ಭಾನುವಾರ, ಏಪ್ರಿಲ್ 11, 2021
33 °C
ಅಧಿಕಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಸೂಚನೆ

ದುರ್ಬಳಕೆಗೆ ಕಡಿವಾಣ ಹಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸರ್ಕಾರದ ಯೋಜನೆಗಳ ಫಲಾನುಭವಿಗಳ ಮನೆಗೆ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ, ಅವರು ಸೌಕರ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಬೇಕು. ಸೌಕರ್ಯಗಳ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಅಯೋಧ್ಯಾನಗರದ ಅಂಬೇಡ್ಕರ್ ಕಾಲೊನಿಯಲ್ಲಿ ಶನಿವಾರ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ  ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ಘಾಟನೆ ಹಾಗೂ ಹಿಂದಿನ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳೆಯರು ಸ್ವಉದ್ಯೋಗ ಕೈಗೊಳ್ಳಲು ತರಬೇತಿ ಶಿಬಿರಗಳು ನೆರವಾಗಲಿವೆ. ಹಿಂದೆ ಲಿಡ್ಕರ್ ಅಧ್ಯಕ್ಷನಾಗಿದ್ದಾಗ ರಾಜ್ಯದಲ್ಲಿ ಚರ್ಮ ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಹಾಗೂ ತರಬೇತಿ ಪಡೆದ ಫಲಾನುಭವಿಗಳಿಗೆ ಹೊಲಿಗೆ ಯಂತ್ರದ ಜೊತೆಗೆ ಸ್ವ ಉದ್ಯೋಗ ಕೈಗೊಳ್ಳಲು ಅಗತ್ಯ ಸಾಲ ಸೌಲಭ್ಯ ಮತ್ತು ಮಾರುಕಟ್ಟೆ ಬಗೆಗಿನ ಮಾರ್ಗದರ್ಶನ ಸೇರಿದಂತೆ ಅಗತ್ಯ ನೆರವು ನೀಡಲು ಯೋಜನೆ ರೂಪಿಸಲಾಗಿತ್ತು’ ಎಂದು ಹೇಳಿದರು.

‘ನನ್ನ ಕ್ಷೇತ್ರದ ವ್ಯಾಪ್ತಿಯ ಢೋರ ಗಲ್ಲಿಯಲ್ಲಿ ₹50 ಲಕ್ಷ ಹಾಗೂ ಶ್ರೀರಾಮ ಕಾಲೊನಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ₹ 9 ಕೋಟಿ ವೆಚ್ಚದ ಡಾ. ಬಾಬು ಜಗಜೀವನರಾಂ ಭವನ ಸೇರಿದಂತೆ ₹20 ಕೋಟಿ ವೆಚ್ಚದಲ್ಲಿ ಕ್ಷೇತ್ರದ ವಿವಿಧೆಡೆ ಅನೇಕ ಭವನಗಳನ್ನು ನಿರ್ಮಿಸಿ, ಬಡವರ ಕಲ್ಯಾಣ ಕಾರ್ಯಗಳಿಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದರು.

ಸಮತಾ ಸೇನಾ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ‘ಲಿಡ್ಕರ್ ನಿಗಮದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದ ಕೀರ್ತಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಲ್ಲುತ್ತದೆ. ಅವರ ಅವಧಿಯಲ್ಲಿ ಹುಬ್ಬಳ್ಳಿಗೆ ತರಲು ಪ್ರಯತ್ನಿಸಿದ ಚೆನ್ನೈನ ಸಿಎಫ್‌ಟಿಐ ಶಾಖಾ ಕೇಂದ್ರವನ್ನು ಇದೀಗ ಚಿತ್ರದುರ್ಗಕ್ಕೆ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಹುಡಾ ಮಾಜಿ ಸದಸ್ಯ ಪ್ರಭು ಪ್ರಭಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು. 2015-16ನೇ ಸಾಲಿನಲ್ಲಿ ತರಬೇತಿ ಪಡೆದ 60 ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಮುಖಂಡರಾದ ದಶರಥ ವಾಲಿ, ಅರುಣ ಘೋಡ್ಕೆ, ಗಣೇಶ ಘೋಡ್ಕೆ, ಸಿದ್ದಪ್ಪ, ರಾಮಚಂದ್ರ ಹೊಸಮನಿ, ರವಿ ಕದಂ, ರಮೇಶ ಕದಂ, ಯಲ್ಲಪ್ಪ ಸವಣೂರು, ರಮೇಶ ಘೋಡ್ಕೆ, ಪರಶುರಾಮ ಸೋನಾವನೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭವಿಷ್ಯ ಮಾರ್ಟಿನ್, ಲಿಡ್ಕರ್ ಅಧಿಕಾರಿ ಎ.ಎಸ್. ರುದ್ರೇಶ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು