ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ರೈಲುಗಳ ಸಂಚಾರ ರದ್ದು

Last Updated 6 ಆಗಸ್ಟ್ 2019, 15:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿರಂತರ ಮಳೆಯ ಕಾರಣಕ್ಕೆ ನೈರುತ್ಯ ರೈಲ್ವೆ ವಲಯ ಕೆಲ ರೈಲುಗಳ ಸಂಚಾರ ರದ್ದು ಮಾಡಿದ್ದು, ಇನ್ನೂ ಕೆಲವು ಭಾಗಶಃ ರದ್ದಾಗಿವೆ. ಕೆಲ ರೈಲುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಲೋಂಡಾ–ತಿನೈ ಘಾಟ್‌ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿರುವ ಕಾರಣ ವಾಸ್ಕೋ–ಹೌರಾ ಅಮರಾವತಿ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಮಂಗಳವಾರ ರದ್ದು ಮಾಡಲಾಗಿದೆ. ಇದರ ಬದಲು ಆ. 7ರಂದು ತತ್ಕಾಲ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಬಿಡಲಾಗಿದೆ. ನಿಗದಿತ ಸಮಯದಲ್ಲಿಯೇ ಈ ರೈಲು ಸಂಚರಿಸಲಿದೆ.

ಮಣ್ಣು ಕುಸಿದ ಸ್ಥಳಕ್ಕೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್‌, ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್, ಹುಬ್ಬಳ್ಳಿ ವಲಯದ ಎಂಜಿನಿಯರ್‌ಗಳು ಭೇಟಿ ನೀಡಿದರು.

ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ಸ್‌–ವಿಜಯಪುರ ಫಾಸ್ಟ್‌ ಪ್ಯಾಸೇಂಜರ್‌ ರೈಲಿನ ಸಂಚಾರವನ್ನು ಮಂಗಳವಾರ ಎರಡೂ ಕಡೆಯಿಂದ ರದ್ದು ಮಾಡಲಾಗಿತ್ತು.

ಮಾರ್ಗ ಬದಲಾವಣೆ ಮಾಡಲಾದ ಪಟ್ನಾ–ವಾಸ್ಕೋಡಿಗಾಮ ರೈಲು ಮೀರಜ್‌ ಮೂಲಕ ಬೆಳಗಾವಿಗೆ ತೆರಳಿತು. ಹುಬ್ಬಳ್ಳಿ–ವಾಸ್ಕೊ ರೈಲು ಲೋಂಡಾದಲ್ಲಿಯೇ ನಿಂತಿತು. ಹಜರತ್‌ ನಿಜಾಮುದ್ದೀನ್–ವಾಸ್ಕೋಡಿಗಾಮ ರೈಲು ಮಂಗಳವಾರ ಕುಂದಾನಗರಿಯಲ್ಲಿ ನಿಲ್ಲಿಸಲಾಯಿತು. ವಾಸ್ಕೋಡಿಗಾಮ–ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ವಾಸ್ಕೋಡಿಗಾಮ–ಲೋಂಡಾ ನಡುವೆ ರದ್ದು ಮಾಡಲಾಗಿತ್ತು.

ಮಂಗಳವಾರ ಸಂಜೆ 4.15ಕ್ಕೆ ಹೊರಡಬೇಕಿದ್ದ ಹುಬ್ಬಳ್ಳಿ–ಹಜರತ್‌ ನಿಜಾಮುದ್ದೀನ್‌ ಲಿಂಕ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯದಲ್ಲಿ ಮಾರ್ಪಾಡು ಮಾಡಲಾಗಿದ್ದು, ಈ ರೈಲು ಬುಧವಾರ (ಆ. 7) ಮಧ್ಯರಾತ್ರಿ 12.30ಕ್ಕೆ ಹೊರಟಿತು. ವಾಸ್ಕೋಡಿಗಾಮ–ಹಜರತ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ನಿಗದಿತ ಸಮಯದ ಪ್ರಕಾರ ಮಂಗಳವಾರ ಸಂಜೆ 7 ಗಂಟೆಗೆ ಹೊರಡಬೇಕಿತ್ತು. ಆದರೆ, ಏಳು ತಾಸು ತಡವಾಗಿ ಸಂಚಾರ ಆರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT