ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ರಾಷ್ಟ್ರಪತಿ ಪೌರ ಸನ್ಮಾನಕ್ಕೆ ಕ್ಷಣಗಣನೆ

ನಗರದಾದ್ಯಂತ ಬಿಗಿ ಬಂದೋಬಸ್ತ್‌; ವೇದಿಕೆ ಎದುರು ಅವಳಿನಗರದ ಐಕಾನ್‌ಗಳ ಪ್ರದರ್ಶನ
Last Updated 26 ಸೆಪ್ಟೆಂಬರ್ 2022, 4:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಸೋಮವಾರ ನಗರದ ಜಿಮ್ಖಾನ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ವೇದಿಕೆಯ ಅಕ್ಕಪಕ್ಕ ಎರಡು ಹಾಗೂ ಸಾರ್ವಜನಿಕರ ಗ್ಯಾಲರಿಯಲ್ಲಿ ನಾಲ್ಕು ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ವೇದಿಕೆ ಎದುರು ಕೆಳಭಾಗದಲ್ಲಿ ಅವಳಿನಗರದ ಐಕಾನ್‌ಗಳಾದ ಸಿದ್ಧಾರೂಢಮಠ, ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ, ಮೂರುಸಾವಿರ ಮಠ, ಮುರುಘಾಮಠ, ಮಹಾನಗರ ಪಾಲಿಕೆ, ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್), ರೈಲ್ವೆ ಮ್ಯೂಸಿಯಂ, ಕೃಷಿ ವಿಶ್ವವಿದ್ಯಾಲಯಗಳ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ರಾಷ್ಟ್ರಪತಿ ಅವರ ವಿಶ್ರಾಂತಿಗೆ ವೇದಿಕೆ ಹಿಂಭಾಗದಲ್ಲಿ ಎರಡು ಪ್ರತ್ಯೇಕ ಕೊಠಡಿ ಸಿದ್ಧಪಡಿಸಲಾಗಿದ್ದು, ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.

ಜಿಮ್ಖಾನ ಮೈದಾನ ಮತ್ತು ಸವಾಯಿ ಗಂಧರ್ವ ಸಭಾಂಗಣದ ಸುತ್ತಲಿನ ಪ್ರದೇಶ ಶುಚಿಗೊಳಿಸಿ, ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲಾಗಿದೆ. ಪಾದಚಾರಿ ಮಾರ್ಗದ ಮೇಲೆ ವ್ಯಾಪಾರ ನಡೆಸುತ್ತಿದ್ದವರನ್ನು ತೆರವು ಮಾಡಿ, ಪ್ಲೇವರ್ಸ್‌ಗಳನ್ನು ಅಳವಡಿಸಲಾಗಿದೆ. ಸವಾಯಿ ಗಂಧರ್ವ ಸಭಾಂಗಣದ ಪಕ್ಕದಲ್ಲಿನ ನಾಲಾದ ತಡೆಗೋಡೆಗೆ ಬಣ್ಣ ಬಳಿದು, ಜಾಲರಿ ಅಳವಡಿಸಿ ಹಸಿರು ಮ್ಯಾಟ್‌ ಹಾಕಲಾಗಿದೆ. ರಾಷ್ಟ್ರಪತಿ ಸಂಚರಿಸುವ ವಿಮಾನ ನಿಲ್ದಾಣದಿಂದ ಜಿಮ್ಖಾನ ಮೈದಾನದವರೆಗಿನ ರಸ್ತೆ ಮಾರ್ಗವನ್ನು ಶುಚಿಗೊಳಿಸಿ, ವಿಭಜಕಗಳಲ್ಲಿರುವ ದೂಳನ್ನು ತೆಗೆಯಲಾಗಿದೆ.

ಇಡೀ ದಿನ ತಪಾಸಣೆ; ಪರಿಶೀಲನೆ: ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಸ್ಫೋಟಕ ವಸ್ತುಗಳ ಪತ್ತೆ ದಳದ ಸಿಬ್ಬಂದಿ ಕಾರ್ಯಕ್ರಮ ನಡೆಯುವ ಸ್ಥಳವನ್ನು ಭಾನುವಾರ ತಪಾಸಣೆಗೆ ಒಳಪಡಿಸಿದರು. ವೇದಿಕೆ ಮೇಲೆ ಹಾಕಿರುವ ಆಸನಗಳನ್ನು ಹಾಗೂ ರಾಷ್ಟ್ರಪತಿ ವಿಶ್ರಾಂತಿ ಪಡೆಯುವ ಕೊಠಡಿಗಳನ್ನು ಮೆಟಲ್‌ ಡಿಟೆಕ್ಟರ್‌ ಮೂಲಕ ಸೂಕ್ಷ್ಮವಾಗಿ ಪರೀಕ್ಷಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವೇದಿಕೆ ಮೇಲೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, ಅಗತ್ಯ ಮುನ್ನೆಚ್ಚರಿಕೆ ಕೈಗೊಂಡರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್‌ ಕಮಿಷನರ್‌ ಲಾಭೂರಾಮ್‌, ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಬಿ., ಸೇರಿ ಇತರ ಅಧಿಕಾರಿಗಳು ಜಿಮ್ಖಾನ ಮೈದಾನದಲ್ಲಿ ಬೀಡು ಬಿಟ್ಟು, ಸಿಬ್ಬಂದಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು. ರಾಷ್ಟ್ರಪತಿ ವೇದಿಕೆಗೆ ಆಗಮಿಸುತ್ತಿದ್ದಂತೆ ಯಾವೆಲ್ಲ ಶಿಷ್ಟಾಚಾರ ಪಾಲಿಸಬೇಕು ಎನ್ನುವ ಕುರಿತು ಪೂರ್ವಾಭ್ಯಾಸ ನಡೆಸಿದರು. ವೇದಿಕೆಯಿಂದ ಗಣ್ಯರು ಹಾಗೂ ಸಾರ್ವಜನಿಕರ ಗ್ಯಾಲರಿಗೆ ಶಿಷ್ಟಾಚಾರದ ಪ್ರಕಾರ ಇರಬೇಕಾದ ಅಳತೆಯಲ್ಲಿ ಲೋಪ ಕಂಡು ಬಂದಿತ್ತು. ರಾಷ್ಟ್ರಪತಿ ಮಾತನಾಡುವ ಪೋಡಿಯಂ ಅಳತೆ ಸಹ ಹೆಚ್ಚಾಗಿತ್ತು. ಪರಿಶೀಲನೆ ವೇಳೆ ಇವುಗಳನ್ನು ಗಮನಿಸಿದ ಕಮಿಷನರ್‌ ಲಾಭೂರಾಮ್‌, ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡು ಸರಿಪಡಿಸಲು ಸೂಚಿಸಿದರು.

ಬಿಗಿ ಭದ್ರತೆ: ನಗರದಾದ್ಯಂತ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಎಸ್ಪಿ ನೇತೃತ್ವದಲ್ಲಿ 54 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಡಿಸಿಪಿ ಗೋಪಾಲ ಬ್ಯಾಕೋಡ್‌ ನೇತೃತ್ವದಲ್ಲಿ ರಸ್ತೆ ಬಂದೋಬಸ್ತ್‌ಗೆ 151 ಸಿಬ್ಬಂದಿ, ಡಿಸಿಪಿ ಸಾಹಿಲ್‌ ಬಾಗ್ಲಾ ನೇತೃತ್ವದಲ್ಲಿ ಜಿಮ್ಖಾನ ಮೈದಾನದ ಸುತ್ತಮುತ್ತ 261 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಭಾನುವಾರ ಸಂಜೆ ವಿಮಾನ ನಿಲ್ದಾಣದಿಂದ ಜಿಮ್ಖಾನ ಮೈದಾನದವರೆಗೆ ಝಿರೋ ಟ್ರಾಫಿಕ್‌ ಮೂಲಕ ರಾಷ್ಟ್ರಪತಿಯವರನ್ನು ಹೇಗೆ ಕರೆತರಬೇಕು ಎನ್ನುವ ಕುರಿತು ಪೊಲೀಸ್‌ ಸಿಬ್ಬಂದಿ ಪೂರ್ವಾಭ್ಯಾಸ ನಡೆಸಿದರು. ಪೆಂಡಾಲ್‌ ಹಾಗೂ ವೇದಿಕೆ ಸುತ್ತಮುತ್ತ 100ಕ್ಕೂ ಹೆಚ್ಚು ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ, ಹದ್ದಿನ ಕಣ್ಣು ಇಡಲಾಗಿದೆ.

ಸವಾಯಿ ಗಂಧರ್ವ ಸಭಾಭವನದ ಬಳಿಯ ಮೈದಾನದಲ್ಲಿನ ಬಲಗಡೆಯ ಗೇಟ್‌ನಿಂದ ಸಾರ್ವಜನಿಕರಿಗೆ ಹಾಗೂ ಗುಜರಾತ್ ಭವನ ಬಳಿಯ ಮುಖ್ಯ ದ್ವಾರದಿಂದ ಜನಪ್ರತಿನಿಧಿಗಳಿಗೆ, ಗಣ್ಯರಿಗೆ ಪ್ರವೇಶ ಕಲ್ಪಿಸಲಾಗಿದೆ. ಬೆಳಿಗ್ಗೆ 10ರಿಂದ ಕಾರ್ಯಕ್ರಮ ಮುಕ್ತಾಯಗೊಳ್ಳುವವರೆಗೆ ಈ ಭಾಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಪರೀಕ್ಷೆ ಮುಂದೂಡಿಕೆ: ಭದ್ರತಾ ದೃಷ್ಟಿಯಿಂದ ದೇಶಪಾಂಡೆ ನಗರದ ಸುತ್ತಲಿನ ಶಾಲೆಗಳಲ್ಲಿ ಸೆ.26ರಂದು ನಡೆಯಬೇಕಿದ್ದ ಆಂತರಿಕ ಪರೀಕ್ಷೆಯನ್ನು ಅಕ್ಟೋಬರ್‌ 1ಕ್ಕೆ ಮುಂದೂಡಲಾಗಿದೆ.

ವಿಶೇಷ ರಕ್ಷಣಾ ತಂಡದಲ್ಲಿ 14 ಸಿಬ್ಬಂದಿ

ರಾಷ್ಟ್ರಪತಿಯವರ ಉಟ, ಉಪಾಹಾರದ ಪರೀಕ್ಷೆಗೆ ಇಬ್ಬರು, ಅಗ್ನಿ ಸುರಕ್ಷತೆಗೆ ಮೂವರು, ವಾಹನಗಳ ಇಂಧನ ಪರಿಶೀಲನೆಗೆ ಇಬ್ಬರು, ವಿಧ್ವಂಸಕ ಕೃತ್ಯ ನಿಯಂತ್ರಣಕ್ಕೆ ಮೂವರು, ವಿಮಾನ ನಿಲ್ದಾಣ ಮತ್ತು ಪ್ರವಾಸಿ ಮಂದಿರದ ಪರಿಶೀಲನೆಗೆ ಇಬ್ಬರು, ಮಾರ್ಗ ತಪಾಸಣೆಗೆ ಇಬ್ಬರು ಸೇರಿ ಒಟ್ಟು 14 ತಜ್ಞ ಸಿಬ್ಬಂದಿ ವಿಶೇಷ ರಕ್ಷಣಾ ಪಡೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಶೆಟ್ಟರ್‌ ಬೆಂಬಲಿಗರ ಅಸಮಾಧಾನ

ಪೌರ ಸನ್ಮಾನ ಕಾರ್ಯಕ್ರಮದ ವೇದಿಕೆ ಮೇಲೆ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್‌ ಅವರಿಗೆ ಆಸನದ ವ್ಯವಸ್ಥೆ ಕಲ್ಪಿಸದಿರುವುದು, ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜತೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಜವಳಿ ಹಾಗೂ ಕೈಮಗ್ಗ ಅಭಿವೃದ್ಧಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹಾಗೂ ಮೇಯರ್ ಈರೇಶ ಅಂಚಟಗೇರಿ ಅವರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ಸಾಲಿನ ಆಸನದಲ್ಲಿ ರಾಷ್ಟ್ರಪತಿ ಭವನದ ಮೂವರು, ರಾಜ್ಯಭವನದ ಒಬ್ಬ ಅಧಿಕಾರಿ ಇರಲಿದ್ದಾರೆ.

‘ಜಗದೀಶ ಶೆಟ್ಟರ್ ಅವರು ಕಾರ್ಯಕ್ರಮ ನಡೆಯುವ ಕ್ಷೇತ್ರದ ಶಾಸಕರಾಗಿದ್ದಾರೆ. ಅವರಿಗೇ ವೇದಿಕೆ ಮೇಲೆ ಅವಕಾಶ ಇಲ್ಲವೆಂದರೆ ಹೇಗೆ? ಕಾಣದ ಕೈಗಳು ಉದ್ದೇಶಪೂರ್ವಕವಾಗಿ ಅವರು ವೇದಿಕೆ ಮೇಲೆ ಬರುವುದನ್ನು ತಪ್ಪಿಸಿವೆ’ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಈರೇಶ ಅಂಚಟಗೇರಿ, ‘ವೇದಿಕೆ ಮೇಲೆ ಯಾರ‍್ಯಾರು ಇರಬೇಕೆನ್ನುವುದು ರಾಷ್ಟ್ರಪತಿ ಭವನದ ನಿರ್ಧಾರ. ಇನ್ನಷ್ಟು ಹೆಸರು ಸೇರಿಸುವಂತೆಜಿಲ್ಲಾಡಳಿತದಿಂದ ವಿನಂತಿಸಿಕೊಂಡಿದ್ದೇವೆ’ ಎಂದರು.

‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ’

ಹುಬ್ಬಳ್ಳಿ: ‘ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮೇಯರ್‌ ಈರೇಶ ಅಂಚಟಗೇರಿ ರಾಷ್ಟ್ರಪತಿ ಪೌರ ಸನ್ಮಾನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದು ಪಾಲಿಕೆ ಕಾರ್ಯಕ್ರಮದ ಬದಲು ಬಿಜೆಪಿ ಕಾರ್ಯಕ್ರಮವಾಗುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್‌ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ ಹೇಳಿದರು.

ಭಾನುವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಿದ್ಧತೆಗೆ ಸಂಬಂಧಿಸಿದಂತೆ ಮೇಯರ್‌ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ. ಪಾಲಿಕೆಯಿಂದ ಅಳವಡಿಸಿರುವ ಬ್ಯಾನರ್‌ಗಳಲ್ಲಿಯೂ ಬಿಜೆಪಿ ಮುಖಂಡರ ಭಾವಚಿತ್ರಗಳಷ್ಟೇ ಇವೆ. ರಾಷ್ಟ್ರಪತಿ ಜತೆ ಪಾಲಿಕೆ ಸದಸ್ಯರು ಗ್ರೂಪ್‌ ಫೋಟೊ ತೆಗೆಸಿಕೊಳ್ಳಲು, ಸನ್ಮಾನದ ವೇಳೆ ನನಗೆ ವೇದಿಕೆ ಮೇಲೆ ಅವಕಾಶ ನೀಡುವುದಾಗಿ ತಿಳಿಸಿದ್ದರು. ಈಗ ಅವೆರಡನ್ನು ರದ್ದು ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ 34 ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದು ತಿಳಿಸಿದರು.

‘ಪೌರ ಸನ್ಮಾನದ ಹೆಸರಲ್ಲಿ ದುಂದು ವೆಚ್ಚ ಮಾಡಲಾಗುತ್ತಿದೆ. ಪೆಂಡಾಲ್‌ ಹಾಕಿದ ಮೇಲೆ ಟೆಂಡರ್‌ ಕರೆಯಲಾಗಿದ್ದು, ಅವ್ಯವಹಾರ ನಡೆದಿದೆ. ಮೇಯರ್‌ ಪ್ರತಿಯೊಂದರಲ್ಲೂ ಕಮಿಷನ್‌ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯರಾದ ಆರೀಫ್‌ ಭದ್ರಾಪುರ,ಇಲಿಯಾಸ್ ಮುನಿಯಾರ್, ಇಮ್ರಾನ್ ಎಲಿಗಾರ, ಸಂದಿಲ್ ಕುಮಾರ, ಪ್ರಕಾಶ ಬುರಬುರೆ, ಅಲ್ತಾಫ್‌ ಹಳ್ಳುರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT