ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ ಬಳಕೆ‌ ಪ್ಲಾಸ್ಟಿಕ್ ನಿಷೇಧ: ಜಾಗೃತಿ ಮೂಡಿಸಿ

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ್ ತಿಮ್ಮಯ್ಯ
Last Updated 20 ಜುಲೈ 2022, 9:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶೇ‌ 85ರಷ್ಟು ಪ್ಲಾಸ್ಟಿಕ್ ಮರು ಬಳಕೆ‌ ಆಗುತ್ತಿಲ್ಲ. ಹೀಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ‌ ಅಧ್ಯಕ್ಷ ಶಾಂತ್ ಎ.ತಿಮ್ಮಯ್ಯ ಹೇಳಿದರು.

ನಗರದ ಪಾಲಿಕೆ‌ ಸಭಾಂಗಣದಲ್ಲಿ ಬುಧವಾರ‌ ಪ್ಲಾಸ್ಟಿಕ್ ನಿಷೇಧ ಕುರಿತು ನಡೆದ‌ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಸುಲಭವಾಗಿ ಕೊಳೆಯುವುದಿಲ್ಲ.
ಮಳೆ‌ ನೀರಿನ ಜತೆಗೆ ಪ್ಲಾಸ್ಟಿಕ್‌‌ ಕೊಚ್ಚಿಕೊಂಡು ನದಿ, ಸಮುದ್ರ‌ ಸೇರುತ್ತಿದೆ.‌ ಇದರಿಂದ ಪರಿಸರದ ಮೇಲೆ‌ ದುಷ್ಪರಿಣಾಮ ಉಂಟಾಗುತ್ತಿದೆ ಎಂದರು.

1999 ರಿಂದ 2016 ರವರೆಗೆ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ಕಾನೂನುಗಳು ಬಂದಿವೆ. ಆದರೆ, ಸಂಪೂರ್ಣವಾಗಿ ಬಳಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಈಗ ಜುಲೈ 1ರಿಂದ ದೇಶದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಶ್ರಮಿಸಬೇಕು ಎಂದು ಹೇಳಿದರು.

ಪ್ಲಾಸ್ಟಿಕ್ ನಿಷೇದ ನಿಯಮವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ನೋಡಲ್ ಏಜೆನ್ಸಿಯಾಗಿದೆ. ಪ್ರತಿ ದಿನ‌ ಎಷ್ಟು ದಂಡ ಹಾಕಲಾಗಿದೆ, ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುತ್ತಿದೆ ಎಂದರು.

ಎಲ್ಲರೂ ತಮ್ಮ‌ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಜನಸಾಮಾನ್ಯರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು‌. ಜನಪ್ರತಿನಿಧಿಗಳು ಸಹ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸ್ವಸಹಾಯ ಸಂಘಗಳು, ಎನ್ ಜಿಒಗಳನ್ನು ಸಮರ್ಪಕವಾಗಿ ಒಳಗೊಳ್ಳುವಂತೆ ಮಾಡಬೇಕು. ಮುಂದಿನ ವರ್ಷದ ಒಳಗೆ ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡುವ ಗುರಿ ಸಾಧಿಸಬೇಕು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ,ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಏಕಾಏಕಿ ಜಾರಿಗೊಳಿಸಿಲ್ಲ. ವರ್ತಕರು , ಹೋಟೆಲ್ ಉದ್ಯಮಿಗಳು ಪ್ರಾರಂಭದಲ್ಲಿ ಇದಕ್ಕೆ ಅಪಸ್ವರ ವ್ಯಕ್ತಪಡಿಸಿದಾಗ, ಕಾರ್ಯಾಗಾರ ಹಾಗೂ ಪರ್ಯಾಯ ವಸ್ತುಗಳ ಪ್ರದರ್ಶನ ಮೂಲಕ ಜಾಗೃತಿ ಮೂಡಿಸಲಾಗಿದೆ. ಪಾರ್ಸೆಲ್‌ಗಳಿಗೆ ಮನೆಯಿಂದಲೇ ಸ್ಟೀಲ್ ಡಬ್ಬಗಳನ್ನು ತೆಗೆದುಕೊಂಡು ಬರುವ ಗ್ರಾಹಕರಿಗೆ ಕನಿಷ್ಠ ರಿಯಾಯಿತಿ ನೀಡಿ ಪ್ರೋತ್ಸಾಹಿಸಲು ಕೋರಿದಾಗ, ಕೆಲವು ಹೋಟೆಲ್‌ಗಳು ಅದನ್ನು ಪಾಲಿಸುತ್ತಿವೆ. ಮಂಡಳಿ ನೀಡುವ ನಿರ್ದೇಶನಗಳನ್ನು ಅವಳಿ ನಗರದಲ್ಲಿ ಜಾರಿ ಮಾಡಲಾಗುವುದು ಎಂದರು.

ಮಹಾನಗರಪಾಲಿಕೆ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿ, ನೆರೆಯ ರಾಜ್ಯಗಳಲ್ಲಿ ಉತ್ಪಾದನೆ ಆಗುತ್ತಿರುವ ಪ್ಲಾಸ್ಟಿಕ್ ರಾಜ್ಯವನ್ನು ಪ್ರವೇಶಿಸುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಜರುಗಿಸಬೇಕು ಎಂದರು.

ಮಹಾನಗರಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ಮಾತನಾಡಿ, ಕಳೆದ ಜುಲೈ 1 ರಿಂದ ಅವಳಿನಗರದಲ್ಲಿ 6 ಟನ್ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು 20 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 28 ಟನ್ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು 2019 ರಿಂದಲೇ ನಿಯಮಾವಳಿ ರಚಿಸಿಕೊಂಡು ಕಾರ್ಯೋನ್ಮುಖವಾಗಿದೆ.ಅವಳಿ ನಗರದ ಎಲ್ಲಾ 12 ವಲಯಗಳಲ್ಲಿ ತಂಡಗಳು ನಿರಂತರವಾಗಿ ಗಸ್ತು ಕೈಗೊಂಡು ಪ್ಲಾಸ್ಟಿಕ್ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಹೆಚ್ಚಳ ಹಾಗೂ ಅವುಗಳ ಅಪಾಯದ ಕುರಿತು ಸಭೆಗೆ ಮಾಹಿತಿ ನೀಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಉಪಮೇಯರ್ ಉಮಾ ಮುಕುಂದ್,ವಿರೋಧ ಪಕ್ಷದ ನಾಯಕ ದೊರೈರಾಜು ಮನಗುಂಟ್ಲಾ,
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ್ ಕಡಕ್‌ಬಾವಿ , ಉಪವಿಭಾಗಾಧಿಕಾರಿ ಅಶೋಕ ತೇಲಿ, ಜಿ.ಪಂ ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಪರಿಸರ ಅಧಿಕಾರಿ ಶೋಭಾ ಪೋಳ , ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ ಇದ್ದರು.

ರಾಜ್ಯದಲ್ಲಿ‌ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿದ್ದ 116 ಘಟಕಗಳನ್ನು ಬಂದ್ ಮಾಡಿಸಲಾಗಿದ್ದು, ಕೆಲವು ಕಡೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗೆ ಸಾರ್ವಜನಿಕರು ಕೈಜೋಡಿಸಬೇಕು

-ಶಾಂತತಿಮ್ಮಯ್ಯ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT