ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಸ್.ಶಿವಳ್ಳಿ ಮೂರ್ತಿ ಅನಾವರಣ

Last Updated 21 ಮಾರ್ಚ್ 2022, 4:14 IST
ಅಕ್ಷರ ಗಾತ್ರ

ಕುಂದಗೋಳ: ಅಧಿಕಾರ ಇರಲಿ, ಇಲ್ಲದಿರಲಿ ದಿ.ಸಿ.ಎಸ್. ಶಿವಳ್ಳಿ ಅವರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಅವರು ಆದರ್ಶ ರಾಜಕಾರಣಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ದಿ.ಸಿ.ಎಸ್. ಶಿವಳ್ಳಿ ಅವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಅವರ ಸ್ವಗ್ರಾಮವಾದ ಯರಗುಪ್ಪಿಯಲ್ಲಿ ಅವರ ಮೂರ್ತಿಯನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಉದ್ಘಾಟಿಸಿ ಮಾತನಾಡಿದರು.

ದೇವರು ಹಣೆಬರಹ ಬರೆಯುವುದಿಲ್ಲ ಅದನ್ನು ನಾವು ರೂಪಿಸಿಕೊಳ್ಳಬೇಕು ಎನ್ನುವುದಕ್ಕೆ ಶಿವಳ್ಳಿ ಅವರೇ ನಿದರ್ಶನ. ಅವರು ಒಂದು ಸಣ್ಣ ರೈತ ಕುಟುಂಬದಲ್ಲಿ ಜನಿಸಿ ಒಳ್ಳೆಯ ಸಿದ್ಧಾಂತಗಳನ್ನು ಇಟ್ಟುಕೊಂಡು ಸಮಾಜದ ಏಳಿಗೆಗಾಗಿ ದುಡಿದರು. ಸದಾ ಜನರ ಮನದಲ್ಲಿ ನೆಲೆಸಿದ್ದಾರೆ ಎನ್ನುವುದಕ್ಕೆ ಇಲ್ಲಿ ಸೇರಿರುವ ಅಪಾರ ಸಂಖ್ಯೆಯ ಅಭಿಮಾನಿಗಳೇ ಸಾಕ್ಷಿ ಎಂದರು.

ವಿಧಾನ ಪರಿಷತ್ತಿನ ಸಭಾಪತಿಯಾದ ಬಸವರಾಜ ಹೊರಟ್ಟಿ ಮಾತನಾಡಿ, ‘ಜೀವನದಲ್ಲಿ ಅಧಿಕಾರ ಬರುತ್ತೆ ಹೋಗುತ್ತೆ ಆದರೆ, ಜನರೊಂದಿಗೆ ಇರುವುದು ಮುಖ್ಯ. ಅದರಂತೆ ಶಿವಳ್ಳಿ ಅವರು ನಡೆದುಕೊಂಡಿದ್ದರು. ಅವರ ಪತ್ನಿ ಕುಸುಮಾವತಿ ಈಗ ಶಾಸಕಿಯಾಗಿದ್ದು, ಅವರಿಂದಲೂ ಉತ್ತಮ ಕೆಲಸಗಳಾಗಲಿ’ ಎಂದು ಹಾರೈಸಿದರು.

ಶಿವಳ್ಳಿ ಅವರ ಧರ್ಮಪತ್ನಿಯಾದ, ಶಾಸಕಿ ಕುಸುಮಾವತಿ ಸಿ.ಶಿವಳ್ಳಿ ಮಾತನಾಡಿ, ‘ನನ್ನ ಪತಿ ಅವರು ನಡೆದ ದಾರಿಯಲ್ಲಿ ನಾನು ನಡೆಯುತ್ತೇನೆ. ಅವರು ಬಿಟ್ಟುಹೋಗಿರುವ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ಹೇಳಿದರು.

ಜನಸಾಮಾನ್ಯರ ಜೊತೆ ಹೇಗೆ ಬೇರೆಯಬೇಕು ಎಂದು ನಾವೆಲ್ಲರೂ ದಿ.ಸಿ.ಎಸ್.ಶಿವಳ್ಳಿ ಅವರಿಂದ ಪಾಠ ಕಲಿಯಬೇಕು ಎಂದು ಹಾನಗಲ್ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಮಾನೆ ಅವರು ಹೇಳಿದರು.

ಮಾಜಿ ಶಾಸಕರಾದ ಎನ್.ಎಚ್. ಕೋನರೆಡ್ಡಿ, ಎಂ.ಎಸ್. ಅಕ್ಕಿ, ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ವೀರಣ್ಣ ಮತ್ತಿಕಟ್ಟಿ, ಪ್ರಕಾಶ್ ರಾಥೋಡ್, ದೀಪಕ್ ಚಿಂಚೋಳಿ, ಶಾಸಕರಾದ ಪ್ರಸಾದ್ ಅಬ್ಬಯ್ಯ ಇನ್ನೂ ಅನೇಕರು ಮಾತನಾಡಿದರು.

ಮುಕ್ತಿ ಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕುಂದಗೋಳ ಕಲ್ಯಾಣಪುರ ಬಸವಣ್ಣಜ್ಜನವರು, ಬೆಳಗಾವಿ ಮುಕ್ತಿ ಮಠದ ಶಿವಯೋಗೇಶ್ವರ ಸ್ವಾಮೀಜಿ, ಮನಸೂರದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಅರವಿಂದ ಕಟಗಿ, ಜಗದೀಶ್ ಉಪ್ಪಿನ, ಅಡಿಯಪ್ಪ ಶಿವಳ್ಳಿ, ಮುತ್ತು ಶಿವಳ್ಳಿ, ಷಣ್ಮುಖಪ್ಪ ಶಿವಳ್ಳಿ, ಅಮರಶಿವ.ಸಿ.ಶಿವಳ್ಳಿ, ಬಾಬಣ್ಣ ಬೆಟಿಗೇರಿ, ಸಿದ್ದಪ್ ಹುಣಸೆಣ್ಣವರ್, ದಯಾನಂದ್ ಕುಂದೂರ್, ಸಕ್ರು ಲಮಾಣಿ, ವಿಜಯಾನಂದ ಹಾಲಿ,ಉಮೇಶ ಹೆಬಸೂರ, ಸುರೇಶ್ ಸವಣೂರ, ಚಂದ್ರಶೇಖರ್ ಜುಟ್ಟಲ್, ಜಿ.ಡಿ. ಘೋರ್ಪಡೆ ಹಾಗೂ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ದಿ.ಸಿ.ಎಸ್ .ಶಿವಳ್ಳಿಯವರ ಪುಣ್ಯಸ್ಮರಣೆ ಅಂಗವಾಗಿ ಅವರ ಅಭಿಮಾನಿಗಳ ಬಳಗದಿಂದ 100ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT