ಸೋಮವಾರ, ಮಾರ್ಚ್ 30, 2020
19 °C

ಶೀಘ್ರ ಕಿಮ್ಸ್‌ನಲ್ಲಿ ಕೊರೊನಾ ಪತ್ತೆ ಪರೀಕ್ಷಾ ಕೇಂದ್ರ ಆರಂಭ: ಜಗದೀಶ್ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯ ಸರ್ಕಾರ ಕೊರೊನಾ ತುರ್ತು ಪರಿಸ್ಥಿತಿಯನ್ನು ಎದುರಿಸಿಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಧಾರವಾಡ ಜಿಲ್ಲೆಯಲ್ಲಿ ಕೋವಿಡ್-19 ಚಿಕಿತ್ಸೆಗೆ ಸಂಬಂದಿಸಿದಂತೆ ಸರ್ಕಾರದಿಂದ ಎಲ್ಲಾ ಅಗತ್ಯ ನೆರವನ್ನು ನೀಡಲಾಗುವುದು. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಶೀಘ್ರವಾಗಿ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಕೊರೊನಾ ಪರೀಕ್ಷಾ ಕೇಂದ್ರವನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜಿನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಸರ್ಕಿಟ್ ಹೌಸ್‍ನಲ್ಲಿ ಕೋವಿಡ್-19 ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಲುವಾಗಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಫೀವರ್ ಕ್ಲಿನಿಕ್, ಸೂಪ್ರವೈಸಡ್ ಕ್ವಾರೆಂಟೈನ್ ಸೆಂಟರ್ ಹಾಗೂ ಕೋವಿಡ್ ಆಸ್ಪತ್ರೆಗಳನ್ನು ಅಗತ್ಯ ಇರುವ ಎಲ್ಲಾ ಉಪಕರಣಗಳೊಂದಿಗೆ ಸನ್ನದ್ಧವಾಗಿರಿಸಿ. ವೈದ್ಯಕೀಯ ಹಾಗೂ ಪೊಲೀಸ್ ಇಲಾಖೆಯ ಪಾತ್ರ ದೊಡ್ಡದಿದೆ. ಪ್ರಧಾನ ಮಂತ್ರಿಗಳು 21 ದಿನ ದೇಶಾದ್ಯಂತ ಸಂಪೂರ್ಣ ಬಂದ್ ಕರೆ ನೀಡಿ, ಸಾರ್ವಜನಿಕರು ಮನೆಯಲ್ಲೇ ಇರುವಂತೆ ಮನವಿ ಮಾಡಿದ್ದಾರೆ. ಜನರಿಗೆ ಅಗತ್ಯವಾದ ದಿನಸಿ ಹಾಗೂ ತರಕಾರಿಗಳು ಸುಲಭವಾಗಿ ಸಿಗುವಂತೆ ಜಿಲ್ಲಾಡಳತ ಕ್ರಮ ಕೈಗೊಳ್ಳಬೇಕು. ವರ್ತಕರು ಹಾಗೂ ತರಕಾರಿ ಮಾರುವ ಸಂಘಗಳೊಂದಿಗೆ ಮಾತನಾಡಿ, ನಗರದ ಏರಿಯಾಗಳಿಗೆ ತೆರಳಿ ಮಾರಾಟ ಮಾಡುವಂತೆ ಮನ ಒಲಿಸಿ. ಜನರ ಮನೆ ಬಾಗಿಲಿಗೆ ತರಕಾರಿ ಹಾಗೂ ದಿನಸಿಗಳು ಲಭ್ಯವಾದರೆ, ಜನರು ಅನಗತ್ಯವಾಗಿ ಮನೆಯಿಂದ ಹೊರ ಬರುವುದು ತಪ್ಪುತ್ತದೆ. ಸರ್ಕಾರಿದಂದ ಎರಡು ತಿಂಗಳ ಪಡಿತರವನ್ನು ವಿತರಿಸಲು ನಿರ್ದೇಶನ ನೀಡಲಾಗಿದೆ. ಎರಡು ತಿಂಗಳ ವೃದ್ಯಾಪ್ಯ ಸೇರಿದಂತೆ ಇತರೆ ಮಾಶಾಸನಗಳನ್ನು ಸಹ ಪಲಾನುಭವಿಗಳಿಗೆ ನೀಡಲಾಗುವುದು ಎಂದು ಹೇಳಿದರು.

ವಿದೇಶದಿಂದ ಬಂದ 378 ಜನರ ಮೇಲೆ ನಿಗಾ ಇರಿಸಿ ಅವರನ್ನು ಹೊಮ್ ಕ್ವಾರಂಟೇನ್ ಮಾಡಲಾಗಿದೆ. ಇದರಲ್ಲಿ 133 ಜನ 14 ದಿನಗಳ ಪ್ರತ್ಯೇಕವಾಸವನ್ನು ಪೂರ್ಣಗೊಳಿಸಿದ್ದಾರೆ. ಇನ್ನೂ 14 ದಿನಗಳ ಕಾಲ ಪ್ರತ್ಯೇಕವಾಸವನ್ನು ಪೂರ್ಣಗೊಳಿಸಬೇಕಿದೆ. ಪ್ರತಿದಿನ ಕರೆ ಮಾಡಿ ಕ್ವಾರೆಂಟೇನ್ ಅದವರ ಆರೋಗ್ಯದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲಾಗುತ್ತಿದೆ. ನಿಯಮಾನುಸಾರ ಒಟ್ಟು 10 ಜನರಿಂದ ಕಫ ಮಾದರಿಯನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ 8 ವರದಿಗಳು ನೆಗೆಟಿವ್ ಬಂದಿವೆ ಎಂದು ನುಡಿದರು.

ಧಾರವಾಡ ಹೊಸೆಲ್ಲಾಪುರದ ನಿವಾಸಿಯ ವರದಿ ಪಾಸಿಟಿವ್ ಬಂದಿದೆ. ಒಂದು ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಪಾಸಿಟಿವ್ ಇರುವ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬಂದಿರುವುದಿಲ್ಲ. ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಒಟ್ಟು 14 ಫೀವರ್ ಕ್ಲಿನಿಕ್, 11 ಸೂಪ್ರವೈಸಡ್ ಕ್ವಾರೆಂಟೈನ್ ಸೆಂಟರ್ ಹಾಗೂ ಕಿಮ್ಸ್ ನಲ್ಲಿ ಕೊವಿಡ್ -19 ಆಸ್ಪತ್ರೆಯನ್ನು ತರೆಯಲಾಗಿದೆ. ಕಿಮ್ಸ್‍ನ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. 35 ವೆಂಟಿಲೇಟರ್‍ಗಳು ಇವೆ. ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 80 ವೆಂಟಿಲೇಟರ್‍ಗಳು ಲಭ್ಯವಿದ್ದು, ಅಗತ್ಯ ಬಿದ್ದರೆ ಅವುಗಳನ್ನು ಸಹ ಪಡೆದು ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಶಾಸಕರುಗಳಾದ ಅರವಿಂದ ಬೆಲ್ಲದ್, ಸಿ.ಎಂ.ನಿಂಬಣ್ಣವರ್, ಕುಸಮಾವತಿ ಶಿವಳ್ಳಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್, ಜಿ.ಪಂ. ಸಿಇಒ ಡಾ.ಬಿ.ಸಿ.ಸತೀಶ್, ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಉಪವಿಭಾಗಧಿಕಾರಿ ಮಹಮದ್ ಜುಬೇರ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂತರಟಾನಿ, ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನ್ ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು