ಬುಧವಾರ, ಸೆಪ್ಟೆಂಬರ್ 22, 2021
23 °C
ಹಳ್ಳವಾದ ರಸ್ತೆಗಳು, ಮನೆಗೆ ನುಗಿದ್ದ ನೀರು; ಕುಸಿದ ಗೋಡೆ, ಪರದಾಡಿದ ಸವಾರರು

ಧಾರವಾಡ: ಮಳೆ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣನ ಅಬ್ಬರಕ್ಕೆ ರಸ್ತೆಗಳು ಜಲಾವೃತಗೊಂಡಿದ್ದರಿಂದ, ವಾಹನ ಸವಾರರು ಪರದಾಡಿದರು. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮನೆ ಗೋಡೆಗಳು ಕುಸಿದು ಹಾನಿಯಾಗಿದೆ.

ಚರಂಡಿ ಹಾಗೂ ಒಳ ಚರಂಡಿಗಳಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನೀರು ಸುಗಮವಾಗಿ ಹರಿಯಲಾಗದೆ ಕೆಲ ರಸ್ತೆಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಯಿತು. ದಾಜಿಬಾನ ಪೇಟೆಯ ತುಳಜಾಭವಾನಿ ವೃತ್ತ, ಮೇದಾರ ಓಣಿ, ಅಶೋಕನಗರ ಸಮೀಪದ ಭವಾನಿನಗರದ ರೈಲ್ವೆ ಕೆಳ ಸೇತುವೆ, ಲಿಂಗರಾಜನಗರ ಹಾಗೂ ಹಳೇ ಹುಬ್ಬಳ್ಳಿಯ ಹಲವು ಪ್ರದೇಶದ ತಗ್ಗು ಪ್ರದೇಶಗಳಲ್ಲಿ ಕೆಲ ಹೊತ್ತು ಮಳೆ ನೀರು ಸಂಗ್ರಹವಾಯಿತು.

ಮನೆಗೆ ನುಗ್ಗಿದ ನೀರು: ಗದಗ ರಸ್ತೆಯ ಚೇತನಾ ಕಾಲೊನಿ ಹಾಗೂ ವಾರ್ಡ್ 35ರ ಹನುಮಂತನಗರದಲ್ಲಿ ರಸ್ತೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿತು. ಮನೆಯಲ್ಲಿದ್ದ ವಸ್ತುಗಳು ಒದ್ದೆಯಾದವು. ಕೈಗೆ ಸಿಕ್ಕ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿಟ್ಟ ಮನೆಯವರು, ನೀರನ್ನು ಬಕೆಟ್‌ ಮತ್ತು ಪಾತ್ರೆಗಳಿಂದ ಹೊರಕ್ಕೆ ಚೆಲ್ಲುತ್ತಿದ್ದ ದೃಶ್ಯ ಕಂಡುಬಂತು. ಉಣಕಲ್ ಕೆರೆಯು ತುಂಬಿ ಲಿಂಗರಾಜನಗರದ ಕಡೆಗೂ ಸ್ವಲ್ಪ ಹರಿಯಿತು. ನೀರು ಒಂದೇ ಕಡೆ ಸಂಗ್ರಹಗೊಂಡು ಅನಾಹುತವಾಗದಂತೆ, ಕಾಲುವೆ ಕಡೆಗೆ ನೀರು ಹರಿದು ಹೋಗುವಂತೆ ಜೆಸಿಬಿಯಲ್ಲಿ ದಾರಿ ಮಾಡಲಾಯಿತು.

ಸಂಚಾರ ದಟ್ಟಣೆ: ಮಳೆಯಿಂದಾಗಿ ಚನ್ನಮ್ಮ ವೃತ್ತ, ಹಳೇ ಪಿ.ಬಿ. ರಸ್ತೆ, ಬೆಂಗಳೂರು ರಸ್ತೆ, ದೇಶಪಾಂಡೆ ನಗರ, ಹೊಸೂರು ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಈಜುಕೋಳ ರಸ್ತೆ, ನೀಲಿಜಿನ್ ರಸ್ತೆ, ಸ್ಟೇಷನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಮಳೆಯಲ್ಲೇ ಸವಾರರು ನಿಧಾನವಾಗಿ ಸಾಗಿದರು. ಉಣಕಲ್ ಸೇರಿದಂತೆ ಬಿಆರ್‌ಟಿಎಸ್ ಮಾರ್ಗದ ಕೆಲ ನಿಲ್ದಾಣಗಳಲ್ಲಿ ನೀರು ನಿಂತು ಆವಾಂತರ ಸೃಷ್ಟಿಸಿತು.

ಮನೆಗಳಿಗೆ ಹಾನಿ: ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಬು. ಅರಳಿಕಟ್ಟಿಯಲ್ಲಿ 2, ಅಗಡಿ 1, ಅಂಚಟಗೇರಿ 2, ರಾಮಾಪುರ 1, ಚವರಗುಡ್ಡ 3, ವರೂರ 1, ಪಾಲಿಕೊಪ್ಪ 4, ಕಂಪ್ಲಿಕೊಪ್ಪ 2, ತಿರುಮಲಕೊಪ್ಪ 1, ಗಂಗಿವಾಳ 1, ಶಿರಗುಪ್ಪಿ 1, ಸುಳ್ಳ 4 ಹಾಗೂ ಉಮಚಗಿಯಲ್ಲಿ 4 ಮನೆಗಳಿಗೆ ಹಾನಿಯಾಗಿದೆ. ಅಂದಾಜು ₹10.80 ಲಕ್ಷ ಹಾನಿಯಾಗಿದೆ. 

ನಾಲ್ಕೈದು ದಿನದಿಂದ ಬಿಡದೆ ಸುರಿಯುತ್ತಿರುವ ಮಳೆಗೆ ನಗರ ತಾಲ್ಲೂಕಿನ ಕೇಶ್ವಾಪುರ, ಗಣೇಶಪೇಟೆ, ತೊರವಿಗಲ್ಲಿ, ಗಾರ್ಡನ್‌ಪೇಟೆ, ಮ್ಯಾಂಗನೀಸ್ ಪ್ಲಾಟ್, ಸಿಬಿಟಿ, ಮಕಾನದಾರ ಗಲ್ಲಿ, ಗೋಪನಕೊಪ್ಪ, ಬಮ್ಮಾಪುರ, ಹೆಗ್ಗೇರಿ, ಹಳೇ ಹುಬ್ಬಳ್ಳಿ, ನಾಗಶೆಟ್ಟಿಕೊಪ್ಪ, ಗೋಕುಲ, ತಾರಿಹಾಳ, ಅಮರಗೋಳ, ಗಾಮನಗಟ್ಟಿ ಹಾಗೂ ಸುತಗಟ್ಟಿಯಲ್ಲಿ ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಬ್ಬಳ್ಳಿಯಲ್ಲಿ 6.12 ಸೆ.ಮೀ., ಛಬ್ಬಿಯಲ್ಲಿ 6.80 ಸೆ.ಮೀ., ಶಿರಗುಪ್ಪಿಯಲ್ಲಿ 2.62 ಸೆ.ಮೀ. ಹಾಗೂ ಬ್ಯಾಹಟ್ಟಿಯಲ್ಲಿ 3.08 ಸೆ.ಮೀ. ಮಳೆಯಾಗಿದೆ ಎಂದು ತಹಶೀಲ್ದಾರ್ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

ಹಲವೆಡೆ ಬಸ್ ಸಂಚಾರ ಸ್ಥಗಿತ: ಮಳೆಗೆ ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ - ವೀರಾಪುರ, ನವಲಗುಂದ ತಾಲೂಕಿನಲ್ಲಿ ನವಲಗುಂದ- ನಲವಡಿ, ನವಲಗುಂದ -ಶಿರಕೋಳ, ಹುಬ್ಬಳ್ಳಿ- ಅಳಗವಾಡಿ ಹಾಗೂ ಮಣಕವಾಡ- ಶಿಶುವಿನಹಳ್ಳಿ ಮಾರ್ಗಗಳ ಬಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದ್ದಾರೆ.

ಅಣ್ಣಿಗೇರಿ ತಾಲ್ಲೂಕಿನಲ್ಲಿ ನವಲಗುಂದ -ತುಪ್ಪದಕುರಹಟ್ಟಿ, ಕಲಘಟಗಿ ತಾಲ್ಲೂಕಿನ ಹುಬ್ಬಳ್ಳಿ- ಹುಲಕೊಪ್ಪ, ಹುಬ್ಬಳ್ಳಿ - ತಬಕದಹೊನ್ನಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನ ಕುಂದಗೋಳ -ಯರಗುಪ್ಪಿ, ಕೊಡ್ಲಿವಾಡ- ಗುಂಜಳ ಸೇರಿದಂತೆ ಹಲವು ಮಾರ್ಗಗಳಲ್ಲಿ ಬಸ್‌ಗಳ ಸಂಚಾರವನ್ನು ನಿಲ್ಲಿಸಲಾಗಿದೆ.

ಕೊಲ್ಲಾಪುರ- ನಿಪ್ಪಾಣಿ ನಡುವೆ ಕೋಗನೋಳಿ ಟೋಲ್ ಗೇಟ್ ಬಳಿ ಸೇತುವೆ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದೆ. ಪಿಂಪ್ರಿಯಿಂದ ಹುಬ್ಬಳ್ಳಿಗೆ ಬರಬೇಕಾಗಿದ್ದ ಸ್ಲೀಪರ ಬಸ್ ಸೇರಿದಂತೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಬಸ್‌ಗಳು ಅಲ್ಲಿಯೇ ಸಿಲುಕಿವೆ. ಹಾಗಾಗಿ, ಹುಬ್ಬಳ್ಳಿಯಿಂದ ಕೊಲ್ಲಾಪುರ ಕಡೆಗೆ ಬಸ್ ಸಂಚಾರ ರದ್ದುಗೊಳಿಸಲಾಗಿದೆ.

ಯಲ್ಲಾಪುರ- ಅಂಕೋಲಾ ನಡುವಣ ಅರಬೈಲ್ ಘಾಟ್‌ನಲ್ಲಿ, ಶಿರಸಿ- ಕುಮಟಾ ನಡುವೆ ಕತಗಾಲ ಬಳಿ ಹಾಗೂ ಶಿರಸಿ-ಜೋಗ ರಸ್ತೆಯಲ್ಲಿ ಶಿರಸಿ-ಸಿದ್ದಾಪುರ ನಡುವೆ ಅಲ್ಲಲ್ಲಿ ಗುಡ್ಡ ಕುಸಿದು ಬಸ್ ಸಂಚಾರ ವ್ಯತ್ಯಯವಾಗಿದೆ. ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ ಮುಂತಾದ  ಜಿಲ್ಲೆಗಳ ದೂರದ ಊರುಗಳಿಗೆ ತೆರಳುವ ಬಸ್‌ಗಳನ್ನು ಆಯಾ ಪ್ರದೇಶಗಳ ಮಳೆ ಹಾಗೂ ಪ್ರವಾಹ ಸ್ಥಿತಿ ನೋಡಿಕೊಂಡು ಬಸ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.