಲುವು: ಶೆಟ್ಟರ್‌

7

ಹಣಬಲದಿಂದ ಕಾಂಗ್ರೆಸ್‌ಗೆ ಗೆಲುವು: ಶೆಟ್ಟರ್‌

Published:
Updated:

ಹುಬ್ಬಳ್ಳಿ: ಜಮಖಂಡಿ ಮತ್ತು ಬಳ್ಳಾರಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌  ಹಣಬಲದಿಂದ ಗೆಲುವು ಪಡೆದಿದ್ದು, ಇದು ನಿಜವಾದ ಗೆಲುವು ಅಲ್ಲ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜಮಖಂಡಿಯಲ್ಲಿ ಐದು ದಿನ ಪ್ರಚಾರ ಮಾಡಿದೆ. ನಮ್ಮ ಪಕ್ಷದ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅವರ ಬಗ್ಗೆ ಜನರಿಗೆ ಒಲವಿತ್ತು. ಆದರೆ, ಚುನಾವಣೆಯ ಕೊನೆಯ ಎರಡು ದಿನ ಕಾಂಗ್ರೆಸ್‌ ಹಣದ ಹೊಳೆ ಹರಿಸಿದ್ದರಿಂದ ನಮಗೆ ಸೋಲು ಎದುರಾಯಿತು. ಕಾಂಗ್ರೆಸ್‌ ಹಣ ಹಂಚಿದ್ದು ಗೊತ್ತಾದ ದಿನವೇ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೆವು. ನಮ್ಮ ಅಭ್ಯರ್ಥಿ 20 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಿತ್ತು’ ಎಂದರು.

‘ಉಪ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ. ಇದರಿಂದ ಯಾವ ಪರಿಣಾಮವೂ ಬೀರುವುದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸೋತಿತ್ತು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆಯಲಿಲ್ಲವೇ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ನೀಡಿದ ಹೇಳಿಕೆಯಿಂದಲೇ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾ ಅವರಿಗೆ ಸೋಲು ಎದುರಾಯಿತೇ ಎನ್ನುವ ಪ್ರಶ್ನೆಗೆ ‘ಎಲ್ಲರ ವೈಯಕ್ತಿಕ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಈ ರೀತಿಯ ಹೇಳಿಕೆಗಳು ಚುನಾವಣಾ ಸಮಯದಲ್ಲಿ ಸ್ವಲ್ಪ ಪರಿಣಾಮ ಬೀರಬಹುದು. ಸೋಲಿಗೆ ಇದೇ ಅಂಶ ಕಾರಣವಲ್ಲ’ ಎಂದರು.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ಬಗ್ಗೆ ಪ್ರತಿಕ್ರಿಯಿಸಿ ‘ಈ ವಿಷಯದಲ್ಲಿ ನಾವು ಎಡವಿದ್ದೇವೆ. ಇದರಿಂದ ನಾವು ಪಾಠ ಕಲಿಯಬೇಕಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !