ಗುರುವಾರ , ನವೆಂಬರ್ 21, 2019
26 °C

ಹುಬ್ಬಳ್ಳಿ: ಕೊಲೆಗೆ ನಡೆದಿತ್ತು ಸಂಚು!

Published:
Updated:

ಹುಬ್ಬಳ್ಳಿ: ಒಂದೆಡೆ ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡುತ್ತಿದ್ದರೆ, ಇನ್ನೊಂದೆಡೆ ಅದೇ ರೌಡಿಗಳು ತಲ್ವಾರ್‌, ಮಚ್ಚು ಹಿಡಿದು ಬೀದಿಯಲ್ಲಿ ಝಳಪಿಸುತ್ತಿದ್ದಾರೆ.

ಇಲ್ಲಿನ ಹಳೇಹುಬ್ಬಳ್ಳಿ ನಾರಾಯಣ ಸೋಫಾದಲ್ಲಿ ಗುರುವಾರ ರಾತ್ರಿ ರೌಡಿ ಬಾಬಾ ಫರೀದ್ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಗಫಾರಸಾಬ್‌ ಕರೀಂಸಾಬ್‌ ಎಂಬುವರ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ್ದಾನೆ. ಕಸಬಾ ಪೊಲೀಸ್‌ ಠಾಣೆಯ ಹಿಂಭಾಗದಲ್ಲಿಯೇ ಈ ಪ್ರಕರಣ ನಡೆದಿದೆ.

ವಾರದ ಹಿಂದಷ್ಟೇ ಕಸಬಾ ಠಾಣೆ ಪೊಲೀಸರು ರೌಡಿ ಬಾಬಾ ಮನೆ ಮೇಲೆ ದಾಳಿ ನಡೆಸಿದ್ದರು. ಮುಂಜಾಗ್ರತಾ ಕ್ರಮವಾವಿ ಅವನ ವಿರುದ್ಧ ಪ್ರಕರಣವನ್ನು ಸಹ ದಾಖಲಿಸಿಕೊಂಡಿದ್ದರು.

‘ಬಾಬಾ ಫರೀದ್‌ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಒಂದೂವರೆ ವರ್ಷದ ಹಿಂದೆ ಗಫಾರಸಾಬ್‌ ಹಾಗೂ ತನ್ವೀರ್‌ ಎಂಬುವರು ಹಣಕಾಸಿನ ವ್ಯವಹಾರ ಕುರಿತು ದೂರು ದಾಖಲಿಸಿದ್ದರು. ಅದನ್ನು ವಾಪಸ್‌ ಪಡೆಯುವಂತೆ ಬಾಬಾ ಒತ್ತಾಯಿಸುತ್ತಿದ್ದ. ಅದಕ್ಕೆ ಒಪ್ಪದಿದ್ದಾಗ ಗಫಾರಸಾಬ್‌ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ’ ಎಂದು ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬಾಬಾ ಸೇರಿದಂತೆ ಸೋಯಬ್‌, ಮಂಗಲ್‌ ಯಾಸಿನ್‌, ಇಕ್ಬಾಲ್‌ ಯಾಸಿನ್‌, ಫಯಾಜ್‌ ಹತ್ತಿ ಮತ್ತು ಅಪ್ಪು ಎಂಬುವರ ವಿರುದ್ಧ ದೂರು ದಾಖಲಾಗಿದೆ. ಬಾಬಾ ವಿರುದ್ಧ ಕೊಲೆಯತ್ನದ ಆರೋಪವಿತ್ತು. ಕಸಬಾ ಠಾಣೆಯಲ್ಲಿ ದೂರು ಬಂದಾಗ ‘ಸಾಧಾರಣ ಭಯ’ ಎಂದು ಅಲ್ಲಿಯ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು. ಆಗಲೇ ಅವನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಪ್ರಕರಣ ಮರುಕಳಿಸುತ್ತಿರಲಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)