ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 5 ವಿಮಾನ ನಿಲ್ದಾಣ ನಿರ್ಮಾಣ

ಕೆಸಿಸಿಐ: ಏಳು ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ
Last Updated 25 ಸೆಪ್ಟೆಂಬರ್ 2022, 5:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದಲ್ಲಿ ಐದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 94ನೇ ಸಂಸ್ಥಾಪನಾ ದಿನ ಹಾಗೂ ‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ದಿನದಿಂದ ದಿನಕ್ಕೆ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ. ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಸಾಕಷ್ಟು ಉದ್ಯಮಿಗಳು ಒಲವು ತೋರಿಸುತ್ತಿದ್ದಾರೆ. ರಾಜ್ಯದ ಎಲ್ಲ ಕಡೆಯೂ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಅದಕ್ಕೆ ಅನುಕೂಲವಾಗುವಂತೆ ರಾಜ್ಯದ ಬಾದಾಮಿ, ರಾಯಚೂರು, ಕೊಪ್ಪಳ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ತುಮಕೂರು ಮತ್ತು ಶಿರಾ ನಡುವೆ ಹಾಗೂ ಬೆಳಗಾವಿಯ ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

‘ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯ ಹೇಗಿರಬೇಕು ಎಂಬುದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ಕೆಲವು ಯೋಜನೆಗಳನ್ನು ರೂಪಿಸುತ್ತಿದೆ. ಅವುಗಳಲ್ಲಿ ಕಾರವಾರ ಮತ್ತು ಮಂಗಳೂರು ಬಂದರು ಅಭಿವೃದ್ಧಿ, ಹುಬ್ಬಳ್ಳಿ–ಬೆಳಗಾವಿ ಹಾಗೂ ಬೆಳಗಾವಿ–ಬೆಂಗಳೂರು ನಡುವೆ ಹೈಸ್ಪೀಡ್‌ ರೈಲು, ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಸಾಲ ಸೌಲಭ್ಯಗಳನ್ನು ನೀಡಲಾಗುವುದು’ ಎಂದು ಹೇಳಿದರು.

‘ನವೆಂಬರ್‌ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಯೋಜನೆ ರೂಪಿಸಿದ್ದು, ರಾಯಭಾರಿಯಾಗಿ ನಟ ಅಮಿತಾಭ್‌ ಬಚ್ಚನ್‌ ಅವರನ್ನು ಕರೆಯಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಆಹ್ವಾನಿಸಬೇಕೆಂದು ನಿರ್ಧರಿಸಲಾಗಿದೆ. ಅವರಿಬ್ಬರೂ ಬಂದರೆ ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿಯೇ ನಡೆಯಲಿದೆ. ಇಲ್ಲಿ ₹5 ಲಕ್ಷ ಕೋಟಿ ಹೂಡಿಕೆ ಒಪ್ಪಂದದ ನಿರೀಕ್ಷೆಯಿದ್ದು, ಅದರಲ್ಲಿ ಶೇ 90ರಷ್ಟು ಹೂಡಿಕೆ ಆಗುವಂತೆ ಮಾಡಲಾಗುವುದು’ ಎಂದರು.

ಉದ್ಯಮಿಗಳಾದ ಸುರೇಶಗೌಡ ಪಾಟೀಲ, ರಾಮಚಂದ್ರ ಕಾಮತ್‌, ನಾರಾಯಣ ನಿರಂಜನ್‌, ಸಂಜಯ್‌ ಮಿಶ್ರಾ, ಶ್ರೀನಿವಾಸ ರಾವ್‌, ಅಮಿತ್‌ ಪಿ., ಮತ್ತು ಶೈಲಾ ಗಣಾಚಾರಿ ಅವರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಸಂದೀಪ ಬಿಡಸಾರಿಯ, ಡಿ.ಎಸ್. ಗುಡ್ಡೋಡಗಿ, ಶಂಕರಣ್ಣ ಮುನವಳ್ಳಿ, ವಿ.ಪಿ. ಲಿಂಗನಗೌಡರ, ವಸಂತ ಲದ್ವಾ, ರಮೇಶ ಪಾಟೀಲ, ಮಹೇಂದ್ರ ಲದ್ದಡ ಇದ್ದರು.

ಛಲವಿದ್ದರೆ ಯಶಸ್ಸು: ಸಚಿವ ನಿರಾಣಿ
‘ಪರಿಶಿಷ್ಟ ಜಾತಿ ಮತ್ತು ಪಂಗಡದವರು ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬಂದರೆ ಶೇ 75ರಷ್ಟು ಸಬ್ಸಿಡಿ ನೀಡಲಾಗುವುದು. ಇತರ ವರ್ಗದವರಿಗೂ 2 ಎಕರೆವರೆಗೆ ಶೇ 75 ರಷ್ಟು ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ರಾಜಕೀಯ ಮತ್ತು ಉದ್ಯಮ ಸ್ಥಾಪನೆ ಮಾಡಲು ಯಾರಿಗೂ ಗಾಡ್ ಫಾದರ್ ಬೇಕಾಗಿಲ್ಲ, ಛಲವೊಂದಿದ್ದರೆ ಸಾಕು. ಅದಕ್ಕೆ ಇನ್ಫೊಸಿಸ್‌ ಸಂಸ್ಥಾಪಕರೇ ನಿದರ್ಶನ’ ಎಂದ ಸಚಿವ ಮುರುಗೇಶ ನಿರಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT