ಶುಕ್ರವಾರ, ಜೂನ್ 18, 2021
23 °C

ರೈತರ ಹೆಗಲಿಗೆ ಬೆಳೆ ಸಮೀಕ್ಷೆ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಪ್ರಸಕ್ತ ಸಾಲಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಚಿತ್ರ ಸಹಿತ ‘ಬೆಳೆ ಸಮೀಕ್ಷೆ ಮೊಬೈಲ್ ಆಪ್’ ಮೂಲಕ ಸ್ವಯಂ ದಾಖಲಿಸುವ ವಿನೂತನ ಯೋಜನೆಯನ್ನು ಕೃಷಿ ಇಲಾಖೆ ಪ್ರಾರಂಭಿಸಿದೆ.

ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಸಾಂಖ್ಯಿಕ ಇಲಾಖೆಯ ಜಂಟಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದ್ದು, ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ಆಯಾ ತಾಲ್ಲೂಕು ಆಡಳಿತ ಪರಿಶೀಲಿಸಲಿದೆ.

ದಾಖಲಿಸುವ ವಿಧಾನ: ರೈತರು ತಮ್ಮ ಬಳಿ ಇರಬಹುದಾದ ಸ್ಮಾರ್ಟ್‌ಫೋನ್‌ ಬಳಸಿ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅ‌ನ್ನು ಗೂಗಲ್‌ನ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದಕ್ಕೆ ರೈತರ ಪರವಾಗಿ ಅವರ ಕುಟುಂಬದ ಸದಸ್ಯರು, ಸಂಬಂಧಿಕರ ನೆರವು ಪಡೆಯಬಹುದು.

ಇಲ್ಲವೇ ಮೊಬೈಲ್ ಮಾಹಿತಿ ಹೊಂದಿರುವ ಕಂದಾಯ, ಕೃಷಿ ಇಲಾಖೆ ವತಿಯಿಂದ ನಿಯೋಜನೆಗೊಂಡ, ಮಾಹಿತಿ ತಂತ್ರಜ್ಞಾನದ ತಿಳಿವಳಿಕೆ ಇರುವ ತಮ್ಮದೆ ಗ್ರಾಮದ ಯುವಕರ (ಖಾಸಗಿ ನಿವಾಸಿ-ಪಿ.ಆರ್) ಸಹಾಯ ಪಡೆಯಬಹುದು. ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ತಮ್ಮ ಹಿಸ್ಸಾವಾರು ಜಮೀನುಗಳ ಮಾಹಿತಿ ದಾಖಲಿಸಬಹುದು. ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ದಾಖಲಿಸಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಐ.ಬಿ.ರಾಜಶೇಖರ ತಿಳಿಸಿದರು.

‘ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ದಾಖಲಿಸದೇ ಇದ್ದಲ್ಲಿ ಪ್ರತಿ ಗ್ರಾಮಕ್ಕೆ ನಿಯೋಜನೆಗೊಂಡ ಬೆಳೆ ಸಮೀಕ್ಷಕರು, ಹೊಲಗಳಿಗೆ ಭೇಟಿ ನೀಡಿ ಮೊಬೈಲ್ ಆಪ್ ಬಳಸಿ ಬೆಳೆ ಮಾಹಿತಿ ಸಂಗ್ರಹಿಸಿ ಅಪಲೋಡ್ ಮಾಡಲಿದ್ದಾರೆ. ಇವರಿಗಾಗಿ ಕಾಯುವ ಬದಲು, ರೈತರೇ ತಮ್ಮ ಹೊಲದ ಮಾಹಿತಿಯನ್ನು ಅಪ್‌ಲೋಡ್ ಮಾಡಬಹುದು. ಬೆಳೆಗಳ ವಿವರಗಳನ್ನು ದಾಖಲಿಸಲು ವಿಫಲರಾದರೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ರೈತರಿಗೆ ತಾಂತ್ರಿಕ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚು’ ಎಂದರು.

ಬೆಳೆ ಸಮೀಕ್ಷೆ ಉದ್ದೇಶ: ‘ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹವಾಗುವ ಮಾಹಿತಿಯನ್ನು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ಸಹಾಯಧನ ನೀಡಲು ಬಳಕೆಯಾಗಲಿದೆ. ವರದಿ ತಯಾರಿಸಲು ಬೆಳೆ ವಿಮೆ ಯೋಜನೆಯಡಿ ನೊಂದಾಯಿತ ರೈತರ ತಾಕು ಹಂತದ ಬೆಳೆ ಪರಿಶೀಲಿಸಲು, ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಅರ್ಹ ಫಲಾನುಭವಿಗಳನ್ನು ಗುರುತಿಸಲು ನೆರವಾಗಲಿದೆ. ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲೂ ಈ ದತ್ತಾಂಶ ಬಳಕೆಯಾಗಲಿದೆ’ ಎಂದು ವಿವರಿಸಿದರು.

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ವಿವರಗಳನ್ನು ಆ. 10ರಿಂದ 24ರೊಳಗೆ ದಾಖಲಿಸಬೇಕು. ಮಾಹಿತಿಗೆ ಗ್ರಾಮದ ಖಾಸಗಿ ಸಮೀಕ್ಷೆಗಾರರನ್ನು ಸಂಪರ್ಕಿಸಬಹುದು ಎಂದು ಐ.ಬಿ. ರಾಜಶೇಖರ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.