ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ದಿನಸಿ ಪೂರೈಕೆ: ಸಚಿವ ಜಗದೀಶ್‌ ಶೆಟ್ಟರ್‌

Last Updated 28 ಮಾರ್ಚ್ 2020, 9:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದಿನಸಿ ಹಾಗೂ ತರಕಾರಿಗಳ ಸರಬರಾಜಿಗೆ ಯಾವುದೇ ಸಮಸ್ಯೆ ಎದುರಾಗದು. ಮನೆಗಳಿಗೆ ಅವುಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಅಮರಗೋಳದ ಎಪಿಎಂಸಿ ಮತ್ತು ನೆಹರೂ ಮೈದಾನದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ತರಕಾರಿ ಮಾರುಕಟ್ಟೆಗಳನ್ನು ವೀಕ್ಷಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಅಗತ್ಯ ವಸ್ತುಗಳ ಪೂರೈಕೆಗೆ ಸೂಕ್ತಕ್ರಮ ಕೈಗೊಳ್ಳುತ್ತಿದ್ದೇವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

186 ಬಿಡಿ ತರಕಾರಿ ವ್ಯಾಪಾರಸ್ಥರು ಪಾಲಿಕೆಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಎಲ್ಲ ವಾರ್ಡ್‌ಗಳಿಗೆ ಅವರನ್ನು ಹಂಚಿಕೆ ಮಾಡಿ, ತಳ್ಳುವ ಕೈಗಾಡಿ ಅಥವಾ ವಾಹನಗಳ ಮೂಲಕ ಮನೆ ಬಾಗಿಲಿಗೆ ತೆರಳಿ ಅವರು ವ್ಯಾಪಾರ ಮಾಡಲಿದ್ದಾರೆ. ಇದರಿಂದ ಜನರು ಹೊರಗಡೆ ಬರುವುದು ತಪ್ಪಲಿದೆ ಎಂದರು.

ಕಿರಾಣಿ ಅಂಗಡಿಗಳಿಗೆ ಸಗಟು ವ್ಯಾಪಾರಸ್ಥರು ವಾಹನಗಳಲ್ಲಿ ದಿನಸಿಗಳನ್ನು ತಲುಪಿಸಲಿದ್ದಾರೆ. ಅವರು ಜನರ ಮನೆಗೆ ತೆರಳಿ ದಿನಸಿಗಳನ್ನು ಪೂರೈಕೆ ಮಾಡಲಿದ್ದಾರೆ. ವ್ಯಾಪಾರಸ್ಥರಲ್ಲಿ ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

21 ದಿನಗಳ ಲಾಕ್‌ಡೌನ್‌ ಮಹತ್ವ ಅರಿತು ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವುದನ್ನು ಬಿಡಬೇಕು. ಶನಿವಾರದಿಂದ ಪೊಲೀಸರು ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು.

ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್‌ ಕಮಿಷನರ್‌ ಆರ್. ದಿಲೀಪ, ಎಸ್‌ಪಿ ವರ್ತಿಕಾ ಕಟಿಯಾರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ. ಸತೀಶ, ಡಿಸಿಪಿ ಕೃಷ್ಣಕಾಂತ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ್, ತಹಶಿಲ್ದಾರ್‌ ಶಶಿಧರ ಮಾಡ್ಯಾಳ ಇದ್ದರು.

ಶೆಟ್ಟರ್‌ ಸಲಹೆ

ಎಪಿಎಂಸಿ ಆವರಣಕ್ಕೆ ಭೇಟಿ ನೀಡಿದ ಶೆಟ್ಟರ್‌, ‘ಸಗಟು ಖರೀದಿದಾರರು ಹಾಗೂ ಸಣ್ಣ ವ್ಯಾಪಾರಿಗಳು ಬರಲು ಗೇಟ್ ನಂಬರ್ 2ರಿಂದ ಹಾಗೂ ಹೊರ ಹೋಗಲು ಗೇಟ್ ನಂಬರ್ 1ರಿಂದ ಅವಕಾಶ ಕಲ್ಪಿಸಬೇಕು. ವ್ಯಾಪಾರಸ್ಥರು ಒಂದೇ ಕಡೆ ಜಮಾಯಿಸದೆ, ಆವರಣದಲ್ಲಿ ದೂರ, ದೂರ ಕುಳಿತು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ಖರೀದಿದಾರರು ಕೂಡ ಮುಗಿಬೀಳದೆ ಆರೋಗ್ಯದ ರಕ್ಷಣೆ ದೃಷ್ಟಿಯಿಂದ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸುವಂತೆ’ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT