ಹುಬ್ಬಳ್ಳಿ: ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ 21 ಜೋಡಿ ಪುನಃ ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ನ್ಯಾಯಾಧೀಶರ ಹಾಗೂ ವಕೀಲರ ಸಮ್ಮುಖದಲ್ಲಿ ಮತ್ತೊಮ್ಮೆ ಹೊಸ ಜೀವನಕ್ಕೆ ನಾಂದಿ ಹಾಡಿದರು.
ವರದಕ್ಷಿಣೆ ಕಿರುಕುಳ, ಮಕ್ಕಳು ಆಗದಿರುವುದು, ಅತ್ತೆ-ಮಾವ ಕಿರಿಕಿರಿ, ಪ್ರತಿಷ್ಠೆ, ಅನುಮಾನ ಹೀಗೆ ಅನೇಕ ವಿಷಯಗಳಿಗೆ ಪತಿ– ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸಕಾರಾತ್ಮಕ ಚಿಂತನೆಯೊಂದಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್ ಕೆಲವು ದಂಪತಿಗೆ ವರವಾಯಿತು.
ಪ್ರಧಾನ ನ್ಯಾಯಾಲಯ 11 ಜೋಡಿಗೆ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ 10 ಜೋಡಿಗೆ ದಾಂಪತ್ಯ ಜೀವನಕ್ಕೆ ಅನುವು ಮಾಡಿಕೊಟ್ಟಿತು. ಜೀವನಾಂಶ ವಸೂಲಾತಿ ಸೇರಿ 55 ಪ್ರಕರಣಗಳನ್ನು ಸಹ ರಾಜೀ ಸಂಧಾನದೊಂದಿಗೆ ಅಂತ್ಯಗೊಳಿಸಲಾಗಿದೆ. 4-5 ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಒಟ್ಟು 76 ಪ್ರಕರಣಗಳನ್ನು ರಾಜೀ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿರುವುದು ವಿಶೇಷ.
‘ಸಿದ್ಧಾರೂಢ ಮಠದ ದರ್ಶನಕ್ಕೆ ಬಂದಾಗ ಹುಡುಗ-ಹುಡುಗಿ ಪರಸ್ಪರ ಪರಿಚಯವಾಗಿ ಪ್ರೇಮಾಂಕುರವಾಗಿ ವಿವಾಹವಾಗಿದ್ದರು. ಒಂದು ವರ್ಷ ಸಂತೋಷದಿಂದ ಸಂಸಾರ ನಡೆಸಿ ಮಗು ಕೂಡಾ ಆಗಿತ್ತು. ನಂತರ ಸಣ್ಣ-ಪುಟ್ಟ ಸಮಸ್ಯೆಯಿಂದ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಮಗುವಿನ ಭವಿಷ್ಯಕ್ಕಾಗಿ ಇಬ್ಬರೂ ಒಂದಾಗಿ ಸುಖ ಸಂಸಾರ ನಡೆಸುವಂತೆ ಬುದ್ದಿ ಹೇಳಲಾಯಿತು. ಈಗ ಇಬ್ಬರು ಒಂದಾಗಿದ್ದಾರೆ’ ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಅರಿ ಹೇಳಿದರು.
‘ಸಣ್ಣ-ಪುಟ್ಟ ಭಿನ್ನಾಭಿಪ್ರಾಯಕ್ಕೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುತ್ತಾರೆ. ಕೌಟುಂಬಿಕ ನ್ಯಾಯಾಲಯ ಗಂಭೀರವಾಗಿ ಪರಿಗಣಿಸುವ ಜತೆಗೆ ಸೂಕ್ಷ್ಮವಾಗಿ ಗಮನಿಸಿ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಯೊಂದಿಗೆ ಪ್ರಕರಣ ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ ಪತಿ-ಪತ್ನಿ ಇಬ್ಬರಿಗೂ ಆರ್ಥಿಕ ಸ್ವಾಲಂಬನೆ ಬಂದಿರುವುದರಿಂದ, ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನಕ್ಕೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಆರ್ಥಿಕ ಸ್ವಾವಲಂಬನೆ ದುರ್ಬಳಕೆಯಾಗದೆ, ನೆಮ್ಮದಿಯ ಜೀವನಕ್ಕೆ ಕಾರಣವಾಗಬೇಕು’ ಎಂದರು.
ವಕೀಲ ಎಸ್.ವಿ. ಕೊಪ್ಪರ ಮಾತನಾಡಿ, ‘ಬದುಕನ್ನು ನೆಮ್ಮದಿಯಿಂದ ಕಳೆಯಬೇಕು. ಪೀಳಿಗೆ ಬದಲಾದಂತೆ ಮನಸ್ಥಿತಿಯೂ ಬದಲಾಗುತ್ತಿದೆ. ಮಕ್ಕಳಿಗೆ ಸಂಸ್ಕಾರ ನೀಡಿದರೆ ಸುಖ ಸಂಸಾರ ನಡೆಸುತ್ತಾರೆ. ಇದರಲ್ಲಿ ಹೆತ್ತವರ ಪಾತ್ರ ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಬಾಣದ, ಸಂಧಾನಕಾರ ಸಿ.ಎಸ್. ಸಜ್ಜನಶೆಟ್ಟರ, ವಕೀಲರಾದ ಮಹೇಶ ಹಿರೇಮಠ, ಕೆ. ಶೋಭಾ, ಎಸ್.ಐ. ಕೋರಿ ಇದ್ದರು.
ಶೇ 90ರಷ್ಟು ದಂಪತಿ ವಿಚ್ಛೇದನಕ್ಕೆ ಅರ್ಜಿ’
‘ಪ್ರೀತಿಸಿ ಮದುವೆಯಾದ ಶೇ 90ರಷ್ಟು ದಂಪತಿ ವಿಚ್ಛೇದನ ನೀಡುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನ ವಿದ್ಯಾರ್ಜನೆಗಾಗಿ ಮೀಸಲಿರಬೇಕು. ಅದಕ್ಕೆ ಹೆಚ್ಚು ಆದ್ಯತೆ ನೀಡಿದರೆ ಉಜ್ವಲ ಭವಿಷ್ಯ ಕಂಡುಕೊಳ್ಳಬಹುದು. ಆಗ ಬಯಸಿದ್ದೆಲ್ಲವೂ ತಾನಾಗಿಯೇ ಒಲಿದು ಬರುತ್ತದೆ’ ಎಂದು ನ್ಯಾಯಾಧೀಶ ರವೀಂದ್ರ ಅರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.