ಕೋವಿಡ್: ಕೆಲಸಕ್ಕೆ ಕಾರ್ಮಿಕರ ಹಿಂದೇಟು

ಹುಬ್ಬಳ್ಳಿ: ಕೊರೊನಾ ಸೋಂಕಿನ ಭೀತಿಯ ಕಾರಣದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ
ಕೆಲಸ ಮಾಡಲು ಹೊರರಾಜ್ಯಗಳ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಗುವ ಮೊದಲಿನಿಂದಲೂ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಲಾಕ್ಡೌನ್ ಬಳಿಕವೂ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿದ್ದಾರೆ.
ಆದರೆ, ಇತ್ತೀಚಿನ ಕೆಲ ದಿನಗಳಿಂದ ಅವರಲ್ಲಿ ಬಹಳಷ್ಟು ಕಾರ್ಮಿಕರು ಕೆಲಸಕ್ಕೆ ಬಾರದೆ ಟೆಂಟ್ನಲ್ಲಿ ಉಳಿದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿತ್ಯ ನೂರಾರು ವರದಿಯಾಗುತ್ತಿವೆ. ಹೋದ ವಾರ ಸಾವಿರದ ಲೆಕ್ಕದಲ್ಲಿ ಸೋಂಕಿತರು ಪತ್ತೆಯಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿತ್ತು. ಆದ್ದರಿಂದ ಸೋಂಕು ತಗುಲಿದರೆ ಸರಿಯಾಗಿ ಚಿಕಿತ್ಸೆಯೂ ಸಿಗುವುದಿಲ್ಲ ಎನ್ನುವ ಆತಂಕದಿಂದ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಟೆಂಟ್ ಹಾಕಿಕೊಂಡಿದ್ದರೂ, ಕೆಲಸಕ್ಕೆ ಬರುತ್ತಿಲ್ಲ. ಸದ್ಯಕ್ಕೆ ತೋಳನಕರೆ, ಮೀನು ಮಾರುಕಟ್ಟೆ, ಎಂ.ಜಿ. ಮಾರುಕಟ್ಟೆಯಲ್ಲಿ ಕಾಮಗಾರಿ ನಡೆಯುತ್ತಿದೆ.
ಜಿಲ್ಲೆಯ ಸುತ್ತಮುತ್ತಲಿನ ಊರುಗಳ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕಾರ್ಮಿಕರು ಕೂಡ ಸ್ಮಾರ್ಟ್ ಸಿಟಿ
ಕೆಲಸಕ್ಕೆ ಬರುತ್ತಿದ್ದರು. ಈಗ ಬಸ್ ವ್ಯವಸ್ಥೆ ಇಲ್ಲದ ಕಾರಣ ಆ ಕಾರ್ಮಿಕರು ಬರುತ್ತಿಲ್ಲ. ಗುತ್ತಿಗೆದಾರರಿಗೆ ಕಾಮಗಾರಿಗೆ ಬೇಕಾದ ಕಬ್ಬಿಣದ ಸಾಮಗ್ರಿಗಳು ಹಾಗೂ ಕಾರ್ಮಿಕರನ್ನು ಹೊಂದಿಸುವುದೇ ಬಹುದೊಡ್ಡ ಸವಾಲಾಗಿದೆ.
ಈ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ತೋಳನಕರೆ ಕಾಮಗಾರಿಯ ಗುತ್ತಿಗೆದಾರ ಜಿ. ನಾಗೇಂದ್ರ ‘ಲಾಕ್ಡೌನ್ಗೂ ಮೊದಲು 50 ಜನ ಕಾರ್ಮಿಕರಿದ್ದರು. ಈಗ 12 ಜನ ಮಾತ್ರ ಹೊರರಾಜ್ಯಗಳ ಕಾರ್ಮಿಕರಿದ್ದು, ಸೋಂಕಿನ ಭೀತಿಯ ಕಾರಣ ಅವರೂ ಕೆಲಸ ಮಾಡುತ್ತಿಲ್ಲ. ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಆರೋಗ್ಯ ತಪಾಸಣೆ ಮಾಡಿಸಿ ವಿಮೆ ಮಾಡಿಸಿದ್ದೇವೆ. ಆದರೂ ಕೆಲಸಕ್ಕೆ ಬರುತ್ತಿಲ್ಲ’ ಎಂದರು.
ಇನ್ನೊಬ್ಬ ಗುತ್ತಿಗೆದಾರ ಆನಂದ ಪರಶೆಟ್ಟಿ ‘ಲಾಕ್ಡೌನ್ನಿಂದಾಗಿ ಕಾಮಗಾರಿಗೆ ಬೇಕಾದ ಕೆಲ ಸಾಮಗ್ರಿಗಳ ಕೊರತೆ ಕಾಡುತ್ತಿದೆ. ನಿಧಾನವಾಗಿ ಸಾಧ್ಯವಾದಷ್ಟು ದಿನ ಕೆಲಸ ಮುಂದುವರಿಸಲಾಗುವುದು. ತೋಳನಕರೆಯಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿರುವ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಆದರೆ, ಲಾಕ್ಡೌನ್ನಲ್ಲಿಯೂ ಹಲವು ಜನ ವಾಕಿಂಗ್ ಬರುತ್ತಿರುವ ಕಾರಣ ಕಾರ್ಮಿಕರನ್ನು ಸೋಂಕಿನ ಭೀತಿ ಕಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಶೇ 40ರಷ್ಟು ಕಾರ್ಮಿಕರಷ್ಟೇ ಇದ್ದಾರೆ’
ಕೋವಿಡ್ ನಿಯಮ ಪಾಲಿಸಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿ ಅನುಮತಿ ಕೊಟ್ಟಿದ್ದಾರೆ. ಸಾರಿಗೆ ಸಮಸ್ಯೆ ಮತ್ತು ಹೊರ ರಾಜ್ಯಗಳ ಕಾರ್ಮಿಕರು ಸೋಂಕಿನ ಭೀತಿಯಿಂದಾಗಿ ಕೆಲಸಕ್ಕೆ ಬರುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಶೇ 40ರಷ್ಟು ಕಾರ್ಮಿಕರು ಮಾತ್ರ ಇದ್ದಾರೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷಾಧಿಕಾರಿ ಎಸ್.ಎಚ್.ನರೇಗಲ್ ’ಪ್ರಜಾವಾಣಿ‘ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.