ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಶಿವಳ್ಳಿ ಸಾಗಿ ಬಂದ ಹಾದಿ...

ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಗಡಿಯಲ್ಲಿ ಬೆಳೆದ ರಾಜಕಾರಣಿ
Last Updated 22 ಡಿಸೆಂಬರ್ 2018, 19:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಕುಂದಗೋಳ ಶಾಸಕ ಸಿ.ಎಸ್‌.ಶಿವಳ್ಳಿ, ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ರಾಜಕಾರಣಿ. ಬಂಗಾರಪ್ಪನವರಂತೆ ಅದ್ಭುತ ವಾಗ್ಮಿ, ಚತುರ ರಾಜಕಾರಣಿ.

ಶಿವಳ್ಳಿ ಅವರು ಮೂಲತಃ ರಾಜಕೀಯ ಮನೆತನದವರಲ್ಲ. ಆದರೆ, ತಮ್ಮ ನೆಚ್ಚಿನ ನಾಯಕ ಬಂಗಾರಪ್ಪನವರ ಸಲಹೆ ಮೇರೆಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಳ್ಳಿ ಇದೀಗ ಪ್ರಥಮ ಬಾರಿಗೆ ಸಚಿವರಾಗಿದ್ದಾರೆ.

ಯರಗುಪ್ಪಿ ಗ್ರಾಮದ ರೈತ ಸತ್ಯಪ್ಪ ಹುಚ್ಚಪ್ಪ ಶಿವಳ್ಳಿ ಅವರ ಹಿರಿಯ ಮಗ ಸಿ.ಎಸ್‌.ಶಿವಳ್ಳಿ. ರಾಜಕೀಯಕ್ಕೆ ಬರುವ ಮುನ್ನಾ ಕುಂದಗೋಳದಲ್ಲಿ ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘ ಕಟ್ಟಿ, ಅದರ ಅಧ್ಯಕ್ಷರಾಗಿದ್ದರು. ತಾಲ್ಲೂಕಿನಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡರು. ಪ್ರತಿ ವರ್ಷ ಬಸವ ಜಯಂತಿಯಂದು ಸಾಮೂಹಿಕ ವಿವಾಹ ಆಯೋಜಿಸುತ್ತಾ ಬರುತ್ತಿದ್ದಾರೆ.

ಬಂಗಾರಪ್ಪನವರಿಗೆ ಬಹಳ ಹತ್ತಿರದವರಾಗಿದ್ದ ಶಿವಳ್ಳಿ ಕೆಸಿಪಿ(ಕರ್ನಾಟಕ ಕಾಂಗ್ರೆಸ್‌ ಪಾರ್ಟಿ) ಅಭ್ಯರ್ಥಿಯಾಗಿ 1994ರಲ್ಲಿ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿ, 19 ಸಾವಿಕ್ಕೂ ಅಧಿಕ ಮತ ಪಡೆದರೂ ತಮ್ಮದೇ ಊರಿನ ಅಭ್ಯರ್ಥಿ ಎದುರು ಸೋಲುಂಡರು.

1999ರಲ್ಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಯತ್ನಿಸಿದರೂ ಟಿಕೆಟ್‌ ಸಿಗಲಿಲ್ಲ. ಈ ಸಂದರ್ಭದಲ್ಲಿ ಬಂಗಾರಪ್ಪನವರ ಸಲಹೆ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ‘ಹಣ ಇಲ್ಲ, ನೀವೇ ನನಗೆ ನೋಟು, ವೋಟ್‌ ಭಿಕ್ಷೆ ಹಾಕಿ’ ಅಂತ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು. ಕ್ಷೇತ್ರದ 84 ಹಳ್ಳಿಗಳಲ್ಲೂ ಜನ ತಮ್ಮದೇ ದುಡ್ಡು ಖರ್ಚು ಮಾಡಿ ಪ್ರಚಾರ ಮಾಡಿದರು. ಅಂತೂ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

2004ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲ. ಬಳಿಕ 2008ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿ, 6 ಸಾವಿರ ಮತಗಳ ಅಂತರದಿಂದ ಸೋತರು. 2013ರಲ್ಲಿ ಮತ್ತೆ ಟಿಕೆಟ್‌ ಗಿಟ್ಟಿಸಿ ಸ್ಪರ್ಧಿಸಿರು. ಈ ಸಂದರ್ಭದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಕಾರಣಕ್ಕೆ ಶಿವಳ್ಳಿ ಅವರು 25 ಸಾವಿರ ಮತಗಳ ಅಂತರದಿಂದ ಗೆಲವು ದಾಖಲಿಸಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2018ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಜಯಗಳಿಸಿದರು. ಇದೀಗ ಸಂಪುಟ ದರ್ಜೆ ಸಚಿವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT