ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಕೋವಿಡ್ ನಿಯಂತ್ರಣ: ಜನರು ಸಹಕರಿಸಿ

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಕರೆ
Last Updated 27 ಜನವರಿ 2022, 6:20 IST
ಅಕ್ಷರ ಗಾತ್ರ

ಧಾರವಾಡ: ‘ಎರಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ವಹಿಸಿವೆ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಇಲ್ಲಿನ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತವು ಬುಧವಾರ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಜಗತ್ತಿನಲ್ಲಿಯೇ ಬೃಹತ್ ಪ್ರಮಾಣದ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲೆಯಲ್ಲೂ ಕೋವಿಡ್ ಲಸಿಕಾಕರಣ ಉತ್ತಮವಾಗಿ ನಡೆಯುತ್ತಿದ್ದು, ಮೊದಲ ಹಾಗೂ ಎರಡನೇ ಡೋಸ್ ಜತೆಗೆ 10 ಸಾವಿರ ಜನರಿಗೆ ಮುನ್ನೆಚ್ಚರಿಕೆಯ ಡೋಸ್‌ ಕೂಡಾ ನೀಡಲಾಗಿದೆ. ಕೋವಿಡ್ ತಡೆಯಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಪ್ರತಿಯೊಬ್ಬರೂ ಲಸಿಕೆ ಪಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದರು.

‘ಕಳೆದ ವರ್ಷದ ಸುರಿದ ಭಾರಿ ಮಳೆಯಿಂದ ಹಾಳಾದ ಬೆಳೆಗಳ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ, ₹96 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಹಾನಿಯಾದ ಮನೆಗಳಿಗೂ ಸರ್ಕಾರ ಪರಿಹಾರ ಪಾವತಿಸುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಪ್ರೋತ್ಸಾಹಧನ ಪಡೆದಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ತಕ್ಷಣರೈತ ವಿದ್ಯಾನಿಧಿ ಕಾರ್ಯಕ್ರಮ ಜಾರಿಗೊಳಿಸಿ, ರೈತರ ಮಕ್ಕಳಿಗೆ ಶಿಷ್ಯವೇತನ ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದರು.

‘ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮದಡಿ ತಾಲ್ಲೂಕಿನ ಮಾದನಭಾವಿಯಲ್ಲಿ 10 ಎಕರೆ ಪ್ರದೇಶದಲ್ಲಿ ಗೋಶಾಲೆ ಸ್ಥಾಪಿಸಲು ₹36 ಲಕ್ಷ ಅನುದಾನ ಬಿಡುಗಡೆಯಾಗಿದೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಶಿಕ್ಷಣ ಮತ್ತು ತರಬೇತಿಗೆ ಕ್ರಮ ವಹಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ, ಮನೆಮನೆಗೆ ನೀರು ಯೋಜನೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

‘ಭಾರತ ಉತ್ತಮ ಆದರ್ಶ, ಮೌಲ್ಯಗಳನ್ನು ಹೊಂದಿರುವ ರಾಷ್ಟ್ರ. ಡಾ. ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯ ಸಂವಿಧಾನ ಕರಡು ಸಮಿತಿ 2 ವರ್ಷ 11 ತಿಂಗಳು ಹಾಗೂ 17 ದಿನಗಳು ನಿರಂತರ ಶ್ರಮ ವಹಿಸಿ ಸಂವಿಧಾನದ ಪ್ರಾಥಮಿಕ ಕರಡು ಪ್ರತಿ ಸಿದ್ಧಪಡಿಸಿತು. 114 ದಿನಗಳು ಸುದೀರ್ಘ ಚರ್ಚೆ ನಡೆಸಿ, ಅಂತಿಮವಾಗಿ 1950ರ ಜ. 26ರಂದು ಸಂವಿಧಾನ ಜಾರಿಗೆ ಬಂತು. 73 ವರ್ಷಗಳ ಹಿಂದೆ ನಡೆದ ಆ ಸುದಿನವನ್ನು ಇಂದು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ’ ಎಂದು ವಿವರಿಸಿದರು.

ನಂತರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್‌ಸ್ಟೆಕ್ಟರ್ ಬಿ.ಆರ್.ಚನ್ನಮ್ಮ ಅವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ಗೃಹರಕ್ಷಕ ದಳ,ಅಬಕಾರಿ, ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆಗಳ ತಂಡಗಳು ಭಾಗವಹಿಸದ್ದವು. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪರೇಡ್ ಆಜ್ಞೆಗಳನ್ನು ನೀಡಲಾಯಿತು. ಸ್ಟಿಕ್ ಮೇಜರ್ ಐ.ಪಿ. ಡಿಸೋಜಾ ನೇತೃತ್ವದ ಪೊಲೀಸ್ ವಾದ್ಯವೃಂದ ಸುಶ್ರಾವ್ಯ ಹಾಡಿನ ಮೂಲಕ ಗಮನ ಸೆಳೆಯಿತು.

ಶಾಸಕ ಅಮೃತ ದೇಸಾಯಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ.

ಸಮಾರಂಭಕ್ಕೂ ಮೊದಲುಕಾರ್ಗಿಲ್ ಸ್ತೂಪ, ಡೆಪ್ಯುಟಿ ಚೆನ್ನಬಸಪ್ಪ ಹಾಗೂ ಕೆ.ಜಿ.ಕುಂದಣಗಾರ ಅವರ ಪ್ರತಿಮೆಗಳಿಗೆ ಸಚಿವರು ಗೌರವ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT