ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳಿಂದ ದೇಶ ಸುಧಾರಣೆ ಸಾಧ್ಯವಿಲ್ಲ: ಬಸವರಾಜ ಹೊರಟ್ಟಿ

Last Updated 4 ಡಿಸೆಂಬರ್ 2020, 15:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜಕಾರಣಿಗಳಿಂದ ದೇಶ ಸುಧಾರಣೆ ಆಗುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಪ್ಪನ್ನು ತಪ್ಪೆಂದು ಬರೆಯಿರಿ. ಪತ್ರಕರ್ತರು ಮನಸ್ಸು ಮಾಡಿದರೆ ರಾಜಕಾರಣ, ಪ್ರಜಾಪ್ರಭುತ್ವದಲ್ಲಿ ಸುಧಾರಣೆ ತರಬಹುದು. ನೀವು ಕೊಳೆ ತೊಳೆಯುತ್ತೀರಿ. ನಾವು ಕೊಳೆ ಹೆಚ್ಚು ಮಾಡುತ್ತೇವೆ ಎಂದು ವಿಮರ್ಶಿಸಿದರು.

ದೇವರಾಜ ಅರಸು ಅಂತಹ ನಾಯಕರು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದರು. ಈಗಿನವರು ಕ್ಷೇತ್ರ ಬಿಟ್ಟು ಹೊರಗೆ ಬರುವುದಿಲ್ಲ. ಅಭಿವೃದ್ಧಿ ವಿಷಯದಲ್ಲಿ ಬಹಳ ಹಿಂದೆ ಬಿದ್ದಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಕೋವಿಡ್‌–19 ಕಾಲದಲ್ಲಿಯೂ ಮಾಧ್ಯಮದ ಮೇಲೆ ಜನರಿಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾರ್ಯ ನಿರ್ವಹಿಸಿದ್ದೇವೆ.ಕೋವಿಡ್‌ನಿಂತ ಮೃತರಾದ 21 ಮಂದಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಲಾಗಿದೆ. ಈ ಸಂದರ್ಭದಲ್ಲಿ ಪತ್ರಕರ್ತರ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ‘ನಮ್ಮ ತಂದೆ ಬಸನಗೌಡ ಪಾಟೀಲ ಮುನೇನಕೊಪ್ಪ ಅವರ ಹೆಸರಿನಲ್ಲಿ ಸಂಘಕ್ಕೆ ₹1 ಲಕ್ಷ ದತ್ತಿ ನೀಡುತ್ತೇನೆ’ ಎಂದು ಘೋಷಿಸಿದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಪತ್ರಿಕಾ ಕ್ಷೇತ್ರ ಈಗ ಮೊದಲಿನ ಹಾಗೆ ಇಲ್ಲ. ಬರವಣಿಗೆಯಿಂದ ಹಿಡಿದು ತಂತ್ರಜ್ಞಾನದವರೆಗೆ ಎಲ್ಲವೂ ಬದಲಾಗಿವೆ. ಪತ್ರಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಜಿಲ್ಲಾ ಘಟಕದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜು ವಿಜಾಪುರ, ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ, ಶಶಿಧರ ಸಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT