ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

270ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌

Last Updated 15 ಜನವರಿ 2022, 16:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ 270ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ.

ಕೋವಿಡ್‌ ನಿರ್ವಹಣೆಯಲ್ಲಿ ಪೊಲೀಸರು ಮುಂಚೂಣಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ ನಿಯಮ ಉಲ್ಲಂಘಿಸಿದವರಿಗೆ ದಂಡ ಸೇರಿದಂತೆ, ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂವಿನ ವೇಳೆಯಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನ ಸವಾರರನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸದಾ ಜನರೊಟ್ಟಿಗೆ ಅವರು ಕರ್ತವ್ಯ ನಿರ್ವಹಿಸಬೇಕಾಗಿರುವುದರಿಂದ ಅವರಲ್ಲೂ ಕೊರೊನಾ ಸೋಂಕು ಕಂಡು ಬರುತ್ತಿದೆ.

ಕಮಿಷನರೇಟ್‌ನ ಉತ್ತರ ವಿಭಾಗದಲ್ಲಿ 71, ದಕ್ಷಿಣ ವಿಭಾಗದಲ್ಲಿ 67, ಧಾರವಾಡ ವಿಭಾಗದಲ್ಲಿ 34, ಸಂಚಾರ ಹಾಗೂ ವಿಶೇಷ ವಿಭಾಗದಲ್ಲಿ 72ರಷ್ಟು ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಸೋಂಕು ತಗುಲಿದ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್‌ ಕಮಿಷನರ್‌ ಲಾಭೂರಾಮ್‌, ‘ಕಮಿಷನರೇಟ್‌ನ ಅನೇಕ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದ್ದು, ಕಿಮ್ಸ್‌ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಣ ರಹಿತ ಸೋಂಕಿತರ ಸಂಖ್ಯೆಯೇ ಹೆಚ್ಚಿದೆ’ ಎಂದರು.

‘ಸೋಂಕಿತ ಸಿಬ್ಬಂದಿಗೆ ಇಲಾಖೆಯಿಂದ ಧೈರ್ಯ ತುಂಬುವ ಕಾರ್ಯ ನಡೆಯುತ್ತಿದೆ. ವಿಭಾಗಾವಾರು ಅವರ ಜೊತೆ ಮಾತನಾಡಿ, ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಿದ್ದೇನೆ. ಅಗತ್ಯವಿದ್ದರೆ, ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಸಹ ಮಾಡಿಕೊಳ್ಳಲಾಗಿದೆ. ಠಾಣೆಯಲ್ಲಿ ಉಳಿದ ಸಿಬ್ಬಂದಿಗೂ ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಿಲು ಸೂಚಿಸಿದ್ದೇನೆ’ ಎಂದರು.

‘ಜಿಲ್ಲಾ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ’ ಎಂದು ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT