ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸಚಿವ ಹಾಲಪ್ಪ ಸೂಚನೆ

Last Updated 12 ಆಗಸ್ಟ್ 2022, 5:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ ಕುರಿತು ಶೀಘ್ರದಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಳಿಸಿ, ತಂತ್ರಾಂಶದಲ್ಲಿ ದಾಖಲಿಸಬೇಕು.ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಬೆಳೆ ಹಾನಿ ಕುರಿತು ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 2.73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದ್ದು, ಮಳೆಯಿಂದಾಗಿ 89,148 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಅದರಲ್ಲಿ 61,566 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಮತ್ತು 916 ಹೆಕ್ಟೇರ್ ಪ್ರದೇಶದಲ್ಲಿನ ಉದ್ದು ಹಾನಿಯಾಗಿದೆ’ ಎಂದು ಎಂದರು.

‘ಎನ್‌ಡಿಆರ್‌ಎಫ್‌ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ₹13,600 ಪರಿಹಾರ ಸಿಗಲಿದೆ. ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ರೈತರ ಅಹವಾಲು ಕೇಳಬೇಕು ಮತ್ತು ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಪರಿಹಾರ ನೀಡುವಂತೆ ವಿಮಾ ಕಂಪನಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

72 ಗಂಟೆಯೊಳಗೆ ಅರ್ಜಿ:‘ಸ್ಥಳೀಯ ನೈಸರ್ಗಿಕ ವಿಕೋಪದಡಿ ಪರಿಹಾರಕ್ಕೆ ರೈತರು ಬೆಳೆಹಾನಿಯಾದ 72 ಗಂಟೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಈಗಾಗಲೇ 40 ಸಾವಿರ ಅರ್ಜಿಗಳು ಬಂದಿವೆ. ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ₹80 ಕೋಟಿ ಹೆಚ್ಚು ವಿಮಾ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ಬಗ್ಗೆ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

‘ಜೂನ್‌ನಿಂದ ಈವರೆಗೆ ಮಳೆಯಿಂದಾಗಿ 1,185 ಮನೆಗಳಿಗೆ ಹಾನಿಯಾಗಿದೆ. ಅದಕ್ಕೆ ಎನ್‌ಡಿಆರ್‌ಎಫ್‌ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು. ಜಿಲ್ಲೆಯಲ್ಲಿ 140 ಅಂಗನವಾಡಿ ಕಟ್ಟಡಗಳು, 432 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಅವುಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 38 ಕಿ.ಮೀ ರಾಜ್ಯ ಹೆದ್ದಾರಿ ರಸ್ತೆಗಳು, 356 ಕಿ.ಮೀ ಗ್ರಾಮೀಣ ರಸ್ತೆಗಳು ಮತ್ತು ಪಾಲಿಕೆ ವ್ಯಾಪ್ತಿಯ 165 ಕಿ.ಮೀ ರಸ್ತೆಗಳು ಹಾಳಾಗಿವೆ. ಜಿಲ್ಲೆಯ ರಸ್ತೆಗಳ ಉನ್ನತೀಕರಣಕ್ಕೆ ₹207 ಕೋಟಿ ಬಿಡುಗಡೆ ಆಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಸದ್ಯ ₹3.20 ಕೋಟಿ ಅನುದಾನ ಅಗತ್ಯ ಇದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೇಳಿದ್ದಾರೆ. ಅದನ್ನು ಮಂಜೂರು ಮಾಡಿಸಲು ಕ್ರಮ ವಹಿಸಲಾಗುವುದು’ ಎಂದರು.

2 ಲಕ್ಷ ಧ್ವಜ ವಿತರಣೆ:‘ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು. ಜಿಲ್ಲೆಯಲ್ಲಿ 4 ಲಕ್ಷ ಕುಟುಂಬಗಳಿವೆ. ಪ್ರತಿ ಮನೆಯ ಮೇಲೆ ಧ್ವಜ ಹಾರಿಸಲು ಈಗಾಗಲೇ 2 ಲಕ್ಷ ಕುಟುಂಬಗಳಿಗೆ ರಾಷ್ಟ್ರಧ್ವಜ ವಿತರಿಸಲಾಗಿದೆ’ ಎಂದು ಹೇಳಿದರು.

ಶಿರಗುಪ್ಪಿ ಹತ್ತಿರದ ಬೆಣ್ಣೆ ಹಳ್ಳದಲ್ಲಿ ಸೇರಿಕೊಂಡಿರುವ ಎರಡೂವರೆ ಎಕರೆ ಪ್ರದೇಶವನ್ನು ಅಧಿಕಾರಿಗಳು ಸರ್ವೆ ಮಾಡಬೇಕು. ಸರ್ವೆ ಕಾರ್ಯ ಮುಗಿದ ಬಳಿಕ ಸ್ಮಶಾನ ಭೂಮಿಯನ್ನು ಹಸ್ತಾಂತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಹುಬ್ಬಳ್ಳಿ– ಧಾರವಾಡ ಪೊಲೀಸ್ ಕಮಿಷನರ್‌ ಲಾಭೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಉಪವಿಭಾಗಾಧಿಕಾರಿ ಅಶೋಕ ತೇಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT