ಶನಿವಾರ, ಮಾರ್ಚ್ 6, 2021
32 °C
ಪಾಲಿಕೆಗೆ ವಂಚಿಸಿದವರಿಗೆ ಬೀಳಲಿದೆ ದಂಡ: ಆದಾಯ ಗಣನೀಯ ಏರಿಕೆ ನಿರೀಕ್ಷೆ

ತೆರಿಗೆಗೆ ಒಳಪಡದ ಆಸ್ತಿ ಪತ್ತೆಗೆ ಜಿಐಎಸ್ ಸಮೀಕ್ಷೆ

ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಸಮೀಕ್ಷೆ ನಡೆಸುವ ಮೂಲಕ ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳನ್ನು ಪತ್ತೆ ಮಾಡಲು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಉಪಗ್ರಹ ಆಧಾರಿತ ಈ ಸಮೀಕ್ಷೆಗೆ ಸುಮಾರು ₹2.50 ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಈಗಷ್ಟೇ ಆರಂಭವಾಗಬೇಕಿದ್ದು, ಎರಡು ತಿಂಗಳಲ್ಲಿ ಸಮೀಕ್ಷೆ ಆರಂಭವಾಗುವ ನಿರೀಕ್ಷೆ ಇದೆ.

ಪಾಲಿಕೆಗೆ ಈಗ ವಾರ್ಷಿಕ ₹60 ಕೋಟಿ ಆಸ್ತಿ ತೆರಿಗೆ ಸಂದಾಯವಾಗುತ್ತಿದೆ. ಅವಳಿ ನಗರ ದಿನೇ ದಿನೇ ಬೆಳೆಯುತ್ತಿದ್ದು, ನಾಲ್ಕೂ ದಿಕ್ಕುಗಳಲ್ಲಿ ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಯಗಳು ತಲೆ ಎತ್ತುತ್ತಿವೆ. ಮನೆಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಪೂರಕವಾಗಿ ಆಸ್ತಿ ತೆರಿಗೆ ಮಾತ್ರ ಹೆಚ್ಚಳವಾಗುತ್ತಿಲ್ಲ.

ಎಲ್ಲ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟರೆ, ಕನಿಷ್ಠ ₹100 ಕೋಟಿ ತೆರಿಗೆ ಸಂಗ್ರಹವಾಗಲಿದೆ. ಪಾಲಿಕೆ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಸಂದಾಯವಾದರೆ, ಅದನ್ನು ರಸ್ತೆ, ಕುಡಿಯುವ ನೀರು, ಬೀದಿ ದೀಪದಂತಹ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದು ಎಂಬುದು ಪಾಲಿಕೆ ಸದಸ್ಯರ ವಾದವಾಗಿದೆ.

ಕೆಲವರು ತಮ್ಮ ಆಸ್ತಿಯನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸದೆ ವಂಚಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ನೆಲ ಮಹಡಿ ನಿರ್ಮಾಣಕ್ಕೆ ಅನುಮತಿ ಪಡೆದು, ಹಲವು ಮಹಡಿಗಳನ್ನು ನಿರ್ಮಿಸುತ್ತಿದ್ದಾರೆ. ದಾಖಲೆಗಳಲ್ಲಿ ನೆಲ ಮಹಡಿ ಕಟ್ಟಡ ಎಂದು ನಮೂದಾಗಿರುವುದರಿಂದ ಅದಕ್ಕಷ್ಟೇ ಅವರು ತೆರಿಗೆ ಪಾವತಿಸುತ್ತಿದ್ದಾರೆ. ಅನುಮತಿ ಪಡೆಯದೆ ನಿರ್ಮಾಣ ಮಾಡಿರುವ ಕಟ್ಟಡಕ್ಕೆ ತೆರಿಗೆ ಕಟ್ಟಲು ಬಂದರೂ, ದಾಖಲೆಯಲ್ಲಿ ಇಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ಅವರನ್ನು ವಾಪಸ್ ಕಳುಹಿಸುತ್ತಾರೆ ಎನ್ನುತ್ತಾರೆ ಮೇಯರ್ ಸುಧೀರ್ ಸರಾಫ್

ಅನುಮತಿಯನ್ನೇ ಪಡೆಯದೆ ಕಟ್ಟಡ ನಿರ್ಮಾಣ ಮಾಡಿರುವುದ ಸಹ ಇದೆ. ಜಿಐಎಸ್ ಸಮೀಕ್ಷೆ ನಡೆದು ಎಲ್ಲ ಆಸ್ತಿಗಳನ್ನು ಪತ್ತೆ ಮಾಡಿದರೆ ತೆರಿಗೆ ಪ್ರಮಾಣ ನೂರು ಕೋಟಿಯನ್ನು ದಾಟಲಿದೆ. ಅಲ್ಲದೆ ಇದೊಂದು ಉಪಗ್ರಹ ಆಧಾರಿತ ತಾಂತ್ರಿಕ ಸಮೀಕ್ಷೆಯಾಗಿರುವುದರಿಂದ ನೂರಕ್ಕ ನೂರರಷ್ಟು ಅಕ್ರಮ ಪತ್ತೆ ಸಾಧ್ಯವಿದೆ. ಆಸ್ತಿ ಮಾಲೀಕ ಅದನ್ನು ನಿರಾಕರಿಸಲು ಸಾಧ್ಯವಾಗದು ಎನ್ನುತ್ತಾರೆ ಅವರು.

ತೆರಿಗೆ ಕಟ್ಟದ ಆಸ್ತಿ ಪತ್ತೆಯಾದರೆ ಬಾಕಿ ತೆರಿಗೆಯನ್ನು ಬಡ್ಡಿ ಸಮೇತ ವಸೂಲಿ ಮಾಡಲಾಗುತ್ತದೆ. ಉದಾಹರಣೆಗೆ 10 ವರ್ಷದ ಹಿಂದೆ 1000 ಚ.ಅ ಕಟ್ಟಡ ಕಟ್ಟಿದ್ದರೆ, 10 ವರ್ಷಕ್ಕೆ ತೆರಿಗೆ ಹಾಗೂ ಬಡ್ಡಿ ಲೆಕ್ಕ ಹಾಕಿ ಒಟ್ಟು ಮೊತ್ತವನ್ನು ಪಡೆದುಕೊಳ್ಳಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು