ಹುಬ್ಬಳ್ಳಿ: ಕೋರಿಯರ್ ಕಳಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಗರದ ಉಣಕಲ್‌ನ ಟೀಚರ್ಸ್ ಕಾಲೊನಿ ನಿವಾಸಿ ಲಿಂಗರಾಜ ಎನ್.ಮುಂದಿನಮನಿ ಅವರಿಗೆ ₹1.99 ಲಕ್ಷ ವಂಚಿಸಿದ್ದಾನೆ.
ಲಿಂಗರಾಜ ಅವರು ತಮಗೆ ಬರಬೇಕಾಗಿದ್ದ ಕೋರಿಯರ್ ಬಾರದಿದ್ಧಾಗ ಗೂಗಲ್‌ನಲ್ಲಿ ಹುಡುಕಿ, ಅದರಲ್ಲಿ ಸಿಕ್ಕ ಸಂಖ್ಯೆಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ‘ನಿಮ್ಮ ವಿಳಾಸ ತಪ್ಪಾಗಿದೆ. ನಾನು ಕಳಿಸುವ ಲಿಂಕ್ ತೆರೆದು ₹5 ಪಾವತಿಸಿದರೆ ಸರಿಪಡಿಸಲಾಗುವುದು’ ಎಂದು ಹೇಳಿದ್ದಾನೆ.
ಲಿಂಗರಾಜ ಅವರು ಹಣ ಪಾವತಿಸಿದ ನಂತರ ಆರೋಪಿ ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.