ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕ್ಯಾಶ್‌ ಬ್ಯಾಕ್‌ ನೆಪ, ಬ್ಯಾಂಕ್‌ ಉದ್ಯೋಗಿಗೆ ₹3.12 ಲಕ್ಷ ವಂಚನೆ

Last Updated 20 ಆಗಸ್ಟ್ 2022, 4:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕ್ರೆಡಿಟ್‌ ಕಾರ್ಡ್‌ ಕ್ಯಾಶ್‌ ಬ್ಯಾಕ್‌ ಬಂದಿದೆ ಎಂದು ಉಣಕಲ್‌ನ ಬ್ಯಾಂಕ್‌ ಉದ್ಯೋಗಿ ಮಹಾಂತೇಶ ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಬ್ಯಾಂಕ್‌ ಮಾಹಿತಿ ಪಡೆದ ವಂಚಕ, ಆನ್‌ಲೈನ್‌ನಲ್ಲಿ ₹3.12 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.

ಕ್ರೆಡಿಟ್‌ ಕಾರ್ಡ್‌ಗೆ ₹6 ಸಾವಿರ ಕ್ಯಾಶ್‌ ಬ್ಯಾಕ್‌ ಬಂದಿದ್ದು, ಅದನ್ನು ಪಡೆಯಲು ಲಿಂಕ್‌ ಒತ್ತಿ ಮಾಹಿತಿ ಭರ್ತಿ ಮಾಡಬೇಕು ಎಂದು ಮಹಾಂತೇಶ ಅವರ ಮೊಬೈಲ್‌ಗೆ ವಂಚಕ ಲಿಂಕ್‌ ಸಮೇತ ಸಂದೇಶ ಕಳುಹಿಸಿದ್ದ. ಅದನ್ನು ನಂಬಿದ ಅವರು ಆನ್‌ಲೈನ್‌ನಲ್ಲಿ ಈ–ಮೇಲ್‌ ಐಡಿ, ಜನ್ಮ ದಿನಾಂಕ, ಫೋನ್‌ ನಂಬರ್‌, ಕ್ರೆಡಿಟ್‌ ಕಾರ್ಡ್‌ ನಂಬರ್‌ ಮಾಹಿತಿ ಭರ್ತಿ ಮಾಡಿದ್ದಾರೆ. ಅದಾದ ಕೆಲವೇ ಸಮಯದಲ್ಲಿ ವಂಚಕ ಅವರ ಬ್ಯಾಂಕ್‌ ಖಾತೆಯಿಂದ ಏಳು ಬಾರಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಹೆಸರಲ್ಲಿ ನಕಲಿ ಬಸ್‌ಪಾಸ್‌: ವಿದ್ಯಾರ್ಥಿಯ ಹೆಸರಲ್ಲಿ ನಕಲಿ ಬಸ್‌ ಪಾಸ್‌ ಮಾಡಿಕೊಂಡು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಸಂಚರಿಸುತ್ತಿದ್ದ ಪ್ರಜ್ವಲ್‌ ಕೆ. ಎಂಬಾತನ ವಿರುದ್ಧ ಗೋಕುಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಸತೀಶ ಸೋಮನಕಟ್ಟಿಗೆ ನೀಡಿದ್ದ ಬಸ್‌ ಪಾಸ್‌ ಅನ್ನು ಆರೋಪಿ, ನಕಲು ಮಾಡಿ ಅದಕ್ಕೆ ತನ್ನ ಫೋಟೊ ಅಂಟಿಸಿಕೊಂಡು ಬಸ್‌ನಲ್ಲಿ ಸಂಚರಿಸುತ್ತಿದ್ದ. ಬುಧವಾರ ಗೋಕುಲ ಗ್ರಾಮದಲ್ಲಿ ತಪಾಸಣೆ ನಡೆಸಿ, ವಿದ್ಯಾರ್ಥಿ ಬಸ್‌ ಪಾಸ್‌ ಪರಿಶೀಲನೆ ನಡೆಸಿದಾಗ ವಂಚಿಸುತ್ತಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ಸಾರಿಗೆ ಸಂಸ್ಥೆಯ ಗಂಗಾಧರ ಕಮಲದಿನ್ನಿ ತಿಳಿಸಿದ್ದಾರೆ.

ಬಂಧನ; ಚಿನ್ನಾಭರಣ ವಶ: ಇಲ್ಲಿನ ನ್ಯೂ ಆನಂದ ನಗರದಲ್ಲಿನ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಆರೋಪಿಯನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ, ₹1.38 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕಳವು ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ ಆರ್‌.ಎಚ್‌. ಹಳ್ಳೂರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ಕಾರು ಕಳವು: ಪತಿಯ ಹೆಸರಲ್ಲಿ ಇರುವ ₹10 ಲಕ್ಷ ಮೌಲ್ಯದ ಕಾರು ಕಳವು ಮಾಡಿದ್ದಾರೆ ಎಂದು ಹುಬ್ಬಳ್ಳಿ ತಾಲ್ಲೂಕಿನ ಗಂಗಿವಾಳ ಗ್ರಾಮದ ಪುಷ್ಪಾ ಪಟದಾರಿ ಇಬ್ಬರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಲಘಟಗಿ ತಾಲ್ಲೂಕಿನ ಶೀಗಿಗಟ್ಟಿ ಗ್ರಾಮದ ಪ್ರಕಾಶ ಮತ್ತು ರವಿ ಕಾರು ಮತ್ತು ಅದರ ದಾಖಲೆ ಪತ್ರಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT